ಸಾರಾಂಶ
ನವದೆಹಲಿ: ಬಾರ್ಬಡೊಸ್‌ನಿಂದ ಗುರುವಾರ ನವದೆಹಲಿಗೆ ಬಂದಿಳಿದ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಆಟಗಾರರಿಗೆ ಪ್ರಧಾನಿ ನರೇಂದ್ರ ಮೋದಿ ಔತಣಕೂಟ ಏರ್ಪಡಿಸಿದರು. ಬೆಳಗ್ಗೆ 6.10ಕ್ಕೆ ನವದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಟಗಾರರು ಬಳಿಕ ಹೋಟೆಲ್‌ಗೆ ತೆರಳಿ, ಅಲ್ಲಿಂದ ಬೆಳಗ್ಗೆ 10.40ರ ವೇಳೆಗೆ ಪ್ರಧಾನಿ ನಿವಾಸಕ್ಕೆ ಆಗಮಿಸಿದರು.
ಈ ವೇಳೆ ಆಟಗಾರರು ‘ಚಾಂಪಿಯನ್ಸ್’ ಎಂದು ಬರೆದಿದ್ದ ವಿಶೇಷ ಜೆರ್ಸಿ ಧರಿಸಿದ್ದು ಗಮನ ಸೆಳೆಯಿತು.ಬಳಿಕ ಆಟಗಾರರೊಂದಿಗೆ ಉಪಾಹಾರ ಸೇವಿಸಿದ ಪ್ರಧಾನಿ, ಬಳಿಕ ಕೆಲ ಹೊತ್ತು ಸಂವಾದ ನಡೆಸಿದರು. ಆಟಗಾರರ ಕ್ರಿಕೆಟ್ ಬದುಕು, ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿನ ಟಿ20 ವಿಶ್ವಕಪ್‌ನ ಅನುಭವಗಳನ್ನು ಕೇಳಿ ತಿಳಿದುಕೊಂಡರು. ಬಳಿಕ ಆಟಗಾರರು, ಕೋಚ್ ದ್ರಾವಿಡ್ ಮೋದಿ ಜೊತೆಗೆ ಟ್ರೋಫಿಯೊಂದಿಗೆ ಫೋಟೋ ಕ್ಲಿಕ್ಕಿಸಿದರು. ಆಟಗಾರರು ವೈಯಕ್ತಿಕವಾಗಿಯೂ ಪ್ರಧಾನಿ ಜೊತೆ ಫೋಟೋ ತೆಗೆಸಿಕೊಂಡರು.
ಮಣ್ಣಿನ ರುಚಿ ಹೇಗಿತ್ತು ಎಂದು ರೋಹಿತ್‌ಗೆ ಪ್ರಶ್ನಿಸಿದ ಮೋದಿ
ಸಂವಾದ ವೇಳೆ ಪ್ರಧಾನಿ ಮೋದಿ ಆಟಗಾರರ ಜೊತೆ ವಿಶ್ವಕಪ್‌ನ ಅನುಭವಗಳ ಬಗ್ಗೆ ಪ್ರಶ್ನಿಸಿದರು. ಗೆಲುವಿನ ಬಳಿಕ ಪಿಚ್‌ನ ಮಣ್ಣು ತಿಂದಿದ್ದ ಬಗ್ಗೆ ರೋಹಿತ್ ಶರ್ಮಾ ಅವರಲ್ಲಿ ‘ಮಣ್ಣಿನ ರುಚಿ ಹೇಗಿತ್ತು’ ಎಂದು ಪ್ರಶ್ನಿಸಿದ್ದಾರೆ. ಟೂರ್ನಿಯುದ್ದಕ್ಕೂ ವಿಫಲವಾಗಿದ್ದರೂ ಫೈನಲ್‌ನಲ್ಲಿ ಅಬ್ಬರಿಸಿದ್ದ ಬಗ್ಗೆ ವಿರಾಟ್ ಕೊಹ್ಲಿ ಜೊತೆ ಪ್ರಧಾನಿ ಅನುಭವಗಳನ್ನು ಕೇಳಿಕೊಂಡರು
.‘ನಮೋ’ ಜೆರ್ಸಿ ಹಸ್ತಾಂತರ
ಆಟಗಾರರರೊಂದಿಗೆ ಸಂವಾದದ ಬಳಿಕ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಕಾರ್ಯದರ್ಶಿ ಜಯ್ ಶಾ ನಮೋ ಹೆಸರಿನ, 1 ಸಂಖ್ಯೆಯ ಜೆರ್ಸಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸಿದರು.