- ಕಮಲಾಪುರದಲ್ಲಿ ಬೀರಲಿಂಗೇಶ್ವರ ದೇವಸ್ಥಾನ, ಸಮುದಾಯ ಭವನ, ಭೋಜನಾಲಯ ಉದ್ಘಾಟನೆ
- - -ಕನ್ನಡಪ್ರಭ ವಾರ್ತೆ ಹರಿಹರ
ಹಾಲುಮತ ಸಮಾಜ ಹಾಲಿನಂತಹ ಸಮಾಜವಾಗಿದ್ದು, ಹಾಲಿಗೆ ಹುಳಿ ಹಿಂಡಿದರೆ ಮೊಸರಾಗುತ್ತದೆ. ಮೊಸರಿಗೆ ಕಡ್ಡಿಯಾಡಿಸಿದರೆ, ಬೆಣ್ಣೆಯಾಗುತ್ತದೆ. ಬೆಣ್ಣೆಗೆ ಬೆಂಕಿ ಹಚ್ಚಿದರೆ, ತುಪ್ಪವಾಗುತ್ತದೆ. ವಿಭೂತಿ-ಬಂಡಾರ ಭಕ್ತರೆಲ್ಲಾ ಸಾಮರಸ್ಯದಿಂದ ಬೀರಪ್ಪನನ್ನು ಪೂಜಿಸಿದರೆ ಸರ್ವರ ಸಂಕಷ್ಟಗಳು, ದುಃಖ-ದುಮ್ಮಾನಗಳು ದೂರವಾಗಿ, ಗ್ರಾಮ ಸಮೃದ್ಧಿಯಾಗುತ್ತದೆ ಎಂದು ಕಾಗಿನೆಲೆ ಕನಕ ಗುರು ಪೀಠದ ನಿರಂಜನಾನಂದಪುರಿ ಶ್ರೀ ಹೇಳಿದರು.ತಾಲೂಕಿನ ಕಮಲಾಪುರದಲ್ಲಿ ಗುರುವಾರ ₹3 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಬೀರಲಿಂಗೇಶ್ವರ ದೇವಸ್ಥಾನ, ಸಮುದಾಯ ಭವನ, ಭೋಜನಾಲಯ ಉದ್ಘಾಟನೆ, ಬೀರಲಿಂಗೇಶ್ವರ ಸ್ವಾಮಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಪ್ರತಿ ಗ್ರಾಮಗಳಲ್ಲಿ ಸರ್ವ ಜಾತಿ- ಜನಾಂಗದವರು ಇರುತ್ತಾರೆ. ಅವರೆಲ್ಲಾ ಪರಸ್ಪರ ಒಂದೇ ಕುಟುಂಬದವರಂತೆ ಬಾಳಿ ಬದುಕಿದಲ್ಲಿ, ಸರ್ವಜನಾಂಗದ ಶಾಂತಿಯ ತೋಟದಂತೆ ಗ್ರಾಮ ಕಾಣುತ್ತದೆ ಎಂದರು.
ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಬಸವ ಮೂರ್ತಿ ಮಾದಾರ ಚನ್ನಯ್ಯ ಶ್ರೀ ಆರ್ಶಿರ್ವಚನ ನೀಡಿದರು. ವಿವಿಧ ಗ್ರಾಮಗಳಿಂದ ಬಂದಿದ್ದ ಬೀರಲಿಂಗೇಶ್ವರ ದೇವರುಗಳ ಹಾಗೂ ಕಮಲಾಪುರ ಗ್ರಾಮದ ಈಶ್ವರ, ಚೌಡೇಶ್ವರಿ, ಆಂಜನೇಯ, ಬಸವೇಶ್ವರ, ಗಂಗಮ್ಮ ದೇವಿ, ಆಲಮರದ ಚೌಡಮ್ಮ ದೇವಿ, ದೇವರುಗಳ ಬೆತ್ತಗಳಿಂದ ನೂತನವಾಗಿ ಪ್ರತಿಷ್ಠಾಪಿತಗೊಂಡಿರುವ ಬೀರಲಿಂಗೇಶ್ವರ ದೇವರಿಗೆ ಯಜ್ಞ ಯಾಗಗಳೊಂದಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಿದರು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಸಮುದಾಯ ಭವನ, ಭೋಜನಾಲಯ ಉದ್ಘಾಟನೆ, ಅತಿಥಿ ಗೃಹ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೆರಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯುವ ಸಬಲಿಕರಣಕ್ಕಾಗಿ ಜಾರಿಗೆ ತರುತ್ತಿರುವ ಯೋಜನೆಗಳ ಲಾಭ ಪಡೆಯಬೇಕು. ಇತರರಿಗೆ ಅವುಗಳ ಮಹತ್ವ ತಿಳಿಸಲು ಮುಂದಾಗಬೇಕು. ನಿರುದ್ಯೋಗ ನಿವಾರಣೆಗೆ ಸ್ವಯಂ ಉದ್ಯೋಗ ಹೊಂದಲು ಸಹ ಮುಂದಾಗಬೇಕು ಎಂದು ತಿಳಿಸಿದರು.
ಇದೇ ಸಂದರ್ಭ ಉಪನ್ಯಾಸಕ ಕುಬೇಂದ್ರಪ್ಪ ಬಿ.ಎಸ್. ವಿರಚಿತ ಬೀರೇಶ್ವರ ಚರಿತೆ ಪುಸ್ತಕ ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಶಾಸಕರಾದ ಎಸ್. ರಾಮಪ್ಪ, ಎಚ್.ಎಸ್. ಶಿವಶಂಕರ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಸಿ.ಎನ್. ಹುಲಿಗೇಶ್, ಕುಂಬಳೂರು ವಿರೂಪಾಕ್ಷಪ್ಪ, ಕೆಡಿಪಿ ಸದಸ್ಯ ಮಲ್ಲೇಶಪ್ಪ ಬಿ.ಬಿ. ಕಾರ್ಯಕ್ರಮ ಕುರಿತು ಮಾತನಾಡಿದರು.ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಕೆ.ರೇವಣಪ್ಪ, ಅಧ್ಯಕ್ಷ ಬಿ.ಷಣ್ಮುಖಪ್ಪ, ಕಾರ್ಯರ್ದಶಿ ಕೆ.ದೊಡ್ಡಬಸಪ್ಪ ಮಾತನಾಡಿ, ದೇವಸ್ಥಾನ ನಿರ್ಮಾಣಕ್ಕಾಗಿ ಅಂದಾಜು ₹25 ಲಕ್ಷ, ಸಮುದಾಯ ಭವನ, ಭೋಜನಾಲಯ ನಿರ್ಮಾಣಕ್ಕೆ ಅಂದಾಜು ₹2.65 ಕೋಟಿ ಸೇರಿದಂತೆ ಒಟ್ಟು ಅಂದಾಜು ₹೩ ಕೋಟಿಗಳಲ್ಲಿ ಮುಜರಾಯಿ ಇಲಾಖೆ, ಶಾಸಕ, ಸಂಸದರ ಅನುದಾನ, ಸಮಾಜದ ಮುಖಂಡರ, ರಾಜಕೀಯ ಮುಖಂಡರ, ಗ್ರಾಮಸ್ಥರ ಆರ್ಥಿಕ ಸಹಾಯದಿಂದ ದೇವಸ್ಥಾನ, ಸಮುದಾಯ ಭವನ ನಿರ್ಮಿಸಲಾಗಿದೆ. ಈ ಸೇವೆಗೆ ಸಹಕರಿಸಿದ ಸರ್ವರಿಗೂ ಗ್ರಾಮಸ್ಥರ ಪರವಾಗಿ ಧನ್ಯವಾದ ತಿಳಿಸುತ್ತೆವೆ. ಅತಿಥಿ ಗೃಹ ನಿರ್ಮಾಣಕ್ಕಾಗಿ ಅಡಿಗಲ್ಲು ಹಾಕಲಾಗಿದ್ದು, ಆರ್ಥಿಕ ನೆರವು ನಿರೀಕ್ಷೆಯಲ್ಲಿದ್ದೆವೆ ಎಂದು ತಿಳಿಸಿದರು.
ನಿರ್ದೇಶಕರಾದ ನ್ಯಾಯವಾದಿ ಕೆ.ಚಂದ್ರಪ್ಪ, ರಾಮಪ್ಪ ಹುಲ್ಮನಿ, ಗ್ರಾಪಂ ಮಾಜಿ ಅಧ್ಯಕ್ಷೆ ಯಲ್ಲಮ್ಮ, ಹಾಲೇಶಪ್ಪ, ಉಪನ್ಯಾಸಕ ಕುಬೇಂದ್ರಪ್ಪ, ಗ್ರಾಮದ ಹಾಲುಮತ ಸಮಾಜ ಬಾಂಧವರು, ಸರ್ವ ಸಮಾಜಗಳ ಮುಖಂಡರು ಇದ್ದರು.- - -
-30ಎಚ್.ಆರ್.ಆರ್ 02:ಹರಿಹರ ತಾಲೂಕಿನ ಕಮಲಾಪುರದಲ್ಲಿ ಸರ್ವ ಸಮಾಜ ಬಾಂಧವರಿಂದ ಕಾಗಿನೆಲೆ ಕನಕ ಗುರು ಪೀಠದ ಶ್ರೀಗಳನ್ನು ಗೌರವಿಸಲಾಯಿತು.