ಇಂದು ಭಾರತ ಜಗತ್ತಿನ ದೈತ್ಯ ಶಕ್ತಿಯಾಗುವತ್ತ ದಾಪುಗಾಲಿಡುತ್ತಿದೆ. 2047ರ ವೇಳೆಗೆ ‘ವಿಕಸಿತ ಭಾರತ’ವಾಗುವ ಮಹತ್ತರವಾದ ಸಂಕಲ್ಪ ನಮ್ಮ ಕಣ್ಣಮುಂದಿದೆ. ಆದರೆ ಭಾರತದ ಪ್ರತಿಭೆಗಳು ಇಲ್ಲಿನ ಕೈತಪ್ಪುತ್ತಿರುವುದು ಅಪಾಯಕಾರಿ.
ಇಂದು ಭಾರತ ಜಗತ್ತಿನ ದೈತ್ಯ ಶಕ್ತಿಯಾಗುವತ್ತ ದಾಪುಗಾಲಿಡುತ್ತಿದೆ. 2047ರ ವೇಳೆಗೆ ‘ವಿಕಸಿತ ಭಾರತ’ವಾಗುವ ಮಹತ್ತರವಾದ ಸಂಕಲ್ಪ ನಮ್ಮ ಕಣ್ಣಮುಂದಿದೆ. ಆದರೆ ಭಾರತದ ಪ್ರತಿಭೆಗಳು ಇಲ್ಲಿನ ಕೈತಪ್ಪುತ್ತಿರುವುದು ಅಪಾಯಕಾರಿ. ಈ ನಿಟ್ಟಿನಲ್ಲಿ ಸರ್ಕಾರಗಳು ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ. ಇದೆಲ್ಲಕ್ಕಿಂತ ಮೊದಲು ವಿದೇಶಿ ಕೆಲಸ ಶೇಷ್ಠ ಎಂಬ ಭಾರತೀಯರ ಮಾನಸಿಕತೆಯಲ್ಲಿಯೇ ಬದಲಾವಣೆ ಬೇಕಿದೆ.
-ದಿವ್ಯಾ ಹೆಗಡೆ ಕಬ್ಬಿನಗದ್ದೆ
ಇತ್ತೀಚೆಗೆ ಟೆಸ್ಲಾ, ಸ್ಪೇಸ್‌ಎಕ್ಸ್ ಸ್ಥಾಪಕ, ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಕನ್ನಡಿಗ ನಿಖಿಲ್ ಕಾಮತ್ ಜೊತೆ ಪಾಡ್‌ಕಾಸ್ಟ್‌ನಲ್ಲಿ ಮಾತಾಡಿದರು. ಅದರಲ್ಲಿ ಅವರಾಡಿದ ಮಾತೊಂದು ಗಮನ ಸೆಳೆಯಿತು: ‘ಅಮೆರಿಕಕ್ಕೆ ಯೋಗ್ಯ ಪ್ರತಿಭೆಗಳ ಕೊರತೆಯಿದೆ. ಕಷ್ಟಕರವಾದ ಕೆಲಸಗಳನ್ನು ಮಾಡಲು ಪ್ರತಿಭಾನ್ವಿತ ವ್ಯಕ್ತಿಗಳನ್ನು ಹುಡುಕುವುದೇ ನಮಗೆ ಸಮಸ್ಯೆಯಾಗಿದೆ. ಅಮೆರಿಕಕ್ಕೆ ಭಾರತೀಯ ಪ್ರತಿಭೆಗಳಿಂದ ಅಪಾರ ಪ್ರಯೋಜನವಾಗಿದೆ. ಮತ್ತಷ್ಟು ಪ್ರತಿಭೆಗಳು ನಮ್ಮ ದೇಶಕ್ಕೆ ಬರಬೇಕು’ ಎಂದರು. ಮಸ್ಕ್‌ರ ಮಾತಿನಿಂದ ಭಾರತೀಯರಾದ ನಾವು ಸಹಜವಾಗಿಯೇ ಖುಷಿ ಪಟ್ಟೆವು. ಇದಾಗಿ ಕೆಲ ದಿನಗಳ ನಂತರ ವರದಿಯೊಂದು ಹೊರಬಿತ್ತು. ಅದೇನೆಂದರೆ, ಡಾ ವಿನ್ಸಿ ಟ್ರೇಡಿಂಗ್, ಎನ್.ಕೆ. ಸೆಕ್ಯುರಿಟೀಸ್ ಮೊದಲಾದ ಪ್ರತಿಷ್ಠಿತ ವಿದೇಶಿ ಕಂಪನಿಗಳು ಭಾರತೀಯ ತಂತ್ರಜ್ಞಾನ ಸಂಸ್ಥೆಗಳಲ್ಲಿ (ಐಐಟಿ) ಓದಿದ ವಿದ್ಯಾರ್ಥಿಗಳಿಗೆ ವಾರ್ಷಿಕ 2.8 ಕೋಟಿ ರು.ಗಿಂತಲೂ ಅಧಿಕ ಸಂಬಳದ ಪ್ಯಾಕೇಜ್ ನೀಡಿ ಕೆಲಸಕ್ಕೆ ನೇಮಿಸಿಕೊಳ್ಳುತ್ತಿವೆ. ಅಮೆಜಾನ್, ಫ್ಲಿಪ್‌ಕಾರ್ಟ್, ಓಲಾ, ಎಟರ್ನಲ್, ಒರ‍್ಯಾಕಲ್‌ನಂತಹ ಇತರ ದೈತ್ಯ ಕಂಪನಿಗಳೂ ಕನಿಷ್ಠ 30 ಲಕ್ಷ ರು.ಗಳಿಂದ ಕೋಟಿ ರು.ವರೆಗೂ ಪ್ಯಾಕೇಜ್ ನೀಡಲು ಮುಂದಾಗಿವೆ ಎಂಬುದು. ಈ ವರದಿ ಓದಿಯೂ ನಮಗೆ ಸಂತೋಷವೇ ಆಯಿತು. ಭಾರತೀಯ ವಿದ್ಯಾರ್ಥಿಗಳನ್ನು ವಿದೇಶಗಳ ಪ್ರತಿಷ್ಠಿತ ಕಂಪನಿಗಳೇ ಕೈಬೀಸಿ ಕರೆಯುವಂತಾಯಿತು ಎಂದು ಹೆಮ್ಮೆಪಟ್ಟೆವು. ಆದರೆ, ಭಾರತದಲ್ಲಿ ತಯಾರಾದ ಪ್ರತಿಭೆಗಳು ನಮ್ಮ ದೇಶದ ಕೈತಪ್ಪುತ್ತಿವೆ ಎಂಬುದನ್ನು ಮರೆತುಬಿಟ್ಟೆವು.
ರಾಷ್ಟ್ರೀಯ ನಷ್ಟವೋ? ಜಾಗತಿಕ ಪ್ರಭಾವವೋ?
ಭಾರತ ಇಂದು ಜಗತ್ತಿನ ಪ್ರತಿಭೆ ಮತ್ತು ಪ್ರಾವೀಣ್ಯದ ಕೇಂದ್ರ. ಐಐಟಿಗಳು, ಏಮ್ಸ್‌ಗಳು, ಐಐಎಂಗಳು ಜಾಗತಿಕ ಮಟ್ಟದ ಪ್ರತಿಭೆಗಳನ್ನು ಸೃಷ್ಟಿಮಾಡುತ್ತಿವೆ. ಆ್ಯಪಲ್, ಮೈಕ್ರೋಸಾಫ್ಟ್, ಗೂಗಲ್‌ನಂತಹ ಜಗತ್ತಿನ ಪ್ರಭಾವಿ ಕಂಪನಿಗಳ ಚುಕ್ಕಾಣಿಯನ್ನು ಭಾರತೀಯರೇ ಹಿಡಿದಿದ್ದಾರೆ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಯ (ಒಇಸಿಡಿ) ವರದಿ ಪ್ರಕಾರ ಭಾರತವು ಅತಿ ಹೆಚ್ಚು ವಿದ್ಯಾವಂತ ವಲಸಿಗರನ್ನು ಜಗತ್ತಿಗೆ ರಫ್ತು ಮಾಡುತ್ತದೆ. ಈ ಸಂಖ್ಯೆ ವಿಶ್ವಾದ್ಯಂತ 31.2 ಲಕ್ಷ. ಅಂದರೆ ಜಾಗತಿಕ ಪಾಲಿನ ಶೇ.65ನ್ನು ಪ್ರತಿನಿಧಿಸುತ್ತದೆ. ಭಾರತದ 74,455 ವೈದ್ಯರು ವಿದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. ರಾಷ್ಟ್ರೀಯ ಆರ್ಥಿಕ ಸಂಶೋಧನಾ ಮಂಡಳಿಯ (ಎನ್‌ಸಿಬಿಆರ್) ವರದಿ ಪ್ರಕಾರ 1/3ರಷ್ಟು ಐಐಟಿ ಪದವೀಧರರು ವಿದೇಶಗಳಿಗೆ ವಲಸೆ ಹೋಗಿದ್ದಾರೆ. ಶೇ.67ರಷ್ಟು ವಿಶೇಷ ಪರಿಣತಿಯುಳ್ಳ ಪ್ರಾಧ್ಯಾಪಕರು ಭಾರತದಲ್ಲಿ ಶಿಕ್ಷಣಕ್ಷೇತ್ರವನ್ನು ಬಲಪಡಿಸುವುದರ ಬದಲು ವಿದೇಶಗಳಿಗೆ ತೆರಳಲು ಆಸಕ್ತಿ ಹೊಂದಿದ್ದಾರೆ. ಭಾರತೀಯ ಟೆಕ್ ಕಂಪನಿಗಳಿಂದ ಅಮೆರಿಕದ ಆರ್ಥಿಕತೆಗೆ ಬರೋಬ್ಬರಿ 18 ಲಕ್ಷ ಕೋಟಿ ರು. ಆದಾಯ ದೊರೆಯುತ್ತಿದೆ. ಇದನ್ನು ಏನೆಂದು ಕರೆಯಬೇಕು? ಭಾರತ ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರುತ್ತಿದೆ ಎಂದು ಹೆಮ್ಮೆ ಪಡಬೇಕೊ ಅಥವಾ ಭಾರತ ತನ್ನ ಪ್ರತಿಭೆಗಳಿಂದ ವಂಚಿತವಾಗುತ್ತಿದೆ ಎಂದು ದುಃಖಿಸಬೇಕೊ?
ಪ್ರತಿಭಾ ಪಲಾಯನದ ಅಪಾಯ
ಪ್ರತಿಭಾ ಪಲಾಯನ ಎಂಬುದು ದಶಕಗಳಿಂದಲೂ ಚರ್ಚೆಯಲ್ಲಿರುವ ಸಂಗತಿ. ಆರ್ಥಿಕತೆ, ಉದ್ಯೋಗ ಸೃಷ್ಟಿ, ಸರ್ಕಾರಿ ನೀತಿಗಳ ವೈಫಲ್ಯ, ವೈಯಕ್ತಿಕ ಆಸಕ್ತಿ ಅಥವಾ ಜಾಗತಿಕ ಅವಕಾಶಗಳಂತಹ ಕಾರಣಗಳು ಯಾವುದೇ ದೇಶದ ಪ್ರತಿಭೆಗಳು ವಿದೇಶಗಳಿಗೆ ವಲಸೆ ಹೋಗುವಂತೆ ಮಾಡುತ್ತವೆ. ಸಾಮಾನ್ಯವಾಗಿ ಅಭಿವೃದ್ಧಿಯಲ್ಲಿ ಹಿಂದುಳಿದ ದೇಶಗಳ ಪ್ರತಿಭಾನ್ವಿತರು ಅಭಿವೃದ್ಧಿ ಹೊಂದಿದ ದೇಶಗಳಿಗೆ ವಲಸೆ ಹೋಗುತ್ತಾರೆ. ಅಂದರೆ ಇದು ಏಕಮುಖವಾದ ಪ್ರಕ್ರಿಯೆ. ಇದು ಜಾಗತಿಕವಾಗಿ ಅಸಮತೋಲನ ಉಂಟುಮಾಡುವ ಅವೈಜ್ಞಾನಿಕ ಬೆಳವಣಿಗೆ ಎಂದು ಯುನೆಸ್ಕೊ ಸಹ ಕಳವಳ ವ್ಯಕ್ತಪಡಿಸಿದೆ. ಭಾರತದಂತಹ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಕ್ಕೂ ಪ್ರತಿಭಾ ಪಲಾಯನದ ಅಪಾಯದಿಂದ ತಪ್ಪಿಸಿಕೊಳ್ಳಲಾಗುತ್ತಿಲ್ಲ. ಇಲ್ಲಿನ ಐಐಟಿ, ಏಮ್ಸ್‌ನಂತಹ ಕೇಂದ್ರಗಳು ಪಶ್ಚಿಮಕ್ಕೆ ಬೌದ್ಧಿಕ ಮತ್ತು ಆರ್ಥಿಕ ಎರಡೂ ಬಂಡವಾಳದ ಪಲಾಯನಕ್ಕೆ ಮಾರ್ಗಗಳಾಗಿವೆ. ಈ ಮಹಾವಲಸೆಯು ಭಾರತದ ಆರ್ಥಿಕ ಪ್ರಗತಿ ಮತ್ತು ನಾವೀನ್ಯತೆ ಕ್ಷೇತ್ರಕ್ಕೆ ಬಹುದೊಡ್ಡ ಬೆದರಿಕೆ ಒಡ್ಡುತ್ತಿದೆ.
ಈ ಬೆಳವಣಿಗೆಗೆ ಹಲವಾರು ಕಾರಣಗಳಿವೆ. ಇಂದು ಭಾರತದಲ್ಲಿ ಜಾಗತಿಕ ಮನ್ನಣೆ ಹೊಂದಿರುವ, STEM (Science, Technology, Engineering, and Mathematics) ಕೋರ್ಸ್‌ಗಳಲ್ಲಿ ಪರಿಣತಿ ಹೊಂದಿರುವ ಐಐಟಿ, ಐಐಎಂನಂತಹ ಸಂಸ್ಥೆಗಳು ಇದ್ದರೂ ಸೀಟುಗಳ ಸಂಖ್ಯೆ ಮಾತ್ರ ಸೀಮಿತವಾಗಿದೆ. 2025ರಲ್ಲಿ ಈ ಸಂಸ್ಥೆಗಳು ಜೆಇಇ ಪರೀಕ್ಷೆಗೆ ಹಾಜರಾದ 4,76,557 ವಿದ್ಯಾರ್ಥಿಗಳ ಪೈಕಿ ಕೇವಲ 17,760 ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡಿವೆ. ಅಂದರೆ ಪ್ರತಿ 83 ವಿದ್ಯಾರ್ಥಿಗಳಿಗೆ ಒಂದು ಸೀಟು ಮಾತ್ರ. ಈ ಸಂಖ್ಯೆ ನಮ್ಮ ಉನ್ನತ ಶಿಕ್ಷಣ ಸಾಮರ್ಥ್ಯದ ಮಿತಿಗಳನ್ನು ತಿಳಿಸುತ್ತದೆ. ಅಲ್ಲದೆ, ಇಂಥ ಸಂಸ್ಥೆಗಳಲ್ಲಿ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ವ್ಯಾಸಂಗ ಮಾಡಬೇಕಾದರೆ ವಿದೇಶಗಳಿಗೆ ತೆರಳುವುದು ಅನಿವಾರ್ಯ. ಇಂಥ ಸಮಸ್ಯೆಗಳು ಪ್ರತಿಭೆಗಳು ವಿದೇಶಗಳತ್ತ ಮುಖ ಮಾಡುವಂತೆ ಮಾಡುತ್ತವೆ. ಭಾರತದಲ್ಲಿ ಸಿಗುತ್ತಿರುವ ಆದಾಯದ ಮಿತಿಯೂ ವಿದೇಶ ವಲಸೆಗೆ ಕಾರಣ. ಉದಾಹರಣೆಗೆ, ಎಂ.ಡಿ. ಮುಗಿಸಿದ ವೈದ್ಯನೊಬ್ಬ ಭಾರತದಲ್ಲಿ ವಾರ್ಷಿಕ 30 ಲಕ್ಷ ರು. ಗಳಿಸಿದರೆ, ಅದೇ ಅಮೆರಿಕದಲ್ಲಿ 4.5 ಕೋಟಿ ರು. ಗಳಿಸುತ್ತಾನೆ. ಭಾರತದಲ್ಲಿ ಒಬ್ಬ ಇಂಜಿನಿಯರ್ 25-40 ಲಕ್ಷ ರು. ಆದಾಯ ಪಡೆದರೆ, ಅಮೆರಿಕದಲ್ಲಿ 94 ಲಕ್ಷ ರು. ಪಡೆಯುತ್ತಾನೆ. ಶಿಕ್ಷಣ ತಜ್ಞರಿಗೆ, ಸಂಶೋಧಕರಿಗೆ ಭಾರತದಲ್ಲಿನ ಕಡಿಮೆ ವರಮಾನ ವಿದೇಶಗಳಿಗೆ ತೆರಳುವ ಅನಿವಾರ್ಯತೆ ಸೃಷ್ಟಿಸಿದೆ.
ಸರ್ಕಾರಗಳ ಮುಂದೆ ಸವಾಲು
ಕಳೆದೊಂದು ದಶಕದಿಂದ ಉದ್ಯಮ ಸ್ಥಾಪನೆ, ಡಿಜಿಟಲ್ ಮೂಲಸೌಕರ್ಯ ಅಭಿವೃದ್ಧಿ, ಶೈಕ್ಷಣಿಕ ಸುಧಾರಣೆ ಮೊದಲಾದ ಕ್ರಮಗಳ ಮೂಲಕ ಕೇಂದ್ರ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ಸಂಶೋಧನೆ ಮತ್ತು ಹೂಡಿಕೆಯನ್ನು ಉತ್ತೇಜಿಸಲು ಅಮೆರಿಕದೊಂದಿಗೆ ಪಾಲುದಾರಿಕೆ ಮಾಡಿಕೊಂಡು ಮಹತ್ವದ ಹೆಜ್ಜೆಯಿಟ್ಟಿದೆ. ಸ್ಯಾನ್ ಫ್ರಾನ್ಸಿಸ್ಕೊ-ಬೆಂಗಳೂರು ಎಐ ಸಂಶೋಧನಾ ಯೋಜನೆ ಇದಕ್ಕೊಂದು ಉತ್ತಮ ಉದಾಹರಣೆ. ಐಐಟಿ ಮತ್ತು ಐಐಎಂಗಳ ಕಾರ್ಯಾಚರಣೆ ವೆಚ್ಚದ ಶೇ.75-80ರಷ್ಟನ್ನು ಭಾರತ ಸರ್ಕಾರವೇ ಭರಿಸುತ್ತದೆ. ಭಾರತ ಎಐ ಸಂಶೋಧನಾ ಕೇಂದ್ರವಾಗಿ ವೇಗವಾಗಿ ಹೊರಹೊಮ್ಮುತ್ತಿದ್ದು, ಎಐ ಸಾಧನೆಯಲ್ಲಿ ಜಾಗತಿಕವಾಗಿ 13ನೇ ಸ್ಥಾನದಲ್ಲಿದೆ. ಆದರೂ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನ ವ್ಯವಸ್ಥೆ, ಅತ್ಯಾಧುನಿಕ ಸಂಶೋಧನೆಗೆ ಪ್ರವೇಶ, ಆಕರ್ಷಕ ವೇತನದಿಂದಾಗಿ ಹೆಚ್ಚಿನ ವೃತ್ತಿಪರರು ವಿದೇಶದಲ್ಲಿ, ವಿಶೇಷವಾಗಿ ಅಮೆರಿಕದಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರಿಸಲು ಆಕರ್ಷಿತರಾಗುತ್ತಿದ್ದಾರೆ.
ತನ್ನ ಪ್ರತಿಭೆಗಳನ್ನು ತನ್ನಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ವಜ್ರ ಯೋಜನೆ, ಇನ್‌ಸ್ಪೈರ್ ಯೋಜನೆ, ಪ್ರಧಾನ ಮಂತ್ರಿ ಸಂಶೋಧನಾ ಯೋಜನೆ, ರಾಮಾನುಜನ್ ಫೆಲೋಶಿಫ್ ಯೋಜನೆ ಮೊದಲಾದವುಗಳ ಮೂಲಕ ಸಂಶೋಧಕರು ಮತ್ತು ವಿಜ್ಞಾನಿಗಳು ಭಾರತದಲ್ಲೇ ನೆಲೆಸುವಂತೆ ಮಾಡಲು ಪ್ರಯತ್ನಗಳು ನಡೆದಿವೆ. ಈ ವರ್ಷ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಈ ಮೊದಲಿನ ಸರಾಸರಿ 6,000-8,000 ಕೋಟಿ ರು.ಗಳಿಂದ 20,000 ಕೋಟಿ ರು.ಗಳಿಗೆ ಬಜೆಟ್ ಹಂಚಿಕೆಯಲ್ಲಿ ಏರಿಕೆ ಮಾಡಲಾಗಿದೆ. ಇವುಗಳ ಹೊರತಾಗಿಯೂ ಪ್ರತಿಭೆಗಳನ್ನು ಹಿಡಿದಿಟ್ಟುಕೊಳ್ಳುವುದು ಭಾರತಕ್ಕೆ ಕಷ್ಟವಾಗುತ್ತಿದೆ. ಭಾರತಕ್ಕೆ ಮರಳಲು ಕೆಲವರು ಮನಸ್ಸು ಮಾಡುತ್ತಿದ್ದರೂ ವಿದೇಶಗಳಿಗೆ ದಂಡಿಯಾಗಿ ತೆರಳುತ್ತಿರುವವರ ಮುಂದೆ ಅವರ ಸಂಖ್ಯೆ ತೀರಾ ಕಡಿಮೆಯಿದೆ.
80ರ ದಶಕದಲ್ಲಿ ಪ್ರತಿಭಾ ಪಲಾಯನವೆಂಬುದು ಚೀನಾವನ್ನು ತತ್ತರಿಸುವಂತೆ ಮಾಡಿತ್ತು. ವಿದೇಶ ವ್ಯಾಸಂಗಕ್ಕೆ ತೆರಳಿದ್ದ ಅದರ ಶೇ.70ರಷ್ಟು ವಿದ್ಯಾರ್ಥಿಗಳು ದೇಶಕ್ಕೆ ಹಿಂತಿರುಗುತ್ತಿರಲಿಲ್ಲ. ಅಂಥ ಬೃಹತ್ ದೇಶದಲ್ಲಿ ಪ್ರತಿಭೆಗಳ ಕೊರತೆ ಅನ್ಯಾನ್ಯ ಕ್ಷೇತ್ರಗಳ ಹಿನ್ನಡೆಗೆ ಕಾರಣವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಯುವಮನಸ್ಸುಗಳನ್ನು ಸೆಳೆಯಲು ಮುಂದಾಯಿತು. ಮಿಲಿಟರಿ ಆಯೋಗದ ಮುಖ್ಯಸ್ಥರಾಗಿದ್ದ ಡೆಂಗ್ ಕ್ಸಿಯಾಪಿಂಗ್ ಪ್ರತಿಭೆಗಳು ಸ್ವದೇಶಕ್ಕೆ ಮರಳುವುದನ್ನು ರಾಷ್ಟ್ರೀಯ ನೀತಿಯಾಗಿ ಪ್ರತಿಪಾದಿಸಿದರು. 38 ದೇಶಗಳಲ್ಲಿ ಶೈಕ್ಷಣಿಕ ಬ್ಯೂರೋಗಳ ಸ್ಥಾಪನೆ, ವಿದೇಶಿ ತಂತ್ರಜ್ಞರನ್ನು ಸ್ಥಳೀಯ ಕೈಗಾರಿಕೆಗಳೊಂದಿಗೆ ಸಂಪರ್ಕಿಸುವ ಯೋಜನೆ, 100 ಪ್ರತಿಭಾ ಕಾರ್ಯಕ್ರಮ, ಹಣಕಾಸು - ವಸತಿ ಸವಲತ್ತುಗಳ ಅಭಿವೃದ್ಧಿ, ಸಂಶೋಧಕರಿಗೆ 2 ಮಿಲಿಯನ್ ಯುವಾನ್ ಅನುದಾನ, ಪಿಎಚ್‌ಡಿಗೆ ಆದ್ಯತೆ.. ಹೀಗೆ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕೇಂದ್ರವಾಗಿ ತನ್ನನ್ನು ಮರುರೂಪಿಸಿಕೊಳ್ಳಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಂಡಿತು. ಇದರಿಂದಾಗಿ ಪ್ರತಿಭಾ ಪಲಾಯನದ ಅಪಾಯವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿತು.
ಇಂದು ಭಾರತ ಜಗತ್ತಿನ ದೈತ್ಯ ಶಕ್ತಿಯಾಗುವತ್ತ ದಾಪುಗಾಲಿಡುತ್ತಿದೆ. 2047ರ ವೇಳೆಗೆ ‘ವಿಕಸಿತ ಭಾರತ’ವಾಗುವ ಮಹತ್ತರವಾದ ಸಂಕಲ್ಪ ನಮ್ಮ ಕಣ್ಣಮುಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತದಂತಹ ಪರಿಕಲ್ಪನೆಗಳು ಸಾಕಷ್ಟು ಪರಿವರ್ತನೆಗಳನ್ನೂ ತಂದಿವೆ. ಆದರೆ ಭಾರತದ ಪ್ರತಿಭೆಗಳು ಇಲ್ಲಿನ ಕೈತಪ್ಪುತ್ತಿರುವುದು ಭಾರತದ ಭವಿಷ್ಯಕ್ಕೆ ಅಪಾಯಕಾರಿ. ಈ ನಿಟ್ಟಿನಲ್ಲಿ ಸರ್ಕಾರಗಳು ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ. ಇದೆಲ್ಲಕ್ಕಿಂತ ಮೊದಲು ವಿದೇಶಿ ಕೆಲಸ ಶೇಷ್ಠ ಎಂಬ ಭಾರತೀಯರ ಮಾನಸಿಕತೆಯಲ್ಲಿಯೇ ಬದಲಾವಣೆ ಬೇಕಿದೆ.
