ಸಾರಾಂಶ
ಮುಂಬೈ: ಟಿ20 ವಿಶ್ವಕಪ್ ಗೆಲುವಿನ ವಿಜಯೋತ್ಸವದ ಬೃಹತ್ ಮೆರವಣಿಗೆ ಬಳಿಕ ಆಟಗಾರರು ವಾಂಖೇಡೆ ಕ್ರೀಡಾಂಗಣಕ್ಕೆ ಆಗಮಿಸಿದರು. ಮೈದಾನದುದ್ದಕ್ಕೂ ಆಟಗಾರರು ಟ್ರೋಫಿ ಹಿಡಿದು ಸಾಗುತ್ತಿದ್ದಂತೆಯೇ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿತ್ತು. ಬಳಿಕ ಆಟಗಾರರಿಗೆ ಬಿಸಿಸಿಐ ವತಿಯಿಂದ ಸನ್ಮಾನ ಮಾಡಲಾಯಿತು. ವಿಶ್ವಕಪ್ ವಿಜೇತ ತಂಡಕ್ಕೆ ಬಿಸಿಸಿಐ ಘೋಷಿಸಿದ್ದ 125 ಕೋಟಿ ರು. ನಗದು ಬಹುಮಾನವನ್ನು ಇದೇ ವೇಳೆ ಹಸ್ತಾಂತರಿಸಲಾಯಿತು.ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಮಳೆ ನಡುವೆ ತುಂಬಿ ತುಳುಕಿದ ವಾಂಖೇಡೆ
ಭಾರತ ತಂಡದ ವಿಜಯೋತ್ಸವಕ್ಕೆ ಸಾಕ್ಷಿಯಾಗಲು ಅಪಾರ ಪ್ರಮಾಣದ ಅಭಿಮಾನಿಗಳು ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನೆರೆದಿದ್ದರು. ಮಳೆ ಸುರಿಯುತ್ತಿದ್ದರೂ ಕ್ರೀಡಾಂಗಣ ಸಂಜೆ ವೇಳೆ ಅಭಿಮಾನಿಗಳಿಂದ ತುಂಬಿ ತುಳುಕಿತು. ಹೊರಗೆ ಭಾರಿ ಪ್ರಮಾಣದಲ್ಲಿ ಪ್ರೇಕ್ಷಕರು ಮೆರವಣಿಗೆ ವೀಕ್ಷಿಸುತ್ತಿದ್ದರೂ, ಕ್ರೀಡಾಂಗಣದಲ್ಲೂ ಜನಸಾಗರ ನೆರೆದಿತ್ತು. ಮೈದಾನ ಪ್ರವೇಶಿಸಲು ಹಲವು ಗಂಟೆಗಳ ಕಾಲ ಪ್ರೇಕ್ಷಕರು ಹೊರಗೆ ಕಾಯಬೇಕಾಯಿತು.
ಎರಡೂವರೆ ಗಂಟೆ ತಡವಾದ ರೋಡ್‌ಶೋ
ಮೆರವಣಿಗೆ ಎರಡೂವರೆ ಗಂಟೆ ತಡವಾಗಿ ಆರಂಭಗೊಂಡಿತು. ಸಂಜೆ 5 ಗಂಟೆಗೆ ಮೆರವಣಿಗೆ ನಿಗದಿಯಾಗಿದ್ದರೂ ಆಟಗಾರರು ಮುಂಬೈ ತಲುಪುವುದು ವಿಳಂಬವಾದ ಕಾರಣ, ಸಂಜೆ 7.40ರ ಬಳಿಕ ಮೆರವಣಿಗೆ ಶುರುವಾಯಿತು.