- ಮುಸ್ಟೂರಲ್ಲಿ ರಾಜಗೋಪುರ ಪಂಚ ಕಳಸಾರೋಹಣ, ಗುಡ್ಡೆಕಲ್ಲು ಪ್ರತಿಷ್ಠಾಪನೆ, ಅಡ್ಡಪಲ್ಲಕ್ಕಿ

- - -

ಕನ್ನಡಪ್ರಭ ವಾರ್ತೆ ಜಗಳೂರು

ಪ್ರತಿಯೊಬ್ಬರೂ ಅಧ್ಯಾತ್ಮವನ್ನು ಅಳವಡಿಸಿಕೊಂಡು ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದು ಉಜ್ಜಿಯಿನಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ತಾಲೂಕಿನ ಮುಸ್ಟೂರು ಗ್ರಾಮದಲ್ಲಿ ಬುಧವಾರ ನಡೆದ ಶ್ರೀಗುರು ಮುಸ್ಟೂರೇಶ್ವರ ಸ್ವಾಮಿ ನೂತನ ರಾಜಗೋಪುರ ಪಂಚ ಕಳಸಾರೋಹಣ, ಪುಸ್ತಕ ಲೋಕಾರ್ಪಣೆ, ಗುಡ್ಡೆಕಲ್ಲು ಪ್ರತಿಷ್ಠಾಪನೆ ಹಾಗೂ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.


ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ ಭೂಮಿಯಲ್ಲಿ ಮುಕ್ಕೋಟಿ ದೇವರುಗಳಿದ್ದು, ಅವುಗಳಲ್ಲಿ ಶಿವನು ಶ್ರೇಷ್ಠನು. ಈಶ್ವರನು ಅನಂತ, ಸರ್ವೋಚ್ಚ ಮತ್ತು ಅಪ್ರತಿಮ ಗುಣಗಳನ್ನು ಹೊಂದಿರುವ ದೇವರಾಗಿದ್ದು, ಶಿವನಿಗೆ ಸಮಾನವಾದ ಶಕ್ತಿ ಅಥವಾ ದೇವರು ಯಾರೂ ಇಲ್ಲ ಎಂದು ಹೇಳಿದರು.

ಮುಸ್ಟೂರು ರುದ್ರಮುನಿ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಭಾರತೀಯ ಸನಾತನ ಧರ್ಮವು ತ್ಯಾಗ, ಭಕ್ತಿ ಮತ್ತು ಜ್ಞಾನ ಎಂಬ ತತ್ವಗಳ ಮೇಲೆ ನಿಂತಿದೆ. ನಾಡಿನಲ್ಲಿ ಭಕ್ತಿ ಮತ್ತು ಶರಣ ಪರಂಪರೆಗೆ ಅತ್ಯಂತ ಪವಿತ್ರ ಸ್ಥಾನವಿದೆ. ಅನೇಕ ಸಂತರು, ಶರಣರು, ದಾಸರು ಹಾಗೂ ತಪಸ್ವಿಗಳು ತಮ್ಮ ನಿಸ್ವಾರ್ಥ ಸೇವೆ ಮತ್ತು ತಪಸ್ಸಿನ ಮೂಲಕ ಸಮಾಜವನ್ನು ಜಾಗೃತಿಗೊಳಿಸಿದ್ದಾರೆ ಎಂದು ತಿಳಿಸಿದರು.

ಕಾನಮಡುಗು ಶ್ರೀ ಶರಣಬಸವೇಶ್ವರ ದಸೋಹ ಮಠದ ಧರ್ಮಾಧಿಕಾರಿ ಶ್ರೀ ಐಮಡಿ ಶರಣಾರ್ಯರು ಸಹ ಧಾರ್ಮಿಕ ಸಂದೇಶಗಳನ್ನು ನೀಡಿದರು. ಈ ಸಂದರ್ಭದಲ್ಲಿ ಜಿ.ಎನ್. ಪ್ರಶಾಂತ್ ಕುಮಾರ್ ರಚಿಸಿದ “ಮುಸ್ಟೂರೇಶ್ವರ ಸ್ವಾಮಿ ಮಹಾಚರಿತ್ರೆ” ಹಾಗೂ “ಭಕ್ತಿಗೀತೆಗಳ ಭಂಡಾರ” ಪುಸ್ತಕಗಳನ್ನು ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಮತ್ತು ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರು ಬಿಡುಗಡೆಗೊಳಿಸಿದರು.

ಅಡ್ಡಪಲ್ಲಕ್ಕಿ: ಮುಸ್ಟೂರೇಶ್ವರ ಸ್ವಾಮಿ ನೂತನ ರಾಜಗೋಪುರ ಪಂಚಕಳಸಾರೋಹಣದ ಅಂಗವಾಗಿ ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ ಬುಧವಾರ ಬೆಳಗ್ಗೆ ಮುಸ್ಟೂರು ಗ್ರಾಮದಲ್ಲಿ ಭಕ್ತಿಭಾವದಿಂದ ನಡೆಯಿತು. ಭಕ್ತರು ಭಜನ, ಜಯಘೋಷಗಳೊಂದಿಗೆ ಮಹೋತ್ಸವ ವೈಭವದಿಂದ ಆಚರಿಸಿದರು.

ಶಾಸಕ ಬಿ. ದೇವೇಂದ್ರಪ್ಪ, ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ಎಚ್.ಪಿ. ರಾಜೇಶ್, ಕೆಪಿಸಿಸಿ ಎಸ್ಟಿ ವಿಭಾಗದ ಮಾಜಿ ಅಧ್ಯಕ್ಷ ಕೆ.ಪಿ. ಪಾಲಯ್ಯ, ರಾಜಣ್ಣ ಸೇರಿದಂತೆ ಅನೇಕ ಗಣ್ಯರು ಮತ್ತು ಭಕ್ತರು ಉಪಸ್ಥಿತರಿದ್ದರು.

- - -

-30ಜೆ.ಜಿ.ಎಲ್.1:

ಮುಸ್ಟೂರಿನಲ್ಲಿ ಶ್ರೀಗುರು ಮುಸ್ಟೂರೇಶ್ವರ ಸ್ವಾಮಿ ನೂತನ ರಾಜಗೋಪುರ ಪಂಚಕಳಸಾರೋಹಣ ಅಂಗವಾಗಿ ಕಾಶಿ ಪೀಠದ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ನೆರವೇರಿತು.