ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ಭೂ ಸ್ವಾಧೀನ ಪ್ರಕ್ರಿಯೆ ವಿರುದ್ಧ ಕಾನೂನು ಹೋರಾಟ ನಡೆಸಿ ಗೆಲ್ಲಲು ಬೇಕಾದ ಎಲ್ಲ ಅಂಕಿ ಅಂಶಗಳು ಇವೆ. ರಾಜ್ಯ ಸರ್ಕಾರವನ್ನು ಕಾನೂನು ಮಾತ್ರವಲ್ಲದೆ ರೈತ ಚಳವಳಿಯನ್ನು ಮತ್ತಷ್ಟು ಗಟ್ಟಿಗೊಳಿಸಿ ಆ ಮೂಲಕವೂ ಮಣಿಸಲು ಅಣಿಯಾಗಬೇಕಿದೆ ಎಂದು ಬೈರಮಂಗಲ ಕಂಚುಗಾರನಹಳ್ಳಿ ಗ್ರಾಪಂ ರೈತರ ಭೂ ಹಿತರಕ್ಷಣಾ ಸಂಘ ನಿರ್ದೇಶಕ ಪ್ರಕಾಶ್ ಕರೆ ನೀಡಿದರು.
ಬೈರಮಂಗಲ ಕ್ರಾಸ್ ನಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯ ಮುಂಭಾಗದಲ್ಲಿ ನಡೆದ ಭೂ ಸ್ವಾಧೀನ ವಿರುದ್ಧ ಐತಿಹಾಸಿಕ ಹೋರಾಟದ ನೆನಪು-ರೈತರ ಹೋರಾಟದ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮುಂದುವರಿಸಿದರೆ ಸರ್ಕಾರ ಮಣಿಯುವಂತೆ ಕಾಣುತ್ತಿಲ್ಲ. ಆದ್ದರಿಂದ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಬಿಸಿ ಮುಟ್ಟಿಸು ರೀತಿಯಲ್ಲಿ ರೈತ ಚಳವಳಿ ಗಟ್ಟಿಗೊಳಿಸಬೇಕಿದೆ ಎಂದರು.ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನಾ, ಸಣ್ಣ ನೀರಾವರಿ ಇಲಾಖೆಯಿಂದ ಬೇಕಾದ ಅಂಕಿ ಅಂಶಗಳನ್ನು ಪಡೆದು ಕಾನೂನು ಹೋರಾಟ ನಡೆಸಲು ಸಿದ್ಧರಾಗಿದ್ದೇವೆ. ಇದರ ಜೊತೆಗೆ ರೈತರು ಬಿಸಿಲು ಮಳೆಯನ್ನು ಲೆಕ್ಕಿಸದೆ ಭೂಮಿ ಉಳಿಸಿಕೊಳ್ಳಲು ಹೋರಾಟದಲ್ಲಿ ಭಾಗಿಯಾಗುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ರೈತರಲ್ಲಿ ಹೋರಾಟದ ಕಿಚ್ಚು ಹೆಚ್ಚಾಗಲಿ:ಎರಡು ರಾಷ್ಟ್ರೀಯ ಹೆದ್ದಾರಿ ಮತ್ತು ಎರಡು ಕೈಗಾರಿಕಾ ಪ್ರದೇಶಗಳ ಮಧ್ಯೆ ಫಲವತ್ತಾದ ಕೃಷಿ ಭೂಮಿ ಇದ್ದು, ಹತ್ತಾರು ಕೋಟಿ ಬೆಲೆ ಬಾಳುತ್ತದೆ. ಮನೆ ಬಳಿಯಿರುವ ಭೂಮಿ ಕಳೆದುಕೊಂಡು ಬೇರೆ ಕಡೆ ಭೂಮಿ ಖರೀದಿಸಿ ಕೃಷಿ ಮಾಡುತ್ತೇವೆ ಎಂಬುದು ಮೂರ್ಖತನ. ಈಗ 6/1 ಮುಂದೂಡಿದ್ದಾರೆ ಎಂದಾಕ್ಷಣ ನಾವು ಹೋರಾಟದಲ್ಲಿ ಗೆದ್ದಿದೆ ಅಂತ ಯಾರೂ ಭಾವಿಸಬಾರದು. ಆ 6/1 ಜಾರಿಯಾಗದಂತೆ ತಡೆಯಲು ಹೋರಾಟವನ್ನು ತೀವ್ರಗೊಳಿಸಬೇಕಿದೆ. ರೈತರಲ್ಲಿ ಹೋರಾಟದ ಕಿಚ್ಚು ಹೆಚ್ಚಾದಾಗ ಮಾತ್ರ ಸರ್ಕಾರ ಈ ಯೋಜನೆಯನ್ನು ಕೈಬಿಡಲಿದೆ ಎಂದು ತಿಳಿಸಿದರು.
ಟೌನ್ ಶಿಪ್ ವಿಚಾರವಾಗಿ ಶಾಸಕರು ಇಲ್ಲಿವರೆಗೂ ರೈತರನ್ನು ಕರೆದು ಮಾತನಾಡಿಲ್ಲ. ನಾವಾಗಿ ನಾವು ಭೇಟಿಯಾಗಿ ಮನವಿ ಸಲ್ಲಿಸಿದಾಗ ಸರ್ಕಾರದೊಂದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು. ಮೂರು ಅಧಿವೇಶನ ಮುಗಿದರೂ ಚರ್ಚೆ ಮಾಡಿಲ್ಲ. ವಿಪಕ್ಷಗಳ ನಾಯಕರು ರಾಜಕೀಯ ಕಾರಣಕ್ಕೆ ಬಂದು ಹೋದರೇ ವಿನಾಃ ಅವರೂ ಸಹ ಧ್ವನಿ ಎತ್ತುತ್ತಿಲ್ಲ ಎಂದು ಪ್ರಕಾಶ್ ಬೇಸರ ವ್ಯಕ್ತಪಡಿಸಿದರು.
ರೈತರ ಬದುಕು ಸರ್ವನಾಶದತ್ತ:
ರೖತಸಂಘ ರಾಜ್ಯ ಉಪಾಧ್ಯಕ್ಷ ಮಲ್ಲಯ್ಯ ಮಾತನಾಡಿ, ಕೃಷಿಕರು ಮನೆ ಮಠ ಬಿಟ್ಟು ಭೂಮಿ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿರುವುದನ್ನು ನೋಡಿದರೆ ರಾಜ್ಯ ಸರ್ಕಾರ ಪಂಚೇಂದ್ರಿಯಗಳನ್ನು ಕಳೆದುಕೊಂಡಂತಿದೆ.ಒಂದು ವರ್ಷದಿಂದ ಹೋರಾಟ ನಡೆಯುತ್ತಿದ್ದರು ವಿಧಾನಸೌಧಕ್ಕೆ ಕೇಳಿಸದಿರುವುದು ವಿಪರ್ಯಾಸ ಎಂದರು.
ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಕುಡಿಯುವ ನೀರಿಗೂ ಹೋರಾಟ ಮಾಡುವ ಸ್ಥಿತಿ ಬಂದಿದೆ. ಈ ಹಿಂದೆ ಪಂಚಾಯತ್ ರಾಜ್ ಸಚಿವರಾಗಿದ್ದ ದಿ.ನಜೀರ್ ಸಾಬ್ ರವರು ಪ್ರತಿ ಹಳ್ಳಿಗಳಿಗೆ ಬೋರ್ ವೆಲ್ ಹಾಕಿಸಿದರು. ಈಗಿನ ಸರ್ಕಾರ ಪ್ರತಿ ಹಳ್ಳಿಗಳಲ್ಲಿ ಬಾರ್ ಗಳನ್ನು ತೆರೆಯುತ್ತಿದೆ. ರೈತರ ಬದುಕನ್ನು ಹಸನಗೊಳಿಸುವ ಬದಲು ಸರ್ವ ನಾಶ ಮಾಡಲು ಸರ್ಕಾರ ಪಣತೊಟ್ಟಿ ನಿಂತಂತಿದೆ. ರೈತ ಚಳವಳಿಗಳನ್ನು ವಿಂಗಡಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು. ರೈತರಿಗೆ ಕೃಷಿ ಬಿಟ್ಟು ಬೇರೇನೂ ಗೊತ್ತಿಲ್ಲ. ಆದ್ದರಿಂದ ಭೂಮಿ ಕಳೆದುಕೊಳ್ಳುತ್ತಿರುವ ಪ್ರತಿ ಹಳ್ಳಿಯ ರೖೆತರು ಚಳವಳಿಯಲ್ಲಿ ಭಾಗಿಯಾಗಬೇಕು. ಆ ಮೂಲಕ ಚಳವಳಿಯನ್ನು ಗಟ್ಟಿಗೊಳಿಸಬೇಕಿದೆ. ಸರ್ಕಾರ ಭೂಮಿ ಕಸಿದುಕೊಂಡು ರೈತರನ್ನು ಎಲ್ಲಿಗೆ ಕಳುಹಿಸುತ್ತದೆ ಎಂದು ಮಲ್ಲಯ್ಯ ಪ್ರಶ್ನಿಸಿದರು.ರೈತ ಹೋರಾಟಗಳು ಸೋತ ಉದಾಹರಣೆ ಇಲ್ಲ :
ರೈತಸಂಘ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ನಮ್ಮ ಅನ್ನ, ನೀರು , ತೆರಿಗೆ ಹಣದಲ್ಲಿ ಸಂಬಳ ಪಡೆಯುತ್ತಿರುವವರು, ನಮ್ಮಿಂದ ಆಯ್ಕೆಯಾಗಿ ಹೋದ ಜನಪ್ರತಿನಿಧಿಗಳು ರೈತರು ಕೃಷಿ ಬಿಟ್ಟು ಭೂಮಿ ಉಳಿಸಿಕೊಳ್ಳಲು ಬೀದಿಯಲ್ಲಿ ಕೂರುವಂತೆ ಮಾಡಿದ್ದಾರೆ. ಅವರಿಗೆಲ್ಲ ಉಗಿಯುವ ಚಳವಳಿ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.ಭಾರತ ಕೃಷಿ ಪ್ರಧಾನ ದೇಶ. ಕೃಷಿಗೆ ಒತ್ತು ನೀಡಬೇಕೆ ಹೊರತು ಕೈಗಾರಿಕೆಗಳಿಗೆ ಅಲ್ಲ. ನಗರೀಕರಣ ಬೆಳೆದಂತೆ ಹಳ್ಳಿಗಳು ನಾಶವಾಗುತ್ತಿವೆ. ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ಇಲ್ಲಿವರೆಗೆ ಯಾವ ರೈತ ಹೋರಾಟಗಳು ಸೋತ ಉದಾಹರಣೆಯೇ ಇಲ್ಲ. ರೈತರು ತಾತ್ಸಾರ ಮನೋಭಾವನೆ ಬಿಟ್ಟು ಚಳವಳಿಯನ್ನು ಗಟ್ಟಿಗೊಳಿಸಬೇಕು. ಆಗ ಮಾತ್ರ ವಿಧಾನಸೌಧದ ಬಾಗಿಲು ತಟ್ಟುತ್ತದೆ. ಆದ್ದರಿಂದ ಚಳವಳಿ ದಿಕ್ಕನ್ನು ಬದಲಿಸಿ ಸರ್ಕಾರದ ಗಮನ ಸಳೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೋರಾಟಗಾರರು ಚಳವಳಿ ಒಂದು ವರ್ಷ ಪೂರೈಸಿ ಮುನ್ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಒಳ್ಳೆಯ ಬುದ್ಧಿ ನೀಡಲೆಂದು ಪ್ರಾರ್ಥಿಸಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ರೈತಸಂಘ ಜಿಲ್ಲಾಧ್ಯಕ್ಷ ಕೃಷ್ಣಯ್ಯ, ತಾಲೂಕು ಅಧ್ಯಕ್ಷ ಶಿವರಾಜು, ಸಂಘದ ಕಾರ್ಯದರ್ಶಿ ಶ್ರೀನಿವಾಸ್, ಮುಖಂಡರಾದ ಚಂದ್ರಶೇಖರ್, ರಾಜಶೇಖರ್, ಮುತ್ತಣ್ಣ, ಪ್ರಕಾಶ್, ಜಯಮ್ಮ, ಭಾಗ್ಯಮ್ಮ, ಸುಮಾ, ಚೈತ್ರ ಮತ್ತಿತರರು ಹಾಜರಿದ್ದರು.
ಕೋಟ್ ...............ಬಿಡದಿ ಟೌನ್ ಶಿಪ್ ಯೋಜನೆ ವಿರುದ್ಧ ನಡೆಯುತ್ತಿರುವ ಹೋರಾಟ ಜೀವಂತವಾಗಿರಲು ಕನ್ನಡ, ದಲಿತ, ಕಾರ್ಮಿಕ, ಮಹಿಳಾ ಸಂಘಟನೆಗಳ ಬೆಂಬಲ ಕಾರಣ. ರೈತರಿಗೆ ತಮ್ಮ ಭೂಮಿ ಮೇಲೆ ಹಕ್ಕು ಇಲ್ಲದಂತಾಗಿದೆ. ಜನಪ್ರತಿನಿಧಿಗಳು ಅವರಪ್ಪನ ಆಸ್ತಿಯಂತೆ ದರ ನಿಗದಿ ಮಾಡುತ್ತಿದ್ದಾರೆ. ರೈತರ ಮನೆ ಹಾಳು ಮಾಡಿ ರಾಜಕಾರಣಿಗಳು ತಮ್ಮ ಮನೆ ಉದ್ಧಾರ ಮಾಡಿಕೊಳ್ಳುತ್ತಿದ್ದಾರೆ.
- ಎಂ.ಆರ್.ನಾಗರಾಜು, ಖಜಾಂಚಿ, ಬೈರಮಂಗಲ ಕಂಚುಗಾರನಹಳ್ಳಿ ಗ್ರಾಪಂಗಳ ರೖತರ ಭೂ ಹಿತರಕ್ಷಣಾ ಸಂಘ11ಕೆಆರ್ ಎಂಎನ್ 1.ಜೆಪಿಜಿ
ಬೈರಮಂಗಲ ಕ್ರಾಸ್ ನಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯ ಮುಂಭಾಗದಲ್ಲಿ ನಡೆದ ಭೂ ಸ್ವಾಧೀನ ವಿರುದ್ಧ ಐತಿಹಾಸಿಕ ಹೋರಾಟದ ನೆನಪು - ರೈತರ ಹೋರಾಟದ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪ್ರಕಾಶ್ ಮಾತನಾಡಿದರು.-----------------------------