ಪುಣೇರಿ ಪಲ್ಟನ್‌ vs ಹರ್‍ಯಾಣ ಸ್ಟೀಯರ್ಸ್‌ ಪ್ರೊ ಕಬಡ್ಡಿ ಫೈನಲ್‌ ಫೈಟ್‌

| Published : Feb 29 2024, 02:04 AM IST / Updated: Feb 29 2024, 10:17 AM IST

ಸಾರಾಂಶ

10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಫೈನಲ್‌ಗೆ ಪುಣೇರಿ ಪಲ್ಟನ್‌, ಹರ್ಯಾಣ ಸ್ಟೀಲರ್ಸ್‌ ತಂಡಗಳು ಲಗ್ಗೆ. ಸೆಮಿಫೈನಲ್‌ನಲ್ಲಿ ಪಾಟ್ನಾ ವಿರುದ್ಧ ಗೆದ್ದ ಪುಣೇರಿ, ಹಾಲಿ ಚಾಂಪಿಯನ್‌ ಜೈಪುರವನ್ನು ಮಣಿಸಿದ ಹರ್ಯಾಣ.

ನಾಸಿರ್‌ ಸಜಿಪ
ಕನ್ನಡಪ್ರಭ ವಾರ್ತೆ ಹೈದರಾಬಾದ್‌

ಒಂದೆಡೆ ಚುರುಕಿನ ರೈಡರ್‌ಗಳು, ಚಾಣಾಕ್ಷ ಡಿಫೆಂಡರ್‌ಗಳಿರುವ ಪುಣೇರಿ ಪಲ್ಟನ್. ಮತ್ತೊಂದೆಡೆ ಎದುರಾಳಿ ತಂಡದ ಡಿಫೆನ್ಸ್‌ ಕೋಟೆಯನ್ನೇ ನಡುಗಿಸಬಲ್ಲ ರೈಡರ್‌ಗಳನ್ನೊಳಗೊಂಡ, ‘ಡಾರ್ಕ್‌ ಹಾರ್ಸ್‌’ ಎಂದೇ ಕರೆಯಬಹುದಾದ ಹರ್ಯಾಣ ಸ್ಟೀಲರ್ಸ್‌. 

ಈ ಬಾರಿ ಪ್ರೊ ಕಬಡ್ಡಿಯಲ್ಲಿ ಇತ್ತಂಡಗಳು ಟ್ರೋಫಿಗಾಗಿ ಸೆಣಸಾಡಲು ಸಜ್ಜಾಗಿವೆ.ಬುಧವಾರ 10ನೇ ಆವೃತ್ತಿ ಪ್ರೊ ಕಬಡ್ಡಿಯ ಸೆಮಿಫೈನಲ್‌ನಲ್ಲಿ ಪುಣೆ ತಂಡ 3 ಬಾರಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ವಿರುದ್ಧ 37-21 ಅಂಕಗಳಿಂದ, ಹರ್ಯಾಣ ತಂಡ ಹಾಲಿ ಚಾಂಪಿಯನ್‌ ಜೈಪುರ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ 31-27ಅಂಕಗಳಿಂದ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೇರಿದವು.

ಪುಣೆ ಓಟಕ್ಕಿಲ್ಲ ಬ್ರೇಕ್‌: ಗುಂಪು ಹಂತದಲ್ಲಿ ಅಗ್ರಸ್ಥಾನಿಯಾಗಿದ್ದ ಪುಣೆ ಓಟಕ್ಕೆ ಸೆಮೀಸ್‌ನಲ್ಲೂ ಬ್ರೇಕ್‌ ಬೀಳಲಿಲ್ಲ. ಮೊದಲ ಸೆಮೀಸ್‌ನ ಪುಣೆ-ಪಾಟ್ನಾ ಕದನದಲ್ಲಿ ಆರಂಭದಲ್ಲಿ ತೀವ್ರ ಪೈಪೋಟಿ ಕಂಡುಬಂತು. 

ಆದರೆ ಬಳಿಕ ಪಂದ್ಯದ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಪುಣೆ ಏಕಪಕ್ಷೀಯವಾಗಿ ಗೆಲುವು ತನ್ನದಾಗಿಸಿಕೊಂಡಿತು. ಆರಂಭಿಕ 10 ನಿಮಿಷಗಳಲ್ಲಿ ಉಭಯ ತಂಡಗಳು 8-8ರಲ್ಲಿ ಸಮಬಲ ಸಾಧಿಸಿದ್ದವು. 

ಬಳಿಕ ಪುಣೆ ಆಡಿದ್ದೇ ಆಟ ಎಂಬಂತಾಯಿತು. 15ನೇ ನಿಮಿಷದಲ್ಲಿ ಆಲೌಟಾದ ಪಾಟ್ನಾ ಮೊದಲಾರ್ಧಕ್ಕೆ 11-20ರಲ್ಲಿ ಹಿನ್ನಡೆ ಅನುಭವಿಸಿತು.

ದ್ವಿತೀಯಾರ್ಧದಲ್ಲೂ ಪುಣೆ ಅಂಕ ಗಳಿಕೆಗೆ ತಡೆ ನೀಡಲು ಪಾಟ್ನಾಗೆ ಸಾಧ್ಯವಾಗಲಿಲ್ಲ. ಕೊನೆ 20 ನಿಮಿಷದಲ್ಲಿ ಪಾಟ್ನಾ ಒಂದೇ ಒಂದು ಟ್ಯಾಕಲ್‌ ಅಂಕ ಗಳಿಸಲಿಲ್ಲ. 26ನೇ ನಿಮಿಷದಲ್ಲಿ ಪಾಟ್ನಾವನ್ನು ಮತ್ತೆ ಆಲೌಟ್‌ ಮಾಡಿದ ಪುಣೆ ಅಂಕ ಗಳಿಕೆ ಹೆಚ್ಚಿಸುತ್ತಲೇ ಹೋಯಿತು. 

ನಾಯಕ ಅಸ್ಲಂ ಹಾಗೂ ಮೋಹಿತ್‌ ತಲಾ 7 ರೈಡ್‌ ಅಂಕ ಗಳಿಸಿದರೆ, ಬಲಿಷ್ಠ ಬಾಹುಗಳ ಡಿಫೆಂಡರ್‌ ಮೊಹಮದ್‌ರೆಜಾ ಶಾರ್ದ್ಲೂ 5 ಟ್ಯಾಕಲ್‌ ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸದ್ದಿಲ್ಲದೆ ಫೈನಲ್‌ ತಲುಪಿದ ಹರ್‍ಯಾಣಸೆ ಮಿಫೈನಲ್‌ಗೇರಿದ್ದ 4 ತಂಡಗಳ ಪೈಕಿ ಹರ್ಯಾಣ ಫೈನಲ್‌ ತಲುಪಲಿದೆ ಅಂದುಕೊಂಡವರು ಕಡಿಮೆ. ಟೂರ್ನಿಯ ಇತಿಹಾಸದಲ್ಲಿ ತನ್ನದೇ ಆದ ಖ್ಯಾತಿ ಹೊಂದಿದ್ದ, ಲೀಗ್‌ ಹಂತದಲ್ಲಿ 2ನೇ ಸ್ಥಾನಿಯಾಗಿ ಸೆಮೀಸ್‌ಗೇರಿದ್ದ ಜೈಪುರ ವಿರುದ್ಧ ಗೆದ್ದು ಹರ್ಯಾಣ ಚೊಚ್ಚಲ ಬಾರಿ ಫೈನಲ್‌ಗೇರಿತು. 

ಮೊದಲ ನಿಮಿಷದಿಂದಲೇ ಹರ್ಯಾಣ ಅಂಕ ಗಳಿಕೆಯಲ್ಲಿ ಮುನ್ನಡೆಯಲ್ಲಿದ್ದರೂ ಜೈಪುರ ಕೊನೆ ನಿಮಿಷದವರೆಗೂ ಪಟ್ಟು ಬಿಡಲಿಲ್ಲ. ಮೊದಲಾರ್ಧಕ್ಕೆ 19-13ರಿಂದ ಮುನ್ನಡೆ ಪಡೆದಿದ್ದ ಹರ್ಯಾಣಕ್ಕೆ 2ನೇ ಅವಧಿಯಲ್ಲಿ ಜೈಪುರ ಪ್ರಬಲ ಸ್ಪರ್ಧೆ ನೀಡಿತು. 

ಆದರೆ ಒತ್ತಡ ನಿಭಾಯಿಸಿ 3ರಿಂದ 5 ಅಂಕಗಳಿಂದ ಕೊನೆವರೆಗೂ ಮುನ್ನಡೆ ಸಾಧಿಸುವಲ್ಲಿ ಸಫಲವಾದ ಹರ್ಯಾಣ ಫೈನಲ್‌ಗೇರಿತು. ಜೈಪುರದ ಅರ್ಜುನ್‌ 14 ಅಂಕಗಳಿಸಿದರೂ ಗೆಲುವು ಸಿಗಲಿಲ್ಲ, ಹರ್ಯಾಣದ ನವೀನ್‌ 11, ಶಿವಂ 7 ಅಂಕ ಪಡೆದರು. 

ಚೊಚ್ಚಲ ಪ್ರಶಸ್ತಿಗಾಗಿನಾಳೆ ರೋಚಕ ಫೈಟ್‌ಫೈನಲ್‌ಗೇರಿರುವ ಪಾಟ್ನಾ ಹಾಗೂ ಹರ್ಯಾಣ ಶುಕ್ರವಾರ ಚೊಚ್ಚಲ ಪ್ರಶಸ್ತಿಗಾಗಿ ಪರಸ್ಪರ ಸೆಣಸಾಡಲಿವೆ. 

ಪುಣೆ ಕಳೆದ ವರ್ಷವೂ ಫೈನಲ್‌ಗೇರಿತ್ತು. ಆದರೆ ಜೈಪುರ ವಿರುದ್ಧ ಸೋತು ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಮತ್ತೊಂದೆಡೆ ಚೊಚ್ಚಲ ಫೈನಲ್‌ಗೇರಿರುವ ಹರ್ಯಾಣ ಮೊದಲ ಅವಕಾಶದಲ್ಲೇ ಟ್ರೋಫಿ ಗೆಲ್ಲುವ ತವಕದಲ್ಲಿದೆ.