ಸಾರಾಂಶ
ಮಾದಿಗ ಸಮುದಾಯದವರು ಸತತ ಹೋರಾಟ ನಡೆಸಿದರ ಫಲವಾಗಿ ಒಳ ಮೀಸಲಾತಿ ಜಾರಿಗೆ ಸಮೀಕ್ಷೆ ನಡೆಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ರಾಯಬಾಗ
ಒಳಮೀಸಲಾತಿಜಾರಿ ಸಂಬಂಧ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸುತ್ತಿದ್ದು, ಮಾದಿಗ ಸಮುದಾಯದವರು ಉಪಜಾತಿ ಕಾಲಂನಲ್ಲಿ ಮಾದಿಗ ಎಂದು ಮಾತ್ರ ಬರೆಸಬೇಕೆಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.ಪಟ್ಟಣದ ಶಾಸಕರ ಗೃಹಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಿಗ ಸಮುದಾಯವು ಅತ್ಯಂತ ಹಿಂದುಳಿದಿದೆ. ಸರ್ಕಾರಿ ಸವಲತ್ತು ಪಡೆಯುವಲ್ಲಿ ವಿಫಲವಾಗಿದೆ. ಮಾದಿಗ ಸಮುದಾಯದವರು ಸತತ ಹೋರಾಟ ನಡೆಸಿದರ ಫಲವಾಗಿ ಒಳ ಮೀಸಲಾತಿ ಜಾರಿಗೆ ಸಮೀಕ್ಷೆ ನಡೆಸಲಾಗುತ್ತಿದೆ. ಈ ಸಮೀಕ್ಷೆ ಬಳಿಕ ಸಿಗುವ ಅಂಕಿ ಅಂಶ ಆಧರಿಸಿ ಮೀಸಲಾತಿ ಪ್ರಮಾಣ ಸಿಗುವುದರಿಂದ, ಮಾದಿಗ ಸಮುದಾಯದವರು ಜಾತಿ ಕಾಲಂ ನಂ.61ರಲ್ಲಿ ಮಾದಿಗ ಎಂದು ಮಾತ್ರ ಬರೆಸಬೇಕೆಂದರು.
ನಿವೃತ್ತ ನ್ಯಾಯಮೂರ್ತಿ ಡಾ.ಎಚ್.ಎನ್.ನಾಗಮೋಹನದಾಸ ಅವರ ಏಕಸದಸ್ಯ ವಿಚರಣಾ ಆಯೋಗದ ನಿರ್ದೇಶನದಂತೆ ಪರಿಶಿಷ್ಟ ಜಾತಿ ಒಳ ಮೀಸಲಾತಿ ಉಪವರ್ಗೀಕರಣ ಸಮೀಕ್ಷಾ ಕಾರ್ಯ ಮೇ 17ರವರೆಗೆ ಮನೆಮನೆಗೆ ನಡೆಯುವ ಜಾತಿ ಸಮೀಕ್ಷೆಯಲ್ಲಿ ಪ್ರತಿಯೊಬ್ಬ ಮಾದಿಗ, ಮಾದರ ಸಮುದಾಯದವರು ಭಾಗವಹಿಸಬೇಕು. ಯಾವುದೇ ಗೊಂದಲ ಮಾಡಿಕೊಳ್ಳದೇ, ದಾಖಲೆಯಲ್ಲಿ ಏನೇ ಇದ್ದರೂ ಮತ್ತು ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂದ್ರ ಇದ್ದವರು ಕಡ್ಡಾಯವಾಗಿ ಜಾತಿ ಕಾಲಂ ನಂ.61 ರಲ್ಲಿ ಮಾದಿಗ ಎಂದೇ ನಮೂದಿಸಬೇಕು. ನಮ್ಮಜನಾಂಗದ ನಿಜವಾದ ದತ್ತಾಂಶ ತಿಳಿಯುವುದರಿಂದ ಹಕ್ಕು ಮತ್ತು ಸಾಮಾಜಿಕ ನ್ಯಾಯ ದೊರಕುತ್ತದೆ ಎಂದರು. ಮೇ 19ರಿಂದ 21ರವರೆಗೆ ವಿಶೇಷ ಶಿಬಿರ ಮತ್ತು 23ರವರೆಗೆ ಸ್ವಯಂ ಘೋಷಣೆ ಆನ್‌ಲೈನ್ ಮೂಲಕ ಜಾತಿ ಸಮೀಕ್ಷೆ ನಡೆಯಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಸವರಾಜ ಸನದಿ, ದೇವಾನಂದ ಸನದಿ, ಅಪ್ಪಾಸಾಬ ಕೆಂಗನ್ನವರ, ನೀಲಪ್ಪ ಐಹೊಳೆ, ರಾಜು ಮೈಶಾಳೆ, ಮಾದೇವ ಐಹೊಳೆ, ರಾವಸಾಬ ಮೆಗಾಡೆ, ಲವಪ್ಪ ಐಹೊಳೆ, ಸಂಜು ಮೈಶಾಳೆ, ಸುರೇಶ ಐಹೊಳೆ, ಸತ್ಯಪ್ಪದಾವನೆ, ಉಮೇಶ ಪೂಜೇರಿ, ಅಮರ ಸನದಿ, ರಾಜು ಐಹೊಳೆ, ರಘು ಅವಳೆ, ಮಾರುತಿದೊಡ್ಡಮನಿ, ರಾಕೇಶ ಅವಳೆ, ಮಾರುತಿಜಂಬಗಿ, ಮಾರುತಿ ಮಾಂಗ ಸೇರಿ ಅನೇಕರು ಇದ್ದರು.