ಭಾರತೀಯ ಪ್ರತಿಭೆಗಳಲ್ಲಿ ಸ್ವಾಭಿಮಾನ ಕೊರತೆ: ಸೇತುರಾಂ

| Published : Jan 17 2024, 01:46 AM IST / Updated: Jan 17 2024, 01:47 AM IST

ಸಾರಾಂಶ

ಇಂದಿನ ಮನುಕುಲಕ್ಕೆ ಬುದ್ಧಿ ಇದ್ದು, ನೈತಿಕ ಮೌಲ್ಯಗಳಲ್ಲಿ ಕೊರತೆಯಿದೆ. ಭಾರತವು ಎಲ್ಲ ಬಗೆಯಿಂದ ಹೇರಳ ಸಂಪತ್ಭರಿತ ರಾಷ್ಟ್ರವಾಗಿದೆ. ಆತ್ಮಾಭಿಮಾನ ಇಲ್ಲದೇ ಇನ್ನೂ ನಮ್ಮಲ್ಲಿ ದಾಸ್ಯಭಾವನ ಹಾಗೇ ಉಳಿದಿದೆ ಎಂದು ನಿರ್ದೇಶಕ, ಕಿರುತೆರೆ ನಟ ಹಾಗೂ ಬರಹಗಾರ ಎಸ್.ಎನ್. ಸೇತುರಾಂ ಶಿವಮೊಗ್ಗದ ಜಾವಳ್ಳಿ ಕಾಲೇಜಿನಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಇಂದಿನ ಮನುಕುಲಕ್ಕೆ ಬುದ್ಧಿ ಇದ್ದು, ನೈತಿಕ ಮೌಲ್ಯಗಳಲ್ಲಿ ಕೊರತೆಯಿದೆ ಎಂದು ನಿರ್ದೇಶಕ, ಕಿರುತೆರೆ ನಟ ಹಾಗೂ ಬರಹಗಾರ ಎಸ್.ಎನ್. ಸೇತುರಾಂ ಹೇಳಿದರು.

ಪಟ್ಟಣ ಸಮೀಪದ ಜಾವಳ್ಳಿಯ ಶ್ರೀ ಅರಬಿಂದೋ ಸ್ವತಂತ್ರ ಪದವಿಪೂರ್ವ ಕಾಲೇಜಿನ 2023- 24ನೇ ಸಾಲಿನ 21ನೇ ವಾರ್ಷಿಕೋತ್ಸವ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಭಾರತವು ಎಲ್ಲ ಬಗೆಯಿಂದ ಹೇರಳ ಸಂಪತ್ಭರಿತ ರಾಷ್ಟ್ರವಾಗಿದೆ. ನಮ್ಮಲ್ಲಿ ಎಲ್ಲ ಬಗೆಯ ಪ್ರತಿಭೆಗಳಿದ್ದರೂ ಸ್ವಾಭಿಮಾನದ ಕೊರತೆಯಿದೆ. ಆತ್ಮಾಭಿಮಾನ ಇಲ್ಲದೇ ಇನ್ನೂ ನಮ್ಮಲ್ಲಿ ದಾಸ್ಯಭಾವನ ಹಾಗೇ ಉಳಿದಿದೆ ಎಂದರು.

ಯುವಕರು ತಮ್ಮಲ್ಲಿ ಆಸಕ್ತಿ ಮತ್ತು ದಿಕ್ಕೂಚಿ ಹೊಂದಿ ಇವೆರಡರ ಸಮ್ಮಿಲನವಾದರೆ ಉನ್ನತಮಟ್ಟಕ್ಕೆ ಏರಲು ಸಾಧ್ಯ ಆಗುತ್ತದೆ. ವಿಶ್ವದ ಎಲ್ಲ ದೇಶಗಳು ಕೋವಿಡ್‌ನಿಂದ ನಲುಗುತ್ತಿದ್ದಾಗ ನಮ್ಮ ದೇಶ ಮಾತ್ರ ಕೋವಿಡ್ ಲಸಿಕೆ ಪ್ರಪಂಚಕ್ಕೆ ಕೊಡುಗೆಯಾಗಿ ನೀಡಿದ ಏಕೈಕ ರಾಷ್ಟ್ರವಾಗಿದೆ. ಭಾರತವು ಇತರೆ ದೇಶಗಳಿಗೆ ಆಹಾರ ಪೂರೈಕೆ ಮಾಡುತ್ತಿರುವ ಶ್ರೀಮಂತ ದೇಶವಾಗಿದೆ. ಆದರ್ಶ ವ್ಯಕ್ತಿಗಳ ತತ್ವ -ಸಿದ್ಧಾಂತ ಅರಿತು ನಾವೂ ಮತ್ತೊಬ್ಬ ಆದರ್ಶ ವ್ಯಕ್ತಿ ಆಗಬೇಕು. ನಮ್ಮ ದೇಶದ ಯುವಜನತೆಯಲ್ಲಿ ಶಕ್ತಿ ಸಾಮರ್ಥ್ಯ ಇದೆ. ಆದರೆ ಅವು ಕಾರ್ಯಗತ ಆಗಬೇಕು ಎಂದು ಹೇಳಿದರು.

ಇಸ್ರೋ ಬಾಹ್ಯಾಕಾಶ ಸಂಸ್ಥೆ ಮಾಜಿ ಅಧ್ಯಕ್ಷ ಹಾಗೂ ಶ್ರಿ ಅರಬಿಂದೋ ಫೌಂಡೇಷನ್ ಫಾರ್ ಎಜುಕೇಷನ್ ಟ್ರಸ್ಟ್ ಗೌರವಾಧ್ಯಕ್ಷ ಹಾಗೂ ಪದ್ಮಭೂಷಣ ಡಾ. ಬಿ.ಎನ್. ಸುರೇಶ್ ಮಾತನಾಡಿ, ಸ್ವಾಮಿ ವಿವೇಕಾನಂದರ ಆದರ್ಶ, ತತ್ವ ಹಾಗೂ ಬರವಣಿಗೆಯನ್ನು ಇಂದಿನ ಯುವಜನಾಂಗ ತಿಳಿದುಕೊಂಡು ಅದರಂತೆ ನಡೆಯಬೇಕು. ಯಾವುದೇ ವ್ಯಕ್ತಿಯು ಪರಿಪೂರ್ಣ ಆಗಲು ಶಿಕ್ಷಣದಿಂದ ಮಾತ್ರ ಸಾಧ್ಯ. ವಿದ್ಯಾರ್ಜನೆಯಿಂದ ವಿದ್ಯಾರ್ಜನೆ ಹೊಂದಬೇಕು ಎಂದರು.

ಟ್ರಸ್ಟ್ ಅಧ್ಯಕ್ಷ ತಲವಾನೆ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ದಾದಾ ಖಲಂದರ್, ಕಾರ್ಯದರ್ಶಿ ಬಿ.ಎಲ್. ನೀಲಕಂಠಮೂರ್ತಿ, ಖಜಾಂಚಿ ಡಾ. ಕೆ.ಆರ್. ಶ್ರೀಧರ್, ಜಂಟಿ ಕಾರ್ಯದರ್ಶಿ ಎಂ.ಜಿ. ನಾಗಭೋಷಣ್, ಟ್ರಸ್ಟಿಗಳಾದ ಡಾ. ಪಿ.ನಾರಾಯಣ್, ತಾಜುದ್ದೀನ್, ಕೂಲೂರು ವಿ.ಸತ್ಯನಾರಾಯಣ, ಶಶಿಧರ್, ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಶ್ರೀಕಾಂತ್ ಎಂ.ಹೆಗಡೆ, ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು, ಕ್ರೀಡೆ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು. ಅನಂತರ ವಿದ್ಯಾರ್ಥಿಗಳು ವಿವಿಧ ಸಾಂಸ್ಕøತಿ ಕಾರ್ಯಕ್ರಮ ನಡೆಸಿಕೊಟ್ಟರು. ಕೆ.ಎನ್.ಶರಣಬಸವೇಶ್ವರ ಹಾಗೂ ಕಿರಣ್ಕುಾಮಾರ್ ಬಹುಮಾನ ವಿರತಣೆ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಾಂಶುಪಾಲ ಡಾ. ಕೆ.ನಾಗರಾಜ್ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಉಪ ಪ್ರಾಂಶುಪಾಲ ಎಸ್.ಎಂ.ಜೋಸೆಫ್ ಸ್ವಾಗತಿಸಿ, ಎಂ.ಇ.ಆಶಾ ನಿರೂಪಿಸಿದರು, ಎಂ.ಎನ್.ಪ್ರಭಾ ವಂದಿಸಿದರು.

- - - -ಫೋಟೋ:

ಜಾವಳ್ಳಿಯ ಶ್ರೀ ಅರಬಿಂದೋ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವನ್ನು ನಿರ್ದೇಶಕ, ಕಿರುತೆರೆ ನಟ ಎಸ್.ಎನ್.ಸೇತುರಾಂ ಉದ್ಘಾಟಿಸಿದರು.