14 ದಿನ ಮಾತ್ರ ಪತ್ನಿ ಜೊತೆ ಇರಿ, ತಂಡದ ಜೊತೆಗೇ ಬನ್ನಿ: ಆಟಗಾರರಿಗೆ ಬಿಸಿಸಿಐ ಹೊಸ ರೂಲ್ಸ್‌!

| Published : Jan 15 2025, 12:45 AM IST / Updated: Jan 16 2025, 04:06 AM IST

ಸಾರಾಂಶ

ಆಟಗಾರರಿಗೆ ಕಠಿಣ ನಿಯಮಗಳು ಜಾರಿಗೆ ಬಿಸಿಸಿಐ ಯೋಜನೆ. ಕೋಚ್‌, ಸ್ಟಾರ್‌ ಆಟಗಾರರ ಆಡಂಬರಕ್ಕೆ ಬೀಳುತ್ತಾ ಕಡಿವಾಣ?. ಕೋಚ್‌ ಗಂಭೀರ್‌ ವಿಷಯದಲ್ಲೂ ಬಿಸಿಸಿಐ ಕಠಿಣ ಕ್ರಮ.

ನವದೆಹಲಿ: ಟೀಂ ಇಂಡಿಯಾ ಸತತ ಸೋಲುಗಳಿಂತ ಕಂಗೆಟ್ಟಿರುವ ಹಿನ್ನೆಲೆಯಲ್ಲಿ ತಂಡದಲ್ಲಿ ಕೆಲ ಬದಲಾವಣೆಗಳನ್ನು ತರಲು ಬಿಸಿಸಿಐ ಚಿಂತನೆ ನಡೆಸಿದ್ದು, ಆಟಗಾರರ ವಿಷಯದಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲು ಮುಂದಾಗಿದೆ. ವಿಶೇಷವಾಗಿ ವಿದೇಶಿ ಸರಣಿಗಳಲ್ಲಿ ತಮ್ಮ ಕುಟುಂಬಸ್ಥರ ಜೊತೆ ಇರಲು ನೀಡುತ್ತಿದ್ದ ಅವಕಾಶಕ್ಕೆ ಕಡಿವಾಣ ಹಾಕಲು ಮಂಡಳಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಹೊಸ ನಿಯಮಗಳ ಬಗ್ಗೆ ಇತ್ತೀಚೆಗೆ ನಡೆದ ಪರಾಮರ್ಶೆ ಸಭೆಯಲ್ಲಿ ಚರ್ಚೆ ನಡೆದಿದೆ. ಶೀಘ್ರದಲ್ಲೇ ಈ ನಿಯಮಗಳು ಜಾರಿಗೆ ಬರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ವರೆಗೂ ಆಟಗಾರರು ತಮ್ಮ ಪತ್ನಿ, ಕುಟುಂಬಸ್ಥರ ಜೊತೆ ವಿದೇಶಿ ಟೂರ್ನಿ, ಸರಣಿ ವೇಳೆ ಕಾಲ ಕಳೆಯಬಹುದಿತ್ತು. ಅದರೆ ಇನ್ನು 45ಕ್ಕಿಂತ ಹೆಚ್ಚು ದಿನಗಳ ವಿದೇಶಿ ಪ್ರವಾಸ ವೇಳೆ 14 ದಿನ ಮಾತ್ರ ಪತ್ನಿ, ಕುಟುಂಬಸ್ಥರ ಜೊತೆ ಇರಬಹುದು.

 45ಕ್ಕಿಂತ ಕಡಿಮೆ ದಿನಗಳ ಪ್ರವಾಸದಲ್ಲಿ ಕುಟುಂಬಸ್ಥರ ಜೊತೆ ಇರಲು 1 ವಾರ ಅವಕಾಶ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಇನ್ನು, ಕೆಲ ಆಟಗಾರರು ಸರಣಿ ವೇಳೆ ಪ್ರತ್ಯೇಕವಾಗಿ ಆಗಮಿಸುತ್ತಿದ್ದರು. ಕೊಹ್ಲಿ-ಅನುಷ್ಕಾ ಶರ್ಮಾ, ರೋಹಿತ್‌ ಅವರು ರಿತಿಕಾ ಜೊತೆ ಹೀಗೆ ಹಲವು ಆಟಗಾರರು   ಸಂಚರಿಸುತ್ತಿದ್ದರು. ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಬಿಸಿಸಿಐ, ಎಲ್ಲರೂ ತಂಡದ ಇತರ ಆಟಗಾರರ ಜೊತೆಗೇ ಬರಬೇಕು. ಸೂಕ್ತ ಕಾರಣಗಳಿಲ್ಲದೇ ಯಾರೂ ಕೂಡ ಪ್ರತ್ಯೇಕ ವಿಮಾನ, ಕಾರು ಬಳಸಬಾರದು ಎಂದು ಸೂಚಿಸಲಿದೆ ಎಂದು ಹೇಳಲಾಗುತ್ತಿದೆ.ವಿದೇಶಿ ಪ್ರವಾಸ ವೇಳೆ ಆಟಗಾರರ ದೊಡ್ಡ ಮಟ್ಟದ ಲಗೇಜ್‌ ಕೊಂಡೊಯ್ಯುತ್ತಿದ್ದರು. ಆದರೆ ಇನ್ನು ಮುಂದೆ ಆಟಗಾರರ ಕಿಟ್‌ 150 ಕಿಲೋಗಿಂತ ಹೆಚ್ಚಿದ್ದರೆ ಅದಕ್ಕೆ ಬಿಸಿಸಿಐ ಪಾವತಿಸುವುದಿಲ್ಲ ಎಂದು ವರದಿಯಾಗಿದೆ.

ಕೋಚ್‌ ಗಂಭೀರ್‌ಗೂ ಬಿಸಿಸಿಐ ಕಠಿಣ ಕ್ರಮ!

ಆಟಗಾರರು ಮಾತ್ರವಲ್ಲದೇ ಕೋಚ್ ಗಂಭೀರ್‌ ವಿರುದ್ಧವೂ ಕೆಲ ಕಠಿಣ ನಿಯಮ ಜಾರಿಗೊಳಿಸಲು ಬಿಸಿಸಿಐ ನಿರ್ಧರಿಸಿದೆ. ಗಂಭೀರ್‌ರ ವೈಯಕ್ತಿಕ ಮ್ಯಾನೇಜರ್‌ ಇನ್ನು ಮುಂದೆ ಬಸ್‌ನಲ್ಲಿ ಒಟ್ಟಿಗೆ ಸಂಚರಿಸಲು, ವಿಐಪಿ ಬಾಕ್ಸ್‌ಗೆ ಬರಲು ಅವಕಾಶ ನೀಡದಿರಲು ಬಿಸಿಸಿಐ ಮುಂದಾಗಿದೆ ಎನ್ನಲಾಗಿದೆ.