ಸಾರಾಂಶ
ನವದೆಹಲಿ: ಚೊಚ್ಚಲ ಆವೃತ್ತಿಯ ಖೋ ಖೋ ವಿಶ್ವಕಪ್‌ಗೆ ಅದ್ಧೂರಿ ಚಾಲನೆ ಲಭಿಸಿದೆ. ಭಾನುವಾರ ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ವರ್ಣರಂಜಿತ ಉದ್ಘಾಟನಾ ಸಮಾರಂಭದ ಮೂಲಕ ಟೂರ್ನಿ ಆರಂಭಗೊಂಡಿತು.
ಜ.19ರ ವರೆಗೆ ನಡೆಯಲಿರುವ ಟೂರ್ನಿಗೆ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಕ್ರೀಡಾ ಜ್ಯೋತಿಯನ್ನು ಬೆಳಗಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಟೂರ್ನಿಯಲ್ಲಿ ಪಾಲ್ಗೊಳ್ಳುವ 23 ದೇಶಗಳ ತಂಡವನ್ನು ಕ್ರೀಡಾಂಗಣಕ್ಕೆ ಬರಮಾಡಿಕೊಳ್ಳಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳ ನೋಡುಗಣ ಕಣ್ಮನ ಸೆಳೆಯಿತು. ವಿವಿಧ ರೀತಿಯ ನೃತ್ಯ, ಸಂಗೀತ, ಲೈಟ್ ಶೋ, ಮರಳು ಕಲೆ ಸಮಾರಂಭದ ಮೆರುಗು ಹೆಚ್ಚಿಸಿತು. ಈ ವೇಳೆ ಕೇಂದ್ರ ಕ್ರೀಡಾ ಸಚಿವ ಮಾನ್ಸುಖ್ ಮಾಂಡವೀಯ, ಭಾರತ ಒಲಿಂಪಿಕ್ ಸಂಸ್ಥೆ ಮುಖ್ಯಸ್ಥೆ ಪಿ.ಟಿ.ಉಷಾ, ಭಾರತೀಯ ಖೋ ಖೋ ಸಂಸ್ಥೆ ಅಧ್ಯಕ್ಷ ಸುಧಾನ್ಶು ಮಿತ್ತಲ್, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸೇರಿ ಪ್ರಮುಖರು ಉಪಸ್ಥಿತರಿದ್ದರು.ಟೂರ್ನಿಯಲ್ಲಿ ಪುರುಷರ ವಿಭಾಗದಲ್ಲಿ 20, ಮಹಿಳಾ ವಿಭಾಗದಲ್ಲಿ 19 ತಂಡಗಳು ಪಾಲ್ಗೊಳ್ಳಲಿವೆ.
ನೇಪಾಳ ವಿರುದ್ಧ ಗೆದ್ದು ಭಾರತ ಶುಭಾರಂಭ
ಭಾರತ ಪುರುಷರ ತಂಡ ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿತು. ಉದ್ಘಾಟನಾ ಸಮಾರಂಭದ ಬಳಿಕ ನಡೆದ ನೇಪಾಳ ವಿರುದ್ಧ ಪಂದ್ಯದಲ್ಲಿ ಭಾರತ 5 ಅಂಕಗಳಿಂದ ಜಯಗಳಿಸಿತು.
ಮೊದಲ ಹಂತದಲ್ಲಿ ಅಟ್ಯಾಕ್ ಮಾಡಿದ ಭಾರತ 24-0 ಮುನ್ನಡೆಯಲ್ಲಿತ್ತು. ಆ ಬಳಿಕ ಡಿಫೆಂಡಿಂಗ್‌ಗೆ ಇಳಿದ ಆತಿಥೇಯ ತಂಡ 20 ಅಂಕ ಬಿಟ್ಟುಕೊಟ್ಟರೂ, 4 ಅಂಕಗಳಿಂದ ಲೀಡ್ ಸಾಧಿಸಿತ್ತು. 3ನೇ ಹಂತದಲ್ಲಿ ಮತ್ತೆ ಭಾರತ ಅಟ್ಯಾಕ್‌ಗೆ ಇಳಿದು 18 ಅಂಕ ಪಡೆದು ಮುನ್ನಡೆಯನ್ನ 42-21ಕ್ಕೆ ಹೆಚ್ಚಿಸಿತು. ಕೊನೆ ಹಂತದಲ್ಲಿ ಡಿಫೆಂಡ್ ಮಾಡಿದ ಭಾರತ, ನೇಪಾಳಕ್ಕೆ ಕೇವಲ 16 ಅಂಕ ಬಿಟ್ಟುಕೊಟ್ಟು 420-37 ಅಂಕಗಳಿಂದ ಜಯಭೇರಿ ಬಾರಿಸಿತು.