ಯೋಗ ವ್ಯಕ್ತಿಗೆ ಶಾರೀರಿಕ, ಮಾನಸಿಕ ಶಕ್ತಿ ತುಂಬುವ ಸಾಧನ: ಡಾ.ಅಶ್ವಿನಿ

| Published : Jun 22 2025, 01:18 AM IST

ಯೋಗ ವ್ಯಕ್ತಿಗೆ ಶಾರೀರಿಕ, ಮಾನಸಿಕ ಶಕ್ತಿ ತುಂಬುವ ಸಾಧನ: ಡಾ.ಅಶ್ವಿನಿ
Share this Article
  • FB
  • TW
  • Linkdin
  • Email

ಸಾರಾಂಶ

ಯೋಗ ಶಾರೀರಿಕ ಮತ್ತು ಮಾನಸಿಕ ಶಕ್ತಿ ತುಂಬುವ ಸಾಧನ. ನಿತ್ಯ ಒಂದು ತಾಸು ಯೋಗಾಭ್ಯಾಸದಲ್ಲಿ ತೊಡಗಿದರೆ ಮನುಷ್ಯನಿಗೆ ಆರೋಗ್ಯ ಬದುಕು ಲಭಿಸುತ್ತದೆ ಎಂದು ಆಶ್ರಯ ಆಸ್ಪತ್ರೆ ಮಕ್ಕಳ ತಜ್ಞೆ ಡಾ.ಅಶ್ವಿನಿ ಅನಿಕೇತ್ ಹೇಳಿದರು.

ಯೋಗದ ಬಗ್ಗೆ ಮಾಹಿತಿ

ಚಿಕ್ಕಮಗಳೂರು: ಯೋಗ ಶಾರೀರಿಕ ಮತ್ತು ಮಾನಸಿಕ ಶಕ್ತಿ ತುಂಬುವ ಸಾಧನ. ನಿತ್ಯ ಒಂದು ತಾಸು ಯೋಗಾಭ್ಯಾಸದಲ್ಲಿ ತೊಡಗಿದರೆ ಮನುಷ್ಯನಿಗೆ ಆರೋಗ್ಯ ಬದುಕು ಲಭಿಸುತ್ತದೆ ಎಂದು ಆಶ್ರಯ ಆಸ್ಪತ್ರೆ ಮಕ್ಕಳ ತಜ್ಞೆ ಡಾ.ಅಶ್ವಿನಿ ಅನಿಕೇತ್ ಹೇಳಿದರು.

ನಗರದ ಪಾರ್ವತಿಪುರ ಸಮೀಪ ಆಶ್ರಯ ನರ್ಸಿಂಗ್ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಪಂಚಾದ್ಯಂತ ಬಹುತೇಕ ದೇಶಗಳಲ್ಲಿ ಯೋಗ ದಿನಾಚರಣೆ ಆಚರಿಸುತ್ತಿದೆ. ಇದಕ್ಕೆ ಮೂಲ ಭಾರತವಾಗಿದೆ. ಹಿರಿಯರು ಕಟ್ಟಿ ಬೆಳೆಸಿದ ಯೋಗಾಭ್ಯಾಸವನ್ನು ಆಧುನಿಕ ಜಗತ್ತಿನಲ್ಲಿ ಮಾನವರು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಿಕೊಂಡರೆ ದೈಹಿಕವಾಗಿ ಸಧೃಢರಾಗಲು ಸಾಧ್ಯ ಎಂದರು.

ಯೋಗಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಮನುಷ್ಯ ದೈನಂದಿನ ಬದುಕಿನ ಆಹಾರ ಪದ್ಧತಿಯಲ್ಲಿ ಹಿತ ಮಿತ ಹಾಗೂ ಸುಂದರ ಮೈಗಟ್ಟು ಹೊಂದಲು ಯೋಗ ಬಹು ಉಪಕಾರಿಯಾಗಿದ್ದು ಇಂದಿನ ಪ್ರಪಂಚದ ವಾತಾವರಣಕ್ಕೆ ಬಹಳಷ್ಟು ಅವಶ್ಯಕತೆಯಿದೆ ಎಂದು ಹೇಳಿದರು.

ಹಿರಿಯ ಯೋಗ ಪಟು ವಾಣಿ ಮಾತನಾಡಿ, ವಿದ್ಯಾರ್ಥಿಗಳಿಗೆ ಯೋಗಾಸನ ಬದುಕಿನ ಒಂದು ಭಾಗವಾಗಿರಬೇಕು. ಕೇವಲ ದಿನಾಚರಣೆಗೆ ಸೀಮಿತಗೊಳಿಸದೇ ನಿತ್ಯ ಸೇವಿಸುವ ಆಹಾರದಂತೆ ದಿನಕ್ಕೊಂದು ಗಂಟೆ ಯೋಗಾಸನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾಲೇಜು ಆಡಳಿತಾಧಿಕಾರಿ ಜಿ.ಪುರುಷೋತ್ತಮ್ ಮಾತನಾಡಿ, ಯೋಗದ ಬೆಳಕು ಮೈಮೇಲೆ ಬಿದ್ದರೆ ಶರೀರ ತಾನಾಗಿಯೇ ಗಟ್ಟಿಗೊಳ್ಳುತ್ತದೆ. ಒತ್ತಡದ ಜೀವನ ನಿಯಂತ್ರಿಸಲು, ಮಾನಸಿಕ ಖಿನ್ನತೆ ಹೋಗಲಾಡಿಸಲು ಹಾಗೂ ಸಂತೋಷದ ಜೀವನ ರೂಪಿಸಿಕೊಳ್ಳಲು ದಿನದ ಕೆಲ ಸಮಯವನ್ನು ಯೋಗಾಭ್ಯಾಸಕ್ಕೆ ಮುಡಿಪಿಡಬೇಕು ಎಂದು ಕಿವಿಮಾತು ಹೇಳಿದರು.

ಇದೇ ವೇಳೆ ನರ್ಸಿಂಗ್ ವಿದ್ಯಾರ್ಥಿಗಳಿಗೆ ಯೋಗ ತರಬೇತದಾರರು ವಿವಿಧ ಬಂಗಿಗಳನ್ನು ಅಭ್ಯಾಸಿ ಯೋಗದ ಮಹತ್ವವನ್ನು ತಿಳಿಸಿಕೊಟ್ಟರು. ಕಾಲೇಜಿನ ಪ್ರಾಚಾರ್ಯೆ ಬಿ.ಎಚ್.ತೇಜಸ್ವಿನಿ, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಇದ್ದರು.