ಗದಗ: ಪಂಚಮಸಾಲಿ ಸಮಾಜದ ಯುವಕರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವುದರೊಂದಿಗೆ ಸಮಾಜದ ಸಂಘಟನೆ ಮತ್ತು ಒಗ್ಗಟ್ಟನ್ನು ಮತ್ತಷ್ಟು ಬಲಪಡಿಸುವ ಕೆಲಸದಲ್ಲಿ ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಜಿಲ್ಲಾ ಲಿಂಗಾಯತ ಪಂಚಮಸಾಲಿ ಸಮಾಜ ಯುವ ಘಟಕದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ನಮ್ಮದು ಶ್ರಮಜೀವಿಗಳ ಸಮಾಜವಾಗಿದ್ದು, ಸಮಾಜದ ಪ್ರಗತಿಗೆ ಶಿಕ್ಷಣವೇ ಮುಖ್ಯ ಅಸ್ತ್ರವಾಗಿದೆ. ಯುವಜನರು ಉನ್ನತ ಶಿಕ್ಷಣದ ಮೂಲಕ ಸಮಾಜಕ್ಕೆ ಉತ್ತಮ ನಾಯಕತ್ವ ನೀಡಬೇಕು ಎಂದರು.

ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಸಂಘಟನೆ ಮತ್ತು ಹೋರಾಟದ ಮನೋಭಾವ ಅಗತ್ಯವಾಗಿದೆ. ಸಮಾಜದ ಹಕ್ಕುಗಳಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ಮಾತ್ರ ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಾನ್ನಿಧ್ಯವನ್ನು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಹಿಸಿದ್ದರು. ಶಾಸಕ ಅರವಿಂದ ಬೆಲ್ಲದ ಅವರು ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಲ್ಲದೆ, ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಕಲಾವಿದರು ಹಾಗೂ ಸಮಾಜಸೇವಕರನ್ನು ಸನ್ಮಾನಿಸಲಾಯಿತು.


ಪಂಚಮಸಾಲಿ ಸಮಾಜ ಗದಗ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಯ್ಯಪ್ಪ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಂ.ಕರಿಗೌಡ್ರ, ಸಂಗಮೇಶ ಕೊಳ್ಳಿ, ವಿಜಯಕುಮಾರ ಗಡ್ಡಿ, ಮಹಾಂತೇಶ ನಲವಡಿ, ಬಾಲಚಂದ್ರ ಭರಮಗೌಡ್ರ, ಬಸವರಾಜ ಗಡ್ಡೆಪ್ಪನವರ, ನಿಂಗಪ್ಪ ಪಿರೋಜಿ, ಆರ್.ವಿ.ಗೋಪನಾಳ, ಮಲ್ಲಿಕಾರ್ಜುನ ಹೀರೆಕೊಪ್ಪ, ಶಿವರಾಜ ಶಿವನಗೌಡ್ರ, ಭದ್ರೇಶ ಕುಸ್ಲಾಪುರ, ಲಲಿತ ಗೊಳಗೊಳಕಿ ಸೇರಿದಂತೆ ಸಮಾಜದ ಮುಖಂಡರು, ಮಹಿಳೆಯರು, ಯುವಕರು ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಮಾಜದ ಸದಸ್ಯರು ಇದ್ದರು.