ಯೋಗದಿಂದ ಸುಂದರ ಬದುಕು, ಸಮಾಜ ಸದೃಢ: ಸುಬೆದಾರ್ ಬಿ.ನಾರಾಯಣ

| Published : Oct 14 2024, 01:18 AM IST

ಯೋಗದಿಂದ ಸುಂದರ ಬದುಕು, ಸಮಾಜ ಸದೃಢ: ಸುಬೆದಾರ್ ಬಿ.ನಾರಾಯಣ
Share this Article
  • FB
  • TW
  • Linkdin
  • Email

ಸಾರಾಂಶ

ಪೌಷ್ಟಿಕಾಂಶಯುಕ್ತ ಮತ್ತು ಆರೋಗ್ಯಕರ ಆಹಾರ ಕೊರತೆಯಿಂದ ಅನಾರೋಗ್ಯ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಬಾಲ್ಯದಲ್ಲೇ ಯೋಗಾಭ್ಯಾಸದ ಬಗ್ಗೆ ತರಬೇತಿ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಇಲ್ಲಿ ತರಬೇತಿ ಪಡೆಯುವ ಮಕ್ಕಳು ನಿಮ್ಮ ಕುಟುಂಬದ ಸದಸ್ಯರಿಗೆ ಯೋಗ ತರಬೇತಿ ನೀಡಿ ನೀವು ಆರೋಗ್ಯ ಉತ್ತಮ ಪಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮನುಷ್ಯನ ದೇಹ ಮತ್ತು ಮನಸ್ಸನ್ನು ಉತ್ತಮಗೊಳಿಸುವ ಯೋಗದಿಂದ ಸುಂದರ ಬದುಕಿನ ಜೊತೆಗೆ ಇಡೀ ಸಮಾಜವನ್ನು ಸದೃಢವಾಗಿಸುವ ಶಕ್ತಿ ಹೊಂದಿದೆ ಎಂದು ನಿವೃತ್ತ ಸೇನಾಧಿಕಾರಿ ಸುಬೆದಾರ್ ಬಿ. ನಾರಾಯಣ ಅಭಿಪ್ರಾಯಪಟ್ಟರು.

ತಾಲೂಕಿನ ಶೀರಪಟ್ಟಣ (ಎಂ.ಹೊಸೂರು ಗೇಟ್) ಬಳಿಯಿರುವ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಸಂಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಯೋಗ ಆಧಾರಿತ ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮಕ್ಕಳ ಶಾರೀರಿಕ, ಮಾನಸಿಕ, ಭೌದ್ಧಿಕ, ಬೆಳವಣಿಗೆಗೆ ಯೋಗದಂತಹ ಸಮಗ್ರ ವಿಚಾರ ಮತ್ತು ಚಟುವಟಿಕೆ ಉಳ್ಳ ವಿದ್ಯೆ ನಮ್ಮ ದೇಶದಲ್ಲಿರುವುದು ಸೌಭಾಗ್ಯ. ಈ ಅವಕಾಶಗಳನ್ನು ಉಪಯೋಗಿಸಿಕೊಂಡು ಸ್ವಯಂ ಸಧೃಡರಾಗುವ ಜೊತೆಗೆ ಇತರರನ್ನೂ ಸಧೃಡಗೊಳಿಸಬೇಕಿದೆ ಎಂದರು.

ಪೌಷ್ಟಿಕಾಂಶಯುಕ್ತ ಮತ್ತು ಆರೋಗ್ಯಕರ ಆಹಾರ ಕೊರತೆಯಿಂದ ಅನಾರೋಗ್ಯ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಬಾಲ್ಯದಲ್ಲೇ ಯೋಗಾಭ್ಯಾಸದ ಬಗ್ಗೆ ತರಬೇತಿ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಇಲ್ಲಿ ತರಬೇತಿ ಪಡೆಯುವ ಮಕ್ಕಳು ನಿಮ್ಮ ಕುಟುಂಬದ ಸದಸ್ಯರಿಗೆ ಯೋಗ ತರಬೇತಿ ನೀಡಿ ನೀವು ಆರೋಗ್ಯ ಉತ್ತಮ ಪಡಿಸಿಕೊಳ್ಳಬೇಕು ಕಿವಿಮಾತು ಹೇಳಿದರು.

ಸರ್ಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲ ಎಂ.ಕೆ.ಮಹೇಶ್ ಮಾತನಾಡಿ, ಈ ತರಬೇತಿ ಕೇವಲ ಮಾರ್ಗದರ್ಶನ ಅಷ್ಟೆ. ಆದರೆ, ಈ ಶಿಬಿರದಲ್ಲಿ ಕಲಿತ ಎಲ್ಲಾ ಅಂಶಗಳನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯವಶ್ಯಕ ಎಂದರು.

ಮನುಷ್ಯನ ಜೀವನವು ಅತ್ಯಂತ ಸುದೀರ್ಘವಾಗಿರುವುದಿಲ್ಲ. ಹಿಂದೆ ಜನರು ಆರೋಗ್ಯಕರ ಜೀವನ ಶೈಲಿಯಿಂದ ಯಾವುದೇ ರೋಗಗಳು ಬರುತ್ತಿರಲಿಲ್ಲ. ತಮ್ಮ ದೈಹಿಕ ಶ್ರಮದಿಂದ ಎಲ್ಲರೂ ಆರೋಗ್ಯವಂತರಾಗಿದ್ದರು. ಇತ್ತೀಚೆಗೆ ದೈಹಿಕ ಶ್ರಮವಿಲ್ಲದೇ ಮನುಷ್ಯ ಹಲವು ರೋಗಗಳಿಗೆ ತುತ್ತಾಗುವುದು ಸಾಮಾನ್ಯವಾಗಿದೆ ಎಂದರು.

ಪಾಶ್ಚಿಮಾತ್ಯ ವೈದ್ಯ ಪದ್ಧತಿಯಿಂದ ಆರೋಗ್ಯ ಸುಧಾರಣೆಯಾಗುವ ಬದಲಿಗೆ ನಮ್ಮ ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಧ್ಯಾನದಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಸಿಕೊಳ್ಳಲು ಸಾಧ್ಯ. ಯೋಗದಿಂದ ದೈನಂದಿನ ಜೀವನದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ ಎಂದರು.

ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಸಂಸ್ಥಾನದ ನೋಡಲ್ ಅಧಿಕಾರಿ ಡಾ.ಎಚ್.ಎಸ್.ವಾದಿರಾಜ್ ಮಾತನಾಡಿ, ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಬದಲಾವಣೆಯಾಗುವ ಹಂತದಲ್ಲಿ ಅವರ ವ್ಯಕ್ತಿತ್ವ ವಿಕಸನಗೊಳಿಸುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ ಎಂದರು.

ಯೋಗದ ಮಹತ್ವ ಕುರಿತು ಡಾ.ಎಂ.ಕೆ.ನಿತೇಶ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಯೋಗ ತರಬೇತುದಾರ ಸಿದ್ದಪ್ಪ ನರಗಟ್ಟಿ ಶಿಬಿರದ ವರದಿ ವಾಚಿಸಿದರು. ಶಿಬಿರದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆದು ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಜಿ.ಬೊಮ್ಮನಹಳ್ಳಿ ವಿಜಯ್‌ಕುಮಾರ್, ನಿವೃತ್ತ ಶಿಕ್ಷಕ ಮುಜಾಹಿದ್ ಪಾಷ, ಆಸ್ಪತ್ರೆ ಸಂಶೋಧನಾ ಅಧಿಕಾರಿಗಳಾದ ಡಾ. ನುಜಹತ್, ಡಾ. ಸಿಂಧೂಶ್ರೀ, ಡಾ.ಕಾರ್ತಿಕ್, ಡಾ. ಪೂಜಾ, ಯೋಗ ಚಿಕಿತ್ಸಕ ಸಿದ್ದಪ್ಪ ನರಗಟ್ಟಿ, ಎಂಜಿನಿಯರ್ ನಾಗೇಶ್, ಕಚೇರಿ ಸಿಬ್ಬಂದಿ ಚೈತ್ರ, ಎಂ.ಪ್ರಗತಿ, ರಮ್ಯ, ಯಶ್ವಂತ್, ಶಿವರಾಜ್ ಸೇರಿದಂತೆ ಹಲವರು ಇದ್ದರು.