ಎ. ನರಸಿಂಹಮೂರ್ತಿ ಮಾತನಾಡಿ ರಾಜ್ಯ ಸರ್ಕಾರವು 2023ರ ಚುನಾವಣಾ ಪ್ರಣಾಳಿಕೆಯಲ್ಲಿ ಸ್ಲಂ ನಿವಾಸಿಗಳಿಗೆ ಉಚಿತ ಮನೆ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಪ್ರಸ್ತುತ ವಸತಿ ಯೋಜನೆಗಳು ಬಡವರಿಗೆ ಸಿಗದೇ ಉಳ್ಳವರ ಪಾಲಾಗುತ್ತಿವೆ ಎಂದರು.
ಗದಗ: ಬಡವರ ಕಲ್ಯಾಣ ಮಾಡುತ್ತೇವೆ, ಉಚಿತ ಶಿಕ್ಷಣ, ಆರೋಗ್ಯ ಮತ್ತು ವಸತಿ ನೀಡುತ್ತೇವೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬರುವ ಸರ್ಕಾರಗಳು, ಬಳಿಕ ಜನಸಾಮಾನ್ಯರನ್ನು ಮರೆತು ಶ್ರೀಮಂತರ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಉದ್ಧಾರಕ್ಕಾಗಿ ಕೆಲಸ ಮಾಡುತ್ತಿವೆ ಎಂದು ಬೇಲೂರು ಗುರು ಬಸವೇಶ್ವರ ಮಠದ ಡಾ. ಪ್ರಭು ಮಹಾಂತ ಸ್ವಾಮೀಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ, ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ಹಾಗೂ ಜಿಲ್ಲಾ ಸ್ಲಂ ಸಮಿತಿ ಸಹಯೋಗದಲ್ಲಿ ನಗರದ ಲಯನ್ಸ್ ಭವನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಪ್ರತಿನಿಧಿಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರವು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಪುನರ್ ಪರಿಷ್ಕರಣೆಗೆ ಮುಂದಾಗಿರುವುದು ಬಡವರ ಸೌಲಭ್ಯಗಳನ್ನು ಕಸಿದುಕೊಳ್ಳುವ ಕುತಂತ್ರವಾಗಿದೆ ಎಂದ ಅವರು, ಸ್ಲಂ ನಿವಾಸಿಗಳ ಹಕ್ಕೊತ್ತಾಯದ ಹೋರಾಟಗಳಿಗೆ ತಮ್ಮ ಸಂಪೂರ್ಣ ಬೆಂಬಲ ಪ್ರಕಟಿಸಿದರು.
ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಮಾತನಾಡಿ ರಾಜ್ಯ ಸರ್ಕಾರವು 2023ರ ಚುನಾವಣಾ ಪ್ರಣಾಳಿಕೆಯಲ್ಲಿ ಸ್ಲಂ ನಿವಾಸಿಗಳಿಗೆ ಉಚಿತ ಮನೆ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಪ್ರಸ್ತುತ ವಸತಿ ಯೋಜನೆಗಳು ಬಡವರಿಗೆ ಸಿಗದೇ ಉಳ್ಳವರ ಪಾಲಾಗುತ್ತಿವೆ. ಸರ್ಕಾರಕ್ಕೆ ಭರವಸೆಗಳನ್ನು ನೆನಪಿಸಲು ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದರು.ಬಸವರಾಜ್ ಸೂಳಿಭಾವಿ ಮುಂತಾದವರು ಮಾತಾನಾಡಿದರು. ಕಾರ್ಯಕ್ರಮದ ಅಂಗವಾಗಿ ನಗರಸಭೆ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಬೃಹತ್ ರ‍್ಯಾಲಿ ಆರಂಭಿಸಲಾಯಿತು. ಗಾಂಧಿ ಸರ್ಕಲ್ ಮಾರ್ಗವಾಗಿ ಹಳೇ ಕೋರ್ಟ್ ರಸ್ತೆಯ ಲಯನ್ಸ್ ಭವನದವರೆಗೆ ಜಾಗೃತಿ ಜಥಾ ನಡೆಸಲಾಯಿತು.
ಸಾವಿತ್ರಿಬಾಯಿ ಫುಲೆ ಮಹಿಳಾ ಸಮಿತಿ ಸಂಚಾಲಕಿ ಚಂದ್ರಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಎಂ.ಎಸ್. ಹಡಪದ, ಬಸವರಾಜ ಪೂಜಾರ, ಇಮ್ತಿಯಾಜ್ ಆರ್. ಮಾನ್ವಿ, ಅಶೋಕ್ ಕುಡುತಿನಿ, ಅಶೋಕ್ ಕುಸಬಿ, ಪರವೀನ್‌ಬಾನು ಹವಾಲ್ದಾರ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಪ್ರತಿನಿಧಿಗಳು ಉಪಸ್ಥಿತರಿದ್ದರು. ವಕೀಲ ಎಂ.ಬಿ. ನದಾಫ್ ನಿರೂಪಿಸಿ, ವಂದಿಸಿದರು.