ಸಾರಾಂಶ
- ವೈದ್ಯರ ಸಲಹೆ ಪಡೆಯಲು ಲಂಡನ್‌ಗೆ ಕರ್ನಾಟಕ ಕ್ರಿಕೆಟಿಗ?ನವದೆಹಲಿ: ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕೆ.ಎಲ್.ರಾಹುಲ್ ಮಾ.5ರಿಂದ ಧರ್ಮಶಾಲಾದಲ್ಲಿ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್‌ಗೂ ಅಲಭ್ಯರಾಗುವ ಸಾಧ್ಯತೆ ಇದೆ. ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆಡಿದ್ದ ರಾಹುಲ್, ಆ ಬಳಿಕ 3 ಪಂದ್ಯಗಳಿಂದಲೂ ಹೊರಗುಳಿದಿದ್ದರು. ಸದ್ಯ ಅವರು ತಜ್ಞ ವೈದ್ಯರ ಸಲಹೆ ಪಡೆಯಲು ಲಂಡನ್‌ಗೆ ತೆರಳಿದ್ದಾರೆ ಎನ್ನಲಾಗಿದೆ. ಇದೇ ವೇಳೆ 4ನೇ ಟೆಸ್ಟ್‌ನಿಂದ ವಿಶ್ರಾಂತಿ ಪಡೆದಿದ್ದ ವೇಗಿ ಜಸ್‌ಪ್ರೀತ್ ಬೂಮ್ರಾ, 5ನೇ ಪಂದ್ಯದಲ್ಲಿ ಆಡಲಿದ್ದಾರೆ ಎಂದು ತಿಳಿದುಬಂದಿದೆ. ಭಾರತ ಈಗಾಗಲೇ ಸರಣಿ ಗೆದ್ದಿರುವ ಕಾರಣ, 5ನೇ ಪಂದ್ಯಕ್ಕೆ ಇನ್ನೂ ಕೆಲ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸದ್ಯ ಆಟಗಾರರು ತಮ್ಮ ಮನೆಗಳಿಗೆ ತೆರಳಿದ್ದು, ಮಾ.3ರಂದು ಚಂಡೀಗಢದಲ್ಲಿ ಒಟ್ಟುಗೂಡಲಿದ್ದಾರೆ. ಮಾ.4ರಂದು ಭಾರತ ಹಾಗೂ ಇಂಗ್ಲೆಂಡ್ ಆಟಗಾರರು ವಿಶೇಷ ವಿಮಾನದಲ್ಲಿ ಧರ್ಮಶಾಲಾಗೆ ತೆರಳಲಿದ್ದಾರೆ.