ಸಂಪತ್‌ ತರೀಕೆರೆ

ಕನ್ನಡಪ್ರಭ ವಾರ್ತೆ ಬೆಂಗಳೂರುಮಹಾಪುರುಷರ ಆದರ್ಶಗಳು, ತತ್ವಗಳು ಅರಿತುಕೊಂಡು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಯುವ ಸಮಾಜ ಮುಂದಾಗಬೇಕೆಂಬ ಉದ್ದೇಶದಿಂದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಬ್ರಹ್ಮಶ್ರೀ ನಾರಾಯಣಗುರು ಸೇರಿ ಮೂವರು ಮಹಾತ್ಮರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಯೋಜನೆ ಕೈಗೆತ್ತಿಕೊಂಡಿದೆ.ಮಹಾತ್ಮರ ಕೃತಿಗಳಲ್ಲಿರುವ ಜ್ಞಾನವನ್ನು ಅರಿತು ಯುವಜನತೆ ಸಮಾಜಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕು. ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಅದಕ್ಕಾಗಿ ಮಹಾತ್ಮರ ಆದರ್ಶ, ತತ್ವ, ಸಿದ್ಧಾಂತಗಳ ಒಳಸಾರವನ್ನೊಳಗೊಂಡ ಅನ್ಯಭಾಷೆಯಲ್ಲಿರುವ ಕೃತಿಗಳನ್ನು ಕನ್ನಡಕ್ಕೆ ತರುವ ಕೆಲಸಕ್ಕೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕೈಹಾಕಿದೆ. ಅದಕ್ಕಾಗಿ ಒಂದು ಕೋಟಿ ರು.ವೆಚ್ಚ ಮಾಡಲು ಯೋಜಿಸಿದೆ.ತಮಿಳುನಾಡಿನ ಸಮಾಜ ಸುಧಾರಕ, ವೈಚಾರಿಕ ಚಿಂತಕ ಮತ್ತು ದ್ರಾವಿಡ ಚಳವಳಿಯ ಪಿತಾಮಹ ಪೆರಿಯಾರ್ ಇ.ವಿ.ರಾಮಸ್ವಾಮಿ, ಮಹಾರಾಷ್ಟ್ರದ ದಲಿತ ಮತ್ತು ಮಹಿಳಾ ಶಿಕ್ಷಣದ ಹರಿಕಾರ ಜ್ಯೋತಿ ಬಾ ಪುಲೆ, ಕೇರಳದ ತತ್ವಜ್ಞಾನಿ, ಸಮಾಜ ಸುಧಾರಕ ನಾರಾಯಣಗುರು ಅವರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ ಸಂಪುಟಗಳನ್ನು ಹೊರತರಲು ಸಮಿತಿಗಳನ್ನು ರಚನೆ ಮಾಡಲಾಗಿದೆ.ಸಂಪಾದಕ ಮಂಡಳಿ ರಚನೆ:ಪೆರಿಯಾರ್‌ ಅವರ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಪ್ರಕಟಿಸುವ ಸಂಪಾದಕ ಮಂಡಳಿಯಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರು ಪ್ರಧಾನ ಸಂಪಾದಕರಾಗಿದ್ದಾರೆ. ಸದಸ್ಯರಾಗಿ ಡಾ। ಸಿ.ರಾಮಸ್ವಾಮಿ, ಪ್ರೊ.ಎಸ್‌.ಕಾರ್ಲೋಸ್‌ ಇದ್ದಾರೆ. ಅಂದಾಜು ₹50 ಲಕ್ಷ ವೆಚ್ಚದಲ್ಲಿ ನಾಲ್ಕು ಸಂಪುಟಗಳನ್ನು ಒಟ್ಟು ಒಂದು ಸಾವಿರ ಪುಟಗಳಲ್ಲಿ ಪ್ರಕಟಿಸಲು ಯೋಜಿಸಲಾಗಿದೆ.ಅದೇ ರೀತಿಯಲ್ಲಿ ಜ್ಯೋತಿಬಾ ಪುಲೆ ಅವರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುವ ಯೋಜನೆಯಲ್ಲಿ ಪ್ರಾಧಿಕಾರದ ಅಧ್ಯಕ್ಷರು ಪ್ರಧಾನ ಸಂಪಾದಕರಾಗಿ ಇರಲಿದ್ದು, ಜೆ.ಪಿ.ದೊಡ್ಡಮನಿ, ಡಾ। ಸಿ.ಎಸ್‌.ಚೌಗಲೆ ಸಂಪಾದಕ ಮಂಡಳಿ ಸದಸ್ಯರಾಗಿದ್ದಾರೆ. ಸುಮಾರು ₹34 ಲಕ್ಷ ವೆಚ್ಚದಲ್ಲಿ 3 ಸಂಪುಟಗಳನ್ನು ಒಟ್ಟು 900 ಪುಟಗಳಲ್ಲಿ ಪ್ರಕಟಿಸಲು ಯೋಜಿಸಲಾಗಿದೆ. ಬ್ರಹ್ಮಶ್ರೀ ನಾರಾಯಣಗುರುಗಳ ಕೃತಿಗಳನ್ನು ಪ್ರಕಟಿಸುವ ಸಂಪಾದಕ ಮಂಡಳಿಯಲ್ಲಿ ಮುದ್ದುಮೂಡು ಬೆಳ್ಳೆ, ಪಾರ್ವತಿ ಐತಾಳ್‌ ಅವರು ಸದಸ್ಯರಾಗಿದ್ದಾರೆ. ಅಂದಾಜು ₹12 ಲಕ್ಷ ವೆಚ್ಚದಲ್ಲಿ 2 ಸಂಪುಟಗಳನ್ನು ಒಟ್ಟು 300 ಪುಟಗಳಲ್ಲಿ ಪ್ರಕಟಿಸಲಾಗುತ್ತಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ। ಚನ್ನಪ್ಪ ಕಟ್ಟಿ ಅವರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.ಈಗಾಗಲೇ ಮೂವರು ಮಹನೀಯರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಶೀಘ್ರದಲ್ಲೇ ಪ್ರಕಟಿಸುವ ಗುರಿ ಹೊಂದಲಾಗಿದೆ. ಈ ಹಿಂದೆ ಪ್ರಾಧಿಕಾರದಿಂದ ಡಾ। ಬಿ.ಆರ್‌.ಅಂಬೇಡ್ಕರ್‌, ಬಾಬು ಜಗಜೀವನರಾಂ ಸೇರಿ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದು, ಓದುಗರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಡಾ। ರಾಮಮನೋಹರ ಲೋಹಿಯಾ ಅವರ ಕೃತಿಗಳು ಕೂಡ ಕನ್ನಡಕ್ಕೆ ಭಾಷಾಂತರಗೊಂಡಿವೆ ಎಂದು ಹೇಳಿದರು.ಕೋಟ್‌..ಜ್ಞಾನ, ಸಾಂಸ್ಕೃತಿಕ ವಿನಿಮಯಕ್ಕೆ ಸಹಕಾರಿಅನ್ಯಭಾಷೆಗಳಲ್ಲಿರುವ ಮಹನೀಯರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವುದು ಮತ್ತು ಕನ್ನಡದ ಅತ್ಯುತ್ತಮ ಕೃತಿಗಳನ್ನು ವಿಶ್ವದ ಇನ್ನಿತರ ಭಾಷೆಗಳಿಗೆ ಭಾಷಾಂತರಿಸುವ ಮೂಲಕ ಕನ್ನಡ ಸಾರಸ್ವರ ಲೋಕವನ್ನು ಇನ್ನಷ್ಟು ಶ್ರೀಮಂತಗೊಳಿಸುವ ಉದ್ದೇಶದಿಂದಲೇ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ. ಅನುವಾದವು ಜ್ಞಾನ, ಸಾಂಸ್ಕೃತಿಕ ವಿನಿಮಯ ಮತ್ತು ಭಾಷೆಯ ಶ್ರೀಮಂತಿಕೆಗೆ ಅತ್ಯಗತ್ಯ.- ಡಾ। ಚನ್ನಪ್ಪ ಕಟ್ಟಿ, ಅಧ್ಯಕ್ಷ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ.