ಯೋಗ ಎಂಬುದು ಕೇವಲ ವ್ಯಾಯಾಮವಲ್ಲ ಅದೊಂದು ಮಹಾನ್ ವಿಜ್ಞಾನ ಹಾಗೂ ಶಾಸ್ತ್ರವಾಗಿದೆ. ಆರೋಗ್ಯ ರಕ್ಷಣೆ ಮತ್ತು ದೀರ್ಘಾಯುಷ್ಯಕ್ಕೆ ಪ್ರತಿಯೊಬ್ಬರೂ ನಿತ್ಯ ಯೋಗಾಭ್ಯಾಸ ಮಾಡುವುದು ಅತ್ಯಗತ್ಯ.

ಗದಗ: ಯೋಗ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಯೋಗವನ್ನು ನಿರಂತರವಾಗಿ ರೂಢಿ ಮಾಡಿಕೊಳ್ಳುವುದರಿಂದ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನಗರಸಭೆ ಹಾಗೂ ವಿವಿಧ ಇಲಾಖೆಗಳು ಮತ್ತು ಸರ್ವಯೋಗ ಸಂಸ್ಥೆಗಳ ಸಹಯೋಗದಲ್ಲಿ ಆರೋಗ್ಯ ಕರ ವೃದ್ಧಾಪ್ಯಕ್ಕಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಯೋಗ ಎಂಬುದು ಕೇವಲ ವ್ಯಾಯಾಮವಲ್ಲ ಅದೊಂದು ಮಹಾನ್ ವಿಜ್ಞಾನ ಹಾಗೂ ಶಾಸ್ತ್ರವಾಗಿದೆ. ಆರೋಗ್ಯ ರಕ್ಷಣೆ ಮತ್ತು ದೀರ್ಘಾಯುಷ್ಯಕ್ಕೆ ಪ್ರತಿಯೊಬ್ಬರೂ ನಿತ್ಯ ಯೋಗಾಭ್ಯಾಸ ಮಾಡುವುದು ಅತ್ಯಗತ್ಯ ನಮ್ಮ ದೇಶದ ಶ್ರೇಷ್ಠ ಋಷಿಮುನಿಗಳು, ವಿಶೇಷವಾಗಿ ಪತಂಜಲಿ ಮಹರ್ಷಿಗಳು ಜಗತ್ತಿಗೆ ನೀಡಿದ ಈ ಅಮೂಲ್ಯ ಕೊಡುಗೆಯನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ನಿರಂತರವಾಗಿ ಅಳವಡಿಸಿಕೊಳ್ಳಬೇಕು ಎಂದರು.

ಯೋಗವು ಯಾವುದೇ ಧರ್ಮ. ಜಾತಿಗೆ ಸೀಮಿತವಾಗಿಲ್ಲ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಜಿಯವರು ಅಧಿಕಾರ ಸ್ವೀಕರಿಸಿದ ನಂತರ ಯುಎನ್ಒ ಯೋಗ ದಿನಾಚರಣೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡಲು‌ ಪ್ರಸ್ತಾವನೆ ಹೊರಡಿಸಿತು. 2015ರ ಜೂ. 21ರಿಂದ ಅಂತಾರಾಷ್ಟ್ರೀಯ ಯೋಗ‌ ದಿನವನ್ನು ಆಚರಿಸಲಾಗುತ್ತಿದೆ. ಯೋಗ ವಿದ್ಯೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿದ ಕೀರ್ತಿ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಿದೆ. ದೈಹಿಕವಾಗಿ ಸದೃಢರಾದಾಗ ಮಾನಸಿಕವಾಗಿ ಸದೃಢರಾಗಲು ಸಾಧ್ಯ. ರೋಗಗಳು ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ. ರೋಗಗಳು ಬಾರದಂತೆ ‌ಮುಂಜಾಗ್ರತೆ ವಹಿಸುವುದೇ ಸೂಕ್ತ. ಅದಕ್ಕಾಗಿ ಪ್ರತಿಯೊಬ್ಬರೂ ಯೋಗವನ್ನು ರೂಢಿಸಿಕೊಳ್ಳಬೇಕು ಎಂದರು.

ಹುಲಕೋಟಿ ಪ್ರಾಕೃತಿಕ‌ ಚಿಕಿತ್ಸಾ ಕೇಂದ್ರದ ಡಾ. ಸತೀಶ ಹೊಂಬಾಳಿ ಯೋಗಾಸನ, ಪ್ರಾಣಾಯಮಗಳನ್ನು ನಡೆಸಿಕೊಟ್ಟರು. ಪ್ರಜಾಪಿತ ಬ್ರಹ್ಮಕುಮಾರಿ‌ಸಂಸ್ಥೆಯ ರೇಖಾ ಅಕ್ಕ ಅವರು ಧ್ಯಾನ ಅಭ್ಯಾಸ ನಡೆಸಿಕೊಟ್ಟರು. ನಿತ್ಯ ಯೋಗ ಕೇಂದ್ರದವರಿಂದ ನೃತ್ಯ ಕಾರ್ಯಕ್ರಮ ‌ಜರುಗಿತು.

ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಡಿವೈಎಸ್ಪಿ ಮಹಾಂತೇಶ್ ಸಜ್ಜನರ, ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಎಸಿ ಗಂಗಪ್ಪ ಎಂ, ಜಿಪಂ ಅಧಿಕಾರಿ ಎಂ.ವಿ. ಚಳಗೇರಿ, ಡಿಡಿಪಿಐ ಆರ್.ಎಸ್. ಬುರುಡಿ, ರಾಧಾ ಮಣ್ಣೂರ ಸೇರಿದಂತೆ ಇತರರು ಇದ್ದರು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ ಸ್ವಾಗತಿಸಿದರು. ಡಾ. ಅಶೋಕ‌ ಮತ್ತಿಗಟ್ಟಿ ಪತಂಜಲಿ ‌ಪ್ರಾರ್ಥನೆ ಮಾಡಿದರು. ಆಯುಷ್ ಅಧಿಕಾರಿ ಜುಬೇದಾ ತಿಗಳೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸಂಜೀವ್ ನಾರಪ್ಪನವರ ನಿರೂಪಿಸಿದರು.