ಭಾರತೀಯ ಆಟಗಾರರಿಗೆ ಟೆಸ್ಟ್‌ ಪಂದ್ಯದ ಸಂಭಾವನೆ ಹೆಚ್ಚಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ಜೊತೆಗೆ ಪ್ರತಿ ಸರಣಿಗೂ ಬೋನಸ್‌ ನೀಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಸದ್ಯ ಪ್ರತಿ ಟೆಸ್ಟ್‌ಗೆ ಬಿಸಿಸಿಐ 15 ಲಕ್ಷ ರು. ಸಂಭಾವನೆ ನೀಡುತ್ತಿದೆ.

ನವದೆಹಲಿ: ಆಟಗಾರರನ್ನು ಟೆಸ್ಟ್‌ ಕ್ರಿಕೆಟ್‌ನತ್ತ ಮತ್ತಷ್ಟು ಆಕರ್ಷಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಬಿಸಿಸಿಐ, ಆಟಗಾರರಿಗೆ ಟೆಸ್ಟ್‌ ಪಂದ್ಯದ ಸಂಭಾವನೆ ಹೆಚ್ಚಿಸಲು ಚಿಂತನೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಯುವ ಕ್ರಿಕೆಟಿಗರಾದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರಂತಹ ಆಟಗಾರರು ದೇಸಿ ಕ್ರಿಕೆಟ್‌ನಲ್ಲಿ ತೊಡಗಿಸಿಕೊಳ್ಳದೆ, ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (ಐಪಿಎಲ್) ತಯಾರಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

ಇದೇ ಕಾರಣಕ್ಕೆ ಯುವ ಆಟಗಾರರನ್ನು ಟೆಸ್ಟ್‌ ಕ್ರಿಕೆಟ್‌ನತ್ತ ಕರೆ ತರಲು ಬಿಸಿಸಿಐ ಹೊಸ ಯೋಜನೆ ಹಾಕಿಕೊಂಡಿದೆ. ಸದ್ಯ ಪ್ರತಿ ಟೆಸ್ಟ್‌ಗೆ ಬಿಸಿಸಿಐ ಆಟಗಾರನಿಗೆ 15 ಲಕ್ಷ ರು. ಸಂಭಾವನೆ ನೀಡುತ್ತಿದೆ. 

ಏಕದಿನದಲ್ಲಿ 6 ಲಕ್ಷ ರು. ಹಾಗೂ ಟಿ20ಗೆ 3 ಲಕ್ಷ ರು. ಲಭಿಸುತ್ತಿದೆ. ಆದರೆ ಯುವ ಆಟಗಾರರು ರಾಷ್ಟ್ರೀಯ ತಂಡದ ಬದಲು ಟಿ20 ಲೀಗ್‌ಗಳಲ್ಲಿ ಹೆಚ್ಚಿನ ಆಕರ್ಷಿತರಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಂಭಾವನೆ ಹೆಚ್ಚಿಸಲು ಮಂಡಳಿ ಚಿಂತನೆ ನಡೆಸುತ್ತಿದೆ. 

ಅಲ್ಲದೆ ಪ್ರತಿ ಸರಣಿಗೂ ಬೋನಸ್‌, ಕ್ಯಾಲೆಂಡರ್ ವರ್ಷದಲ್ಲಿ ಎಲ್ಲಾ ಟೆಸ್ಟ್ ಪಂದ್ಯ ಆಡುವ ಆಟಗಾರನಿಗೆ ಕೇಂದ್ರೀಯ ಗುತ್ತಿಗೆಯ ಆಧಾರದಲ್ಲಿ ಹೆಚ್ಚುವರಿ ಹಣ ನೀಡುವ ಬಗ್ಗೆಯೂ ಬಿಸಿಸಿಐ ಆಲೋಚಿಸುತ್ತಿದೆ ಎಂದು ಹೇಳಲಾಗುತ್ತಿದೆ.