ಸಾರಾಂಶ
ಮುಂಬೈ: 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರರಿಗೆ ತವರಿನಲ್ಲಿ ಕಂಡು ಕೇಳರಿಯದ ರೀತಿ ಅದ್ಧೂರಿ ಸ್ವಾಗತ ಲಭಿಸಿದೆ. ಮುಂಬೈನಲ್ಲಿ ತೆರೆದ ವಾಹನದಲ್ಲಿ ಆಟಗಾರರು ಭರ್ಜರಿ ಮೆರವಣಿಗೆ ನಡೆಸಿದ್ದು, ಲಕ್ಷಾಂತರ ಮಂದಿ ಸಾಕ್ಷಿಯಾಗಿದ್ದಾರೆ.
ಚಂಡಮಾರುತ ಕಾರಣಕ್ಕೆ ವಿಶ್ವಕಪ್ ಮುಗಿದ 3 ದಿನಗಳಾದರೂ ಬಾರ್ಬಡೊಸ್‌ನಲ್ಲೇ ಬಾಕಿಯಾಗಿದ್ದ ಭಾರತದ ಆಟಗಾರರು, ಕೋಚ್‌ಗಳು ಹಾಗೂ ಬಿಸಿಸಿಐ ಅಧಿಕಾರಿಗಳು ಗುರುವಾರ ಬೆಳಗ್ಗೆ ನವದೆಹಲಿ ವಿಮಾನ ನಿಲ್ದಾಣಕ್ಕೆ ತಲುಪಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಉಪಹಾರ ಕೂಟದಲ್ಲಿ ಪಾಲ್ಗೊಂಡ ಆಟಗಾರರು, ಅಲ್ಲಿಂದ ಮುಂಬೈಗೆ ಆಗಮಿಸಿ ಬೃಹತ್ ಮೆರವಣಿಗೆ ಪಾಲ್ಗೊಂಡರು.
ನಾರಿಮನ್ ಪಾಯಿಂಟ್‌ನಿಂದ ಮರೈನ್ ಡ್ರೈವ್ ಮಾರ್ಗವಾಗಿ ವಾಂಖೇಡೆ ಕ್ರೀಡಾಂಗಣದ ವರೆಗೆ ಆಟಗಾರರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಸುಮಾರು 1 ಗಂಟೆಗಳ ಕಾಲ ನಡೆದ ಮೆರವಣಿಗೆ ವೇಳೆ ಅಭಿಮಾನಿಗಳು ಆಟಗಾರರನ್ನು ಜೈಕಾರ ಕೂಗಿ ಸ್ವಾಗತಿಸಿದರು.ರಸ್ತೆಯ 2 ಕಡೆಗಳಲ್ಲೂ ತುಂಬಿದ್ದ ಅಪಾರ ಪ್ರಮಾಣದ ಅಭಿಮಾನಿಗಳು, ಆಟಗಾರರ ಫೋಟೋ ಪ್ರದರ್ಶಿಸಿ, ಜೈ ಹೋ ಟೀಂ ಇಂಡಿಯಾ, ಭಾರತ್ ಮಾತಾಕಿ ಜೈ ಘೋಷಣೆಗಳ ಮೂಲಕ ಖುಷಿಪಟ್ಟರು. ಈ ವೇಳೆ ಆಟಗಾರರು ಕೂಡಾ ಟ್ರೋಫಿ, ವಿಜಯದ ಸಂಕೇತ ಪ್ರದರ್ಶಿಸಿ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು.
ಜನರ ನಿಯಂತ್ರಣಕ್ಕೆ ಹರಸಾಹಸ
ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಮುಂಬೈನ ಮರೈನ್ ಡ್ರೈವ್ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಮಧ್ಯಾಹ್ನದಿಂದಲೇ ಅಭಿಮಾನಿಗಳು ನೆರೆದಿದ್ದರು. ಹಲವು ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಸಂಜೆಯಾಗುತ್ತಲೇ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ರಸ್ತೆಯಲ್ಲಿ ಸೇರಿದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸರು, ಭದ್ರತಾ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.
ಮುಂಬೈ ಏರ್‌ಪೋರ್ಟ್‌ನಲ್ಲಿ ವಿಮಾನಕ್ಕೆ ವಾಟರ್ ಸಲ್ಯೂಟ್
ಭಾರತೀಯ ಆಟಗಾರರಿದ್ದ ವಿಮಾನ ಮುಂಬೈ ಏರ್‌ಪೋರ್ಟ್‌ಗೆ ಆಗಮಿಸುತ್ತಿದ್ದಂತೆಯೇ ‘ವಾಟರ್ ಸಲ್ಯೂಟ್’ ಗೌರವ ಸಲ್ಲಿಸಲಾಯಿತು. ಅಗ್ನಿಶಾಮಕ ದಳದ ವಾಹನದ ಮೂಲಕ ವಿಮಾನದ ಮೇಲೆ ಎರಡೂ ಕಡೆಗಳಿಂದ ನೀರು ಹಾಯಿಸಲಾಯಿತು.