- ಹೊನ್ನಾಳಿಯಲ್ಲಿ ಶಾಸಕ ಶಾಂತನಗೌಡ ಹೇಳಿಕೆ । ಕಾಂಗ್ರೆಸ್ ಪಕ್ಷದ ಬಿಎಲ್‌ಎ-2ಗಳ ವಿಶೇಷ ತರಬೇತಿ ಕಾರ್ಯಾಗಾರ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಮುಂದಿನ ದಿನಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಅಂತಹವರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ದೊರೆಯುವುದಿಲ್ಲ. ಈ ಕಾರಣಕ್ಕಾಗಿ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಎಸ್.ಐ.ಆರ್. (ಮತದಾರರ ವಿಶೇಷ ಪರಿಷ್ಕರಣೆ) ಸಿಬ್ಬಂದಿ ಮನೆಗೆ ಬಂದಾಗ ಅವರಿಂದ ಎನ್ಯುಮರೇಷನ್ ಅರ್ಜಿ ಫಾರಂಗಳನ್ನು ಪಡೆದು ತಮ್ಮ ಕುಟುಂಬ ಸದಸ್ಯರ ವಿವರಗಳನ್ನು ಭರ್ತಿ ಮಾಡಿಕೊಡಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಪಟ್ಟಣದ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಸೋಮವಾರ ಎಸ್‌ಐಆರ್ ಕುರಿತು ಹೊನ್ನಾಳಿ ವಿಧಾನಸಭಾ ಕ್ಷೇತ್ರ -110ಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಬಿ.ಎಲ್.ಎ-2ಗಳ ವಿಶೇಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿಯೇ ಇತರೆ ರಾಜ್ಯಗಳಿಗಿಂತ ಕರ್ನಾಟಕ ರಾಜ್ಯದಲ್ಲಿ ಎಸ್.ಐ.ಆರ್. ಕಾರ್ಯಕ್ರಮ ಅತ್ಯುತ್ತಮ ರೀತಿಯಲ್ಲಿ ಸಾಗುತ್ತಿದೆ. ಮತದಾರರ ವಿಶೇಷ ಪರಿಷ್ಕರಣೆಗೆ ನಿಯೋಜನೆಗೊಂಡಿರುವ ಬಿ.ಎಲ್.ಒ.ಗಳ ಜೊತೆಯಲ್ಲಿ ತಮ್ಮ ಪಕ್ಷದ ಬಿ.ಎಲ್.ಎ-2 ಕಾರ್ಯಕರ್ತರು ಮನೆ ಮನೆಗೆ ಹೋಗಿ ಯಾರೂ ಮತದಾರರ ಪಟ್ಟಿಯಿಂದ ವಂಚಿತರಾಗದಂತೆ ಅರ್ಜಿ ಫಾರಂಗಳನ್ನು ಭರ್ತಿ ಮಾಡಿ ಕೊಡಬೇಕು. ಆ ಮೂಲಕ ದೇಶದ ಪ್ರಜಾತಂತ್ರ ವ್ಯವಸ್ಥೆಯನ್ನು ಬಲಗೊಳಿಸಬೇಕಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಬಯಲುಸೀಮೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ ಅವರು ಕಾರ್ಯಾಗಾರ ನೇತೃತ್ವ ವಹಿಸಿ ಮಾತನಾಡಿ, ಮತದಾರರ ವಿಶೇಷ ಪರಿಷ್ಕರಣೆ ಕುರಿತು ಅನ್ಯಪಕ್ಷದವರ ಟೀಕೆಗಳಿಗೆ ಕಿವಿಕೊಡದೇ ಪ್ರತಿಯೊಬ್ಬ ಮತದಾರರು ಇದು ತಮ್ಮ ಜವಾಬ್ದಾರಿ ಎಂದು ಅರಿತು ಎಸ್.ಐ.ಆರ್. ಕಾರ್ಯಕ್ರಮಕ್ಕೆ ಸ್ಪಂದಿಸಿ ಅಧಿಕಾರಿಗಳಿಗೆ ಸಹಕರಿಸಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಡಿ.ಬಸವರಾಜ್ ಮಾತನಾಡಿ, ದೇಶದ ಚೋರ್ ಜೌಕಿದಾರ ಅವರ ಕೈಗೆ ಸಿಕ್ಕು ದೇಶದ 13 ರಾಜ್ಯಗಳಲ್ಲಿ 6.5 ಕೋಟಿ ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುವಂತಾಗಿದೆ. ಇನ್ನುಳಿದ 17 ರಾಜ್ಯಗಳಲ್ಲಿ ಇನ್ನೆಷ್ಟು ಮತದಾರರು ತಮ್ಮ ಹಕ್ಕನ್ನು ಕಳೆದುಕೊಳ್ಳಲಿದ್ದಾರೆಯೋ ಗೊತ್ತಿಲ್ಲ ಎಂದರು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಡಾ.ಅರವಿಂದ್ ಮಾತನಾಡಿ, ಹೆಸರು ಸೇರಿಸಲು, ಕೈ ಬಿಡಲು, ಬದಲಾವಣೆ ಮಾಡಲು ಹೀಗೆ ಒಂದೊಂದು ಉದ್ದೇಶಕ್ಕೂ ಒಂದೊಂದು ಫಾರಂಗಳಿವೆ. ನಿಮ್ಮ ಬಳಿ ಬರುವ ಬಿ.ಎಲ್.ಒ.ಗಳಿಂದ ಸಂಬಂಧಿಸಿದ ನಮೂನೆಗಳನ್ನು ಪಡೆದು ಸರಿಯಾದ ಮಾಹಿತಿಗಳನ್ನು ಭರ್ತಿ ಮಾಡಿಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಬಿ.ಸಿದ್ದಪ್ಪ, ಗಿರೀಶ್ ಮುದೇಗೌಡ್ರ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ ಮುಂತಾದವರು ಮಾತನಾಡಿದರು.ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಎಚ್.ಬಿ.ಶಿವಯೋಗಿ, ಹೊನ್ನಾಳಿ, ಜಿ.ಪಂ. ಮಾಜಿ ಸದಸ್ಯ ಡಿ.ಜಿ.ವಿಶ್ವನಾಥ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎ.ಗದ್ದಿಗೇಶ್, ನ್ಯಾಮತಿ ತಾಲೂಕು ಅಧ್ಯಕ್ಷ ಶಿವರಾಂ ನಾಯ್ಕ, ಸದಸ್ಯರಾದ ಸಾಸ್ವೇಹಳ್ಳಿ ಕೃಷ್ಣಮೂರ್ತಿ, ಸದಸ್ಯೆ ಆಶಾ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಾಘವೇಂದ್ರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ರವೀಶ್, ನ್ಯಾಮತಿ ತಾಲೂಕಿನ ವನಜಾಕ್ಷಮ್ಮ, ಕೆಪಿಸಿಸಿ ಸದಸ್ಯ ಡಾ.ಈಶ್ವರ ನಾಯ್ಕ, ಯುವ ಮುಖಂಡ ಮಧುಗೌಡ ಸೇರಿದಂತೆ ಅನೇಕ ಮುಖಂಡರು ಇದ್ದರು.
- - --6ಎಚ್.ಎಲ್.ಐ1:
ಹೊನ್ನಾಳಿ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಸೋಮವಾರ ಶಾಸಕ ಡಿ.ಜಿ. ಶಾಂತನಗೌಡ ಅವರು ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್.)ಯ ಕಾಂಗ್ರೆಸ್ ಪಕ್ಷದ ಬಿಎಲ್ಎ-2 ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಸೇರಿದಂತೆ ಜಿಲ್ಲಾ ಮತ್ತು ತಾಲೂಕುಮಟ್ಟದ ಮುಖಂಡರು ಇದ್ದರು.