ಇನ್ನೊಮ್ಮೆ ಪ್ರೀತಿಯಲ್ಲಿ ಬೀಳೋದು, ಮದುವೆ ಆಗೋದು ನನ್ನ ಇಚ್ಛೆ. ಮದುವೆಯಾಗದೆಯೇ ಒಬ್ಬರ ಜತೆಗಿರುವ ಆಯ್ಕೆಯೂ ನನಗಿದೆ. ನನ್ನ ಕೆಲಸ, ನೃತ್ಯ, ದೈಹಿಕ ಸ್ವಾಸ್ಥ್ಯದ ಬಗ್ಗೆ ಬೇಕಿದ್ದರೆ ಮಾತನಾಡಿ. ಆದರೆ, ನನಗೆ ನಾನೇ ಪ್ರಾಶಸ್ತ್ಯ ಕೊಟ್ಟುಕೊಂಡು ತೆಗೆದುಕೊಳ್ಳುವ ನಿರ್ಧಾರಗಳ ಆಧಾರದಲ್ಲಿ ನನ್ನನ್ನು ಅಳೆಯಬೇಡಿ.
ಪವರ್ ಪಾಯಿಂಟ್
ಮಲೈಕಾ ಅರೋರಾ
ಬಾಲಿವುಡ್ ನಟಿ, ನೃತ್ಯ ಕಲಾವಿದೆ
ನಮ್ಮ ಸಮಾಜ ಪುರುಷ ಪ್ರಧಾನ ಎಂಬುದರಲ್ಲಿ ಎರಡು ಮಾತಿಲ್ಲ. ಒಂದೊಮ್ಮೆ ಪರಿಸ್ಥಿತಿ ತೀರಾ ಕೆಟ್ಟದಾಗಿತ್ತು. ಅದರಲ್ಲೂ ಮಹಿಳೆಯರ ಸ್ಥಿತಿಯನ್ನು ಕೇಳುವುದೇ ಬೇಡ. ಹಾಗೆಂದ ಮಾತ್ರಕ್ಕೆ, ಇಂದು ಎಲ್ಲವೂ ಸರಿಯಾಗಿದೆ ಎಂದಲ್ಲ. ಎಲ್ಲಿ ನೋಡಿದರಲ್ಲಿ ದ್ವಂದ್ವ ನೀತಿ ತಾಂಡವವಾಡುತ್ತಿದೆ. ಪುರುಷರಿಗೆ ಒಂದು ನ್ಯಾಯವಾದರೆ ಮಹಿಳೆಯರಿಗೆ ಇನ್ನೊಂದು ನ್ಯಾಯ. ಗಂಡಸರು ಮಾಡಿದ ಕೆಲಸವನ್ನು ಸ್ವೀಕರಿಸುವ ಜನ, ಅದನ್ನೇ ಸ್ತ್ರೀಯೊಬ್ಬಳು ಮಾಡಿದರೆ ಸಹಿಸುವುದಿಲ್ಲ. ಆಕೆಯನ್ನು ಪ್ರಶ್ನಿಸುತ್ತಾರೆ, ಟೀಕಿಸುತ್ತಾರೆ.
ಇದಕ್ಕೊಂದು ಉದಾಹರಣೆ ಹೇಳುತ್ತೇನೆ ಕೇಳಿ. ಪುರುಷನೊಬ್ಬ ವಿಚ್ಛೇದಿತನಾದರೆ, ‘ಪಾಪ, ಅವನ ಹೆಂಡತಿ ಬಿಟ್ಟುಹೋದಳಂತೆ’ ಎಂದು ಮಾತನಾಡುತ್ತಾರೆ. ಅದೇ ಒಬ್ಬ ಮಹಿಳೆ ವಿಚ್ಛೇದನ ಪಡೆದುಕೊಂಡರೆ, ಅದೇ ಜನರ ಮಾತಿನ ಧಾಟಿಯೇ ಬದಲಾಗುತ್ತದೆ. ‘ಆಕೆಯೇ ಏನೋ ತಪ್ಪು ಮಾಡಿರಬೇಕು’ ಎಂದು ಅವಳ ಮೇಲೆಯೇ ಗೂಬೆ ಕೂರಿಸುತ್ತಾರೆ. ಇಂಥದ್ದನ್ನೆಲ್ಲಾ ನೋಡಿದರೆ ನಿಜವಾಗಿಯೂ ನಾವು 2025ರಲ್ಲಿ ಇದ್ದೇವೆಯೇ? ಎಂದು ಆಶ್ಚರ್ಯವಾಗುತ್ತದೆ.
ದ್ವಂದ್ವಕ್ಕೆ ಇನ್ನೊಂದು ಉದಾಹರಣೆ:
ಒಬ್ಬ ಗಂಡಸು ತನಗಿಂತ ಅರ್ಧ ವಯಸ್ಸಿನಾಕೆಯನ್ನು ಮದುವೆಯಾದರೆ, ಸಮಾಜಕ್ಕೆ ಆತ ಪರಾಕ್ರಮಿಯಂತೆ ಕಾಣುತ್ತಾನೆ. ‘ಯಬ್ಬಾ, ಎಂಥಾ ಗಂಡು!’ ಎಂಬ ಮೆಚ್ಚುಗೆ ಪಡೆಯುತ್ತಾನೆ. ಈಗ ಅವನ ಜಾಗದಲ್ಲಿ ಹೆಣ್ಣನ್ನು ಕಲ್ಪಿಸಿಕೊಳ್ಳಿ. ‘ಇಷ್ಟು ವಯಸ್ಸಾಗಿದೆ, ಆದರೂ ವಿವಾಹವಾಗುತ್ತಿದ್ದಾಳೆಯೇ? ಮಕ್ಕಳಿದ್ದರೂ ಇವಳಿಗೆ ಇನ್ನೊಂದು ಮದುವೆ ಬೇಕೇ?’ ಎಂಬ ಮಾತು ಸಹಜವಾಗಿ ಬರುತ್ತದೆ. ಚಾರಿತ್ರ್ಯಹರಣ ಮಾಡುವಂತಹ ಮಾತುಗಳನ್ನೂ ಕೇಳಬೇಕಾಗುತ್ತದೆ. ಅದೇ ಪುರುಷನ ವಿಷಯದಲ್ಲಿ ಆತನ ವಯಸ್ಸು, ಮಕ್ಕಳು ಎಲ್ಲಾ ಗಣನೆಗೇ ಬರುವುದಿಲ್ಲ.
ಜನರಿಗೆ ಸ್ವಾವಲಂಬಿ ಸ್ತ್ರೀ ಇಷ್ಟವಿಲ್ಲ:
ನಮ್ಮ ಜನರಿಗೆ ಸ್ವಾವಲಂಬಿ ಮಹಿಳೆಯರನ್ನು ಕಂಡರೆ ಅದ್ಯಾಕೋ ಇಷ್ಟವಿದ್ದಂತಿಲ್ಲ. ಹೇಳಿದ ಹಾಗೆ ಕೇಳಿಕೊಂಡು, ಎದುರು ಮಾತನಾಡದೆ, ತಮಗೆ ವಿಧೇಯವಾಗಿ ಇರುವ, ಅನಿಸಿಕೆಗಳನ್ನು ಮುಕ್ತವಾಗಿ ಹೇಳದ ಮಹಿಳೆಯರೇ ಪುರುಷರಿಗೆ ಇಷ್ಟವಾಗುತ್ತಾರೇನೋ. ಆದರೆ, ನನಗೆ ಅಂಥವರನ್ನು ಕಂಡರೆ ಬೇಸರವಾಗುತ್ತದೆ. ಮಹಿಳೆಯರು ಗಟ್ಟಿಯಾಗಿದ್ದರೆ ಅದು ಸಮಾಜದ ಕಣ್ಣು ಕುಕ್ಕುತ್ತದೆ. ಆದರೆ ನಾನು ಇಂಥವಕ್ಕೆಲ್ಲಾ ಎಂದೂ ತಲೆಕೆಡಿಸಿಕೊಂಡಿಲ್ಲ. ನನ್ನ ಬದುಕನ್ನು ನಾನು ಜೀವಿಸುತ್ತಿದ್ದೇನೆ, ಅನ್ಯರಿಗೂ ಅದೇ ಸಲಹೆ ಕೊಡುತ್ತೇನೆ.
ಮಹಿಳೆಯರ ಶೆಲ್ಫ್‌ಲೈಫ್ ಕಮ್ಮಿ:
ಬಾಲಿವುಡ್‌ಗೆ ಕಾಲಿಡುವ ಪ್ರತಿಯೊಬ್ಬ ಹೆಣ್ಣಿಗೆ ಎಕ್ಸ್‌ಪೈರಿ ಡೇಟ್ ಇರುತ್ತದೆ. ವಸ್ತುಗಳಂತೆ ನಮಗೂ ಶೆಲ್ಫ್ ಲೈಫ್ (ಬಾಳಿಕೆಗೆ ಬರುವ ಅವಧಿ) ನಿಗದಿಯಾಗಿರುತ್ತದೆ. ಪುರುಷರಿಗೆ ಸಿಗುವುದರಲ್ಲಿ ಅರ್ಧದಷ್ಟು ಮೆಚ್ಚುಗೆ ಪಡೆಯಲು ಅವರಿಗಿಂತ ಆಕೆ ಎರಡು ಪಟ್ಟು ಶ್ರಮವಹಿಸಬೇಕು. ಒಮ್ಮೆ ಮದುವೆಯಾಗಿ, ಮಕ್ಕಳಾಗಿಬಿಟ್ಟರೆ, ಆಕೆಯ ವೃತ್ತಿಜೀವನ ಮುಗಿಯಿತು ಎಂದು ಪರಿಗಣಿಸಲಾಗುತ್ತದೆ. ನನಗಂತೂ ಇದು ಹಾಸ್ಯಾಸ್ಪದವಾಗಿ ಕಾಣುತ್ತದೆ.
ನಾನು ಈ ಎಲ್ಲಾ ಕಟ್ಟಳೆಗಳನ್ನು ಮೀರಿ ನಿಂತಿದ್ದೇನೆ. ಸುಮಾರು 30 ವರ್ಷಗಳಿಂದ ನೃತ್ಯ, ನಿರೂಪಣೆಯಲ್ಲಿ ತೊಡಗಿದ್ದೇನೆ. ಚಿತ್ರ ನಿರ್ಮಾಣಕ್ಕೂ ಕೈ ಹಾಕಿದ್ದೇನೆ.
ನನ್ನ ಬದುಕು ನನ್ನದು:
ನಾನು 25 ವರ್ಷಕ್ಕೇ ಮದುವೆಯಾಗಲು ಹೊರಟಾಗ ನನ್ನ ಅಮ್ಮನಿಗೆ ಅಚ್ಚರಿಯಾಗಿತ್ತು. ‘ಇಷ್ಟಪಟ್ಟ ಮೊದಲ ಹುಡುಗನನ್ನು ವರಿಸಬೇಡ. ಬದಲಿಗೆ ಹೊರಗೆ ಹೋಗಿ ಪ್ರಪಂಚವನ್ನು ನೋಡು, ಆನಂದಿಸು, ಅನುಭವಿಸು’ ಎಂದು ಅವರು ಹೇಳಿದ್ದರು. ಆದರೆ ನಾನದನ್ನು ಕೇಳಲಿಲ್ಲ. ಮದುವೆಯಾಗಿಬಿಟ್ಟೆ. ಆಗ ನನಗೆ, ನಾನಿಷ್ಟು ದೂರ ಬರುತ್ತೇನೆ ಎಂದು ತಿಳಿದಿರಲಿಲ್ಲ. ಕೆಲ ಹಾಡುಗಳಿಗೆ ಹೆಜ್ಜೆ ಹಾಕಿ, ಮದುವೆ-ಮಕ್ಕಳೆಂದು ಸೆಟಲ್ ಆಗಿಬಿಡುವ ಯೋಚನೆಯಲ್ಲಿದ್ದೆ. ಆಗ ನಾನೆಷ್ಟು ಮಹತ್ವಾಕಾಂಕ್ಷಿಯೆಂದು ನನಗೇ ಗೊತ್ತಿರಲಿಲ್ಲ.
ವರ್ಷ ಕಳೆದಂತೆ ನಾನೇನೆಂದು ಅರ್ಥವಾಗತೊಡಗಿತು. ಏನಾದರೂ ಹೊಸತನ್ನು ಮಾಡುವ ಹಂಬಲ ಹೆಚ್ಚಾಯಿತು. ಇನ್ನೊಮ್ಮೆ ಪ್ರೀತಿಯಲ್ಲಿ ಬೀಳೋದು, ಮದುವೆ ಆಗೋದು ನನ್ನ ಇಚ್ಛೆ. ಮದುವೆಯಾಗದೆಯೇ ಒಬ್ಬರ ಜತೆಗಿರುವ ಆಯ್ಕೆಯೂ ನನಗಿದೆ. ನನ್ನ ಕೆಲಸ, ನೃತ್ಯ, ದೈಹಿಕ ಸ್ವಾಸ್ಥ್ಯದ ಬಗ್ಗೆ ಬೇಕಿದ್ದರೆ ಮಾತನಾಡಿ. ಆದರೆ, ನನಗೆ ನಾನೇ ಪ್ರಾಶಸ್ತ್ಯ ಕೊಟ್ಟುಕೊಂಡು ತೆಗೆದುಕೊಳ್ಳುವ ನಿರ್ಧಾರಗಳ ಆಧಾರದಲ್ಲಿ ನನ್ನನ್ನು ಅಳೆಯಬೇಡಿ.
ಸುಧಾರಣೆಯಾಗುತ್ತಿದೆ:
ಕಾಲಕ್ರಮೇಣ ಸಮಾಜದ ನಿಲುವಿನಲ್ಲಿ ಕೊಂಚ ಬದಲಾವಣೆಯಾಗುತ್ತಿದೆ. ದೃಷ್ಟಿಕೋನ ಪರಿವರ್ತನೆ ಒಮ್ಮಿಂದೊಮ್ಮೆಲೆ ಆಗುವುದಿಲ್ಲ. ಬದಲಿಗೆ, ಸ್ಥಿತಿ ಕೊಂಚ ಕೊಂಚಕೊಂಚವೇ ಸುಧಾರಿಸುತ್ತಿದೆ. ಕೆಲ ಮಹಿಳೆಯರು ಈಗ ತಮ್ಮ ಸ್ವಾತಂತ್ರ್ಯ, ಹಕ್ಕುಗಳ ಬಗ್ಗೆ ಯೋಚಿಸಲು ಶುರು ಮಾಡಿದ್ದಾರೆ. ಅವುಗಳ ಅಭಿವ್ಯಕ್ತಿಗೆ ಕೆಲ ವೇದಿಕೆಗಳೂ ಸೃಷ್ಟಿಯಾಗಿವೆ.
ದಪ್ಪಚರ್ಮ ಬೆಳೆಸಿಕೊಳ್ಳಿ:
ಯಶಸ್ವಿಯಾಗಬೇಕು ಎಂದರೆ ಸ್ವಲ್ಪ ದಪ್ಪ ಚರ್ಮವನ್ನು ಹೊಂದಿರಲೇಬೇಕು. ಕೆಲವೊಮ್ಮೆ ಏನನ್ನಾದರೂ ಓದಿದಾಗ ಅಥವಾ ಯಾರಾದರೂ ಏನಾದರೂ ಹೇಳಿದಾಗ ಬೇಸರವಾಗುತ್ತದೆ. ಕೆಲವೊಮ್ಮೆ ಅಳುವೇ ಬಂದುಬಿಡುತ್ತದೆ. ಆದರೆ ನಾವದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬಾರದು. ಯಾರೋ ಹತ್ತು ಜನ ನಮ್ಮ ಜೀವನವನ್ನು ನಿರ್ಧರಿಸುವಂತಿರಬಾರದು. ಹಾಗೊಂದು ವೇಳೆ ಆದರೆ, ಜೀವನದಲ್ಲಿ ಮುಂದುವರೆಯಲು ಸಾಧ್ಯವೇ ಆಗುವುದಿಲ್ಲ.
