- ಮೇಲ್ಚಾವಣಿ ಗಾರೆ ಬೀಳುತ್ತಿದೆ । ಮಳೆಗಾಲದಲ್ಲಿ ಶಾಲೆ ಆವರಣದಲ್ಲಿ 3-4 ಅಡಿ ನೀರು
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ಯಲೋದಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ ದನದ ದೊಡ್ಡಿಯಂತಾಗಿದ್ದು, ಶಾಲಾ ಕಟ್ಟಡ ಶಿಥಿಲಗೊಂಡಿದೆ. ವಿದ್ಯಾರ್ಥಿಗಳೇ ಶಾಲೆಗೆ ಹೋಗಲು ಭಯ ಪಡುವಂತಾಗಿದೆ ಎಂದು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪರಮೇಶ್ವರಪ್ಪ ತಿಳಿಸಿದ್ದಾರೆ.ಕಳೆದ ವರ್ಷದ ಮಳೆಗಾಲದಲ್ಲಿಯೇ ಶಾಲೆಯ ಕಾಂಪೌಂಡ್ ಗೋಡೆ ಬಿದ್ದುಹೋಗಿದೆ. ಇದರಿಂದ ಮಳೆನೀರು ಶಾಲೆ ಆವರಣದಲ್ಲೆಲ್ಲಾ 3ರಿಂದ 4 ಅಡಿಗಳವರೆಗೆ ನೀರು ನಿಂತಿರುತ್ತದೆ. ಶಾಲಾ ದುರಸ್ತಿ ಮಾಡುವ ಬಗ್ಗೆ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕರು, ತಹಸೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಆದರೂ ಶಾಲಾ ಕಟ್ಟಡ ದುರಸ್ತಿ ಕಾಣದೇ ಮೇಲ್ಚಾವಣಿಯ ಗಾರೆ ಕಳಚಿ ಬೀಳುತ್ತಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಭಯ ಉಂಟಾಗಿದೆ ಎಂದು ಶಾಲೆ ಕಟ್ಟಡದ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದರು.
ಯಲೋದಹಳ್ಳಿ ಗ್ರಾಮದಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದು ತುಂಬಾ ಬಡತನದ ಸ್ಥಿತಿಯಲ್ಲಿ ವಾಸ ಮಾಡುವಂತಹ ಬಡಜನರ ಮಕ್ಕಳೇ ಇಲ್ಲಿ ಕಲಿಯುತ್ತಿದ್ದಾರೆ. ಅಧಿಕಾರಿಗಳು ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ವೇದಿಕೆಗಳ ಭಾಷಣದಲ್ಲಿ ಹೇಳುತ್ತಾರೆ. ಈ ಗ್ರಾಮದ ಶಾಲೆಯ ಸ್ಥಿತಿಯನ್ನು ನೋಡಿದರೆ ಬಡತನದ ಮಕ್ಕಳನ್ನೂ ಕೂಡ ಸರ್ಕಾರಿ ಶಾಲೆಗೆ ಕಳಿಸಬಾರದು ಎನ್ನುವ ಸ್ಥಿತಿಗೆ ತಲುಪಿದೆ. ಶೀಘ್ರವೇ ಶಾಲಾ ದುರಸ್ತಿ ಮಾಡದಿದ್ದರೆ ಈ ಶಾಲೆಯಲ್ಲಿನ ಮಕ್ಕಳು ಬೇರೆ ಶಾಲೆಗೆ ಹೋಗುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷದಿಂದ ಸರ್ಕಾರಿ ಶಾಲೆ ಅವನತಿಯತ್ತ ಸಾಗುತ್ತಿರುವುದು ಈ ಗ್ರಾಮದ ಬಡಜನರ ದೌಭಾಗ್ಯವಾಗಿದೆ ಎಂದು ಗ್ರಾಮಸ್ಥರಾದ ವೆಂಕಟೇಶ್, ಶಶಿಕುಮಾರ್ ಮನ ನೊಂದು ಹೇಳುತ್ತಾರೆ.
ಈ ಶಾಲೆಯಲ್ಲಿ ಆಸಕ್ತಿಯಿಂದ ಪಾಠ ಮಾಡುವ ಶಿಕ್ಷಕರು ಇದ್ದರು ಸಹಾ ಶಾಲೆ ಕಟ್ಟಡ ದುರಸ್ತಿ ಮಾತ್ರ ಕಂಡಿಲ್ಲ. ಇದರಿಂದಾಗಿ ಮಕ್ಕಳನ್ನು ಈ ಶಾಲೆಗೆ ಕಳಿಸಲು ಪೋಷಕರು ಆತಂಕ ವ್ಯಕ್ತಪಡಿಸುತ್ತಾರೆ. ಶಿಕ್ಷಣ ಇಲಾಖೆ, ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂಬುದು ಗ್ರಾಮಸ್ಥರ ಒತ್ತಾಯ.- - -
-6ಕೆಸಿಎನ್ಜಿ3: ಯಲೋದಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಕಟ್ಟಡ.-6ಕೆಸಿಎನ್ಜಿ4,5,6: ಶಿಥಿಲಗೊಂಡಿರುವ ಸರ್ಕಾರಿ ಪ್ರೌಢಶಾಲೆ ಕಟ್ಟಡ.