ಸಾರಾಂಶ
ಮೆಲ್ಬರ್ನ್: 10 ಬಾರಿ ಚಾಂಪಿಯನ್ ನೋವಾಕ್ ಜೋಕೋವಿಚ್, ಹಾಲಿ ಚಾಂಪಿಯನ್ ಯಾನಿಕ್ ಸಿನ್ನರ್, 4 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ಕಾರ್ಲೊಸ್ ಆಲ್ಕರಜ್ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.
ದಾಖಲೆಯ 25ನೇ ಗ್ರ್ಯಾನ್‌ಸ್ಲಾಂ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ಜೋಕೋವಿಚ್, ಭಾನುವಾರ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಭಾರತೀಯ ಮೂಲದ ಅಮೆರಿಕನ್ ಟೆನಿಸಿಗ ನಿಶೇಶ್ ಬಸವರೆಡ್ಡಿ ವಿರುದ್ಧ 4-6, 6-3, 6-4, 6-2 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 19 ವರ್ಷದ ನಿಶೇಶ್ ಮೊದಲ ಸೆಟ್‌ನಲ್ಲಿ ಗೆದ್ದರೂ ಬಳಿಕ ಪುಟಿದೆದ್ದ ಜೋಕೋ ಗೆಲುವು ತಮ್ಮದಾಗಿಸಿಕೊಂಡರು.
ಇಟಲಿಯ ಸಿನ್ನರ್ ಮೊದಲ ಸುತ್ತಿನಲ್ಲಿ ಚಿಲಿಯ ನಿಕೋಲಸ್ ಜಾರಿ ವಿರುದ್ಧ 7-6(7/2), 7-6(7/5), 6-1 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಸ್ಪೇನ್‌ನ ಯುವ ಸೂಪರ್‌ಸ್ಟಾರ್ ಕಾರ್ಲೊಸ್ ಆಲ್ಕರಜ್, ಕಜಕಸ್ತಾನದ ಅಲೆಕ್ಸಾಂಡರ್ ಶೆವ್‌ಚೆಂಕೊ ಅವರನ್ನು 6-1, 7-5, 6-1 ನೇರ ಸೆಟ್‌ಗಳಲ್ಲಿ ಮಣಿಸಿ 2ನೇ ಸುತ್ತು ಪ್ರವೇಶಿಸಿದರು.
ಇಗಾಗೆ ಮುನ್ನಡೆ: 5 ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದಿದ್ದರೂ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಟ್ರೋಫಿಗೆ ಕಾತರಿಸುತ್ತಿರುವ ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಮಹಿಳಾ ಸಿಂಗಲ್ಸ್‌ನಲ್ಲಿ ಶುಭಾರಂಭ ಮಾಡಿದರು. ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.2 ಇಗಾ, ಚೆಕ್ ಗಣರಾಜ್ಯದ ಕ್ಯಾಥರಿನಾ ಸಿನಿಕೋವಾ ವಿರುದ್ಧ 6-3, 6-4 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. 2023ರ ಫ್ರೆಂಚ್ ಓಪನ್ ರನ್ನರ್-ಅಪ್, 7ನೇ ಶ್ರೇಯಾಂಕಿತ ಜೆಸ್ಸಿಕಾ ಪೆಗುಲಾ, 2023ರ ಯುಎಸ್ ಓಪನ್ ಚಾಂಪಿಯನ್, ಅಮೆರಿಕದ ಕೊಕೊ ಗಾಫ್ ಕೂಡಾ ಗೆಲುವು ಸಾಧಿಸಿ 2ನೇ ಸುತ್ತು ಪ್ರವೇಶಿಸಿದರು.
ಅಜರೆಂಕಾ ಸೇರಿ ತಾರೆಗಳು ಔಟ್
ಈ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕೆಲ ತಾರಾ ಟೆನಿಸಿಗರು ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ 2 ಬಾರಿ ಚಾಂಪಿಯನ್, ಬೆಲಾರಸ್‌ನ ವಿಕ್ಟೋರಿಯಾ ಅಜೆರೆಂಕಾ, 2017ರ ಫ್ರೆಂಚ್ ಓಪನ್ ವಿಜೇತ, ಲಾಟ್ವಿಯಾ ದೇಶದ ಓಸ್ಟಪೆಂಕೊ, ಪುರುಷರ ಸಿಂಗಲ್ಸ್‌ನಲ್ಲಿ 2023ರ ರನ್ನರ್-ಅಪ್, 11ನೇ ಶ್ರೇಯಾಂಕಿತ ಗ್ರೀಕ್‌ನ ಸಿಟ್ಸಿಪಾಸ್‌ಗೆ ಸೋಲಿನ ಆಘಾತಕ್ಕೊಳಗಾದರು.