ಸಾರಾಂಶ
ಲಂಡನ್: 24 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ನೋವಾಕ್ ಜೋಕೋವಿಚ್ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ 3ನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಆದರೆ ಮಾಜಿ ವಿಶ್ವ ನಂ.1 ನವೊಮಿ ಒಸಾಕ ಸೋತು ಅಭಿಯಾನ ಕೊನೆಗೊಳಿಸಿದ್ದಾರೆ.ಗುರುವಾರ ಪುರುಷರ ಸಿಂಗಲ್ಸ್ 2ನೇ ಸುತ್ತಿನಲ್ಲಿ ವಿಶ್ವ ನಂ.2, ಸರ್ಬಿಯಾದ ಜೋಕೋವಿಚ್ ಅವರು ಬ್ರಿಟನ್‌ನ ಜಾಕೊಬ್ ಫೀರ್ಲೆ ವಿರುದ್ಧ 6-3, 6-4, 5-7, 7-5 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.
3ನೇ ಸುತ್ತಿನಲ್ಲಿ ಜೋಕೋಗೆ ಪ್ರಬಲ ಪೈಪೋಟಿ ಎದುರಾದರೂ, ಅನುಭವಿ ಆಟಗಾರನ ಮುಂದೆ ಜಾಕೊಬ್ ಮಂಡಿಯೂರಬೇಕಾಯಿತು. ಆದರೆ 3 ಬಾರಿ ಗ್ರ್ಯಾನ್‌ಸ್ಲಾಂ ವಿಜೇತ ಸ್ಟಾನ್ ವಾಂವ್ರಿಕಾ 2ನೇ ಸುತ್ತಲ್ಲೇ ಸೋತು ಹೊರಬಿದ್ದರು.
ಇದೇ ವೇಳೆ ಮಹಿಳಾ ಸಿಂಗಲ್ಸ್‌ನಲ್ಲಿ ಜಪಾನ್‌ನ ಒಸಾಕ ಅವರು ಅಮೆರಿಕದ 19ನೇ ಶ್ರೇಯಾಂಕಿತ ಎಮ್ಮಾ ನವರೊ ವಿರುದ್ಧ 4-6, 1-6 ಸೆಟ್‌ಗಳಲ್ಲಿ ಆಘಾತಕಾರಿ ಸೋಲನುಭವಿಸಿದರು. ಟ್ಯುನೀಶಿಯಾದ ಒನ್ಸ್ ಜಬುರ್ ಅಮೆರಿಕದ ರಾಬಿನ್ ರಾಬಿನ್ ವಿರುದ್ಧ 6-1, 7-5 ಸೆಟ್‌ಗಳಲ್ಲಿ ಗೆದ್ದು 3ನೇ ಸುತ್ತು ಪ್ರವೇಶಿಸಿದರು. 5ನೇ ಶ್ರೇಯಾಂಕಿತ ಜೆಸ್ಸಿಕಾ ಪೆಗುಲಾ ಸೋತು ಅಭಿಯಾನ ಕೊನೆಗೊಳಿಸಿದರು.
ಬೋಪಣ್ಣ-ಎಬ್ಡೆನ್ 2ನೇ ಸುತ್ತಿಗೆ ಲಗ್ಗೆ
ಭಾರತದ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಗುರುವಾರ ಪುರುಷರ ಡಬಲ್ಸ್‌ನಲ್ಲಿ ಇಂಡೋ-ಆಸೀಸ್ ಜೋಡಿ, ನೆದರ್‌ಲೆಂಡ್ಸ್‌ನ ರಾಬಿನ್ ಹಾಸ್-ಸ್ಯಾಂಡರ್ ಅರೆಂಡ್ಸ್ ವಿರುದ್ಧ 7-5, 6-4 ಸೆಟ್‌ಗಳಲ್ಲಿ ಗೆಲುವು ಸಾಧಿಸಿತು. 2ನೇ ಸುತ್ತಿನಲ್ಲಿ ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್, ಜರ್ಮನಿಯ ಹೆಂಡ್ರಿಕ್ ಜೆಬೆನ್ಸ್-ಕಾನ್ಸ್‌ಟಾಂಟಿನ್ ಫ್ರಾಂಟ್ಜೆನ್ ವಿರುದ್ಧ ಸೆಣಸಲಿದೆ.ಇದೇ ವೇಳೆ ಭಾರತದ ಯೂಕಿ ಭಾಂಬ್ರಿ-ಫ್ರಾನ್ಸ್‌ನ ಅಲ್ಬಾನೊ ಒಲಿವೆಟ್ಟಿ ಜೋಡಿ ಕೂಡಾ 2ನೇ ಸುತ್ತು ಪ್ರವೇಶಿಸಿತು. ಆದರೆ ಭಾರತದ ಶ್ರೀರಾಮ್ ಬಾಲಾಜಿ-ಬ್ರಿಟನ್‌ನ ಲ್ಯೂಕ್ ಜಾನ್ಸನ್ ಜೋಡಿ ಸೋತು ಹೊರಬಿತ್ತು.