ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌: ಅಗ್ರ-10ರತ್ತ ಯಶಸ್ವಿ ಜೈಸ್ವಾಲ್‌ ದಾಪುಗಾಲು

| Published : Feb 29 2024, 02:03 AM IST

ಸಾರಾಂಶ

ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಯುವ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಈಗ ಐಸಿಸಿ ಟೆಸ್ಟ್‌ ಬ್ಯಾಟರ್‌ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 12ನೇ ಸ್ಥಾನಕ್ಕೇರಿದ್ದಾರೆ. ಕಳೆದ ವಾರಕ್ಕೆ ಹೋಲಿಸಿದರೆ 3 ಸ್ಥಾನ ಏರಿಕೆ ಕಂಡಿದ್ದಾರೆ.

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಅಭೂತಪೂರ್ವ ಪ್ರದರ್ಶನದ ಮೂಲಕ ಭಾರೀ ಸದ್ದು ಮಾಡುತ್ತಿರುವ ಪ್ರತಿಭಾವಂತ ಯುವ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ಅಗ್ರ-10ರತ್ತ ದಾಪುಗಾಲಿಟ್ಟಿದ್ದಾರೆ.22ರ ಜೈಸ್ವಾಲ್‌ ಬುಧವಾರ ಪ್ರಕಟಗೊಂಡ ನೂತನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 3 ಸ್ಥಾನ ಏರಿಕೆ ಕಂಡು 12ನೇ ಸ್ಥಾನ ತಲುಪಿದ್ದಾರೆ. 69ನೇ ಸ್ಥಾನದೊಂದಿಗೆ ಸರಣಿ ಆರಂಭಗಿಸಿದ್ದ ಜೈಸ್ವಾಲ್‌, ಇಂಗ್ಲೆಂಡ್‌ ವಿರುದ್ಧದ ಸರಣಿಯ 4 ಪಂದ್ಯಗಳಲ್ಲಿ 2 ದ್ವಿಶತಕ ಸೇರಿ 655 ರನ್‌ ಕಲೆಹಾಕುವ ಮೂಲಕ ಒಟ್ಟು 55 ಸ್ಥಾನಗಳ ಪ್ರಗತಿ ಸಾಧಿಸಿದ್ದಾರೆ. ವಿರಾಟ್‌ ಕೊಹ್ಲಿ 9ನೇ ಸ್ಥಾನದಲ್ಲಿದ್ದು, ನಾಯಕ ರೋಹಿತ್‌ ಶರ್ಮಾ ಹಾಗೂ ರಿಷಭ್‌ ಪಂತ್‌ ಕ್ರಮವಾಗಿ 13 ಮತ್ತು 14ನೇ ಸ್ಥಾನಗಳಲ್ಲಿದ್ದಾರೆ. ಇದೇ ವೇಳೆ ಇಂಗ್ಲೆಂಡ್‌ ವಿರುದ್ಧ 4ನೇ ಟೆಸ್ಟ್‌ ಪಂದ್ಯದಲ್ಲಿ ಭಾರತದ ಗೆಲುವಿನ ರೂವಾರಿ, ವಿಕೆಟ್‌ ಕೀಪರ್‌ ಬ್ಯಾಟರ್ ಧ್ರುವ್‌ ಜುರೆಲ್‌ 31 ಸ್ಥಾನ ಏರಿಕೆ ಕಂಡು 69ನೇ ಸ್ಥಾನ ಪಡೆದಿದ್ದಾರೆ. ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಜಸ್‌ಪ್ರೀತ್‌ ಬೂಮ್ರಾ, ಆಲ್ರೌಂಡರ್‌ ವಿಭಾಗದಲ್ಲಿ ರವೀಂದ್ರ ಜಡೇಜಾ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.