ಶ್ರೀಲಂಕಾ ವಿರುದ್ಧ ಏಕದಿನ ಸರಣಿ: ರೋಹಿತ್‌, ವಿರಾಟ್‌, ಬೂಮ್ರಾಗೆ ವಿಶ್ರಾಂತಿ ಸಾಧ್ಯತೆ

| Published : Jul 09 2024, 12:55 AM IST / Updated: Jul 09 2024, 04:34 AM IST

ಶ್ರೀಲಂಕಾ ವಿರುದ್ಧ ಏಕದಿನ ಸರಣಿ: ರೋಹಿತ್‌, ವಿರಾಟ್‌, ಬೂಮ್ರಾಗೆ ವಿಶ್ರಾಂತಿ ಸಾಧ್ಯತೆ
Share this Article
  • FB
  • TW
  • Linkdin
  • Email

ಸಾರಾಂಶ

ಸೆಪ್ಟೆಂಬರ್‌ನಿಂದ 2025ರ ಜನವರಿ ವರೆಗೆ ಭಾರತ ತಂಡ ಬಾಂಗ್ಲಾ ನ್ಯೂಜಿಲೆಂಡ್‌, ಆಸ್ಟ್ರೇಲಿಯಾ ವಿರುದ್ಧ ಒಟ್ಟು 10 ಟೆಸ್ಟ್‌ ಪಂದ್ಯಗಳನ್ನಾಡಲಿವೆ. ಹೀಗಾಗಿ ರೋಹಿತ್‌, ಕೊಹ್ಲಿಗೆ ಲಂಕಾ ಸರಣಿಗೆ ವಿಶ್ರಾಂತಿ ನೀಡುವ ಸಾಧ್ಯತೆ.

ನವದೆಹಲಿ: ಭಾರತದ ಹಿರಿಯ ಕ್ರಿಕೆಟಿಗರಾದ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿಗೆ ಬಿಸಿಸಿಐ ಜುಲೈ 27ರಿಂದ ಆರಂಭಗೊಳ್ಳಲಿರುವ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಿಂದ ವಿಶ್ರಾಂತಿ ನೀಡುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸೆಪ್ಟೆಂಬರ್‌ನಿಂದ 2025ರ ಜನವರಿ ವರೆಗೆ ಭಾರತ ತಂಡ ಬಾಂಗ್ಲಾದೇಶ, ನ್ಯೂಜಿಲೆಂಡ್‌ ಹಾಗೂ ಆಸ್ಟ್ರೇಲಿಯಾ ವಿರುದ್ಧ ಒಟ್ಟು 10 ಟೆಸ್ಟ್‌ ಪಂದ್ಯಗಳನ್ನಾಡಲಿವೆ. ಆ ಬಳಿಕ ಚಾಂಪಿಯನ್ಸ್ ಟ್ರೋಫಿ ಕೂಡಾ ನಿಗದಿಯಾಗಿದೆ. ಹೀಗಾಗಿ ಕಳೆದ ಡಿಸೆಂಬರ್‌ನಿಂದ ನಿರಂತರವಾಗಿ ಆಡುತ್ತಿರುವ ರೋಹಿತ್‌, ಕೊಹ್ಲಿಗೆ ಲಂಕಾ ಸರಣಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.

ಒಂದು ವೇಳೆ ರೋಹಿತ್‌ ಅಲಭ್ಯರಾದರೆ, ಹಾರ್ದಿಕ್‌ ಪಾಂಡ್ಯ ಅಥವಾ ಕೆ.ಎಲ್‌.ರಾಹುಲ್‌ ಲಂಕಾ ವಿರುದ್ಧ ಏಕದಿನ ಸರಣಿಗೆ ನಾಯಕತ್ವ ವಹಿಸುವ ನಿರೀಕ್ಷೆಯಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.

ಜಯಸೂರ್ಯ ಶ್ರೀಲಂಕಾ ತಂಡದ ಹಂಗಾಮಿ ಕೋಚ್‌

ಕೊಲಂಬೊ: ದಿಗ್ಗಜ ಕ್ರಿಕೆಟಿಗ ಸನತ್‌ ಜಯಸೂರ್ಯ ಶ್ರೀಲಂಕಾ ತಂಡದ ಹಂಗಾಮಿ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಅವರು ಭಾರತ ವಿರುದ್ಧ ಜುಲೈ 27ರಿಂದ ಆರಂಭಗೊಳ್ಳಲಿರುವ 3 ಟಿ20 ಹಾಗೂ 3 ಏಕದಿನ ಪಂದ್ಯಗಳ ಸರಣಿ ಹಾಗೂ ಆಗಸ್ಟ್‌ನಲ್ಲಿ ನಿಗದಿಯಾಗಿರುವ ಇಂಗ್ಲೆಂಡ್‌ ವಿರುದ್ಧದ ಸರಣಿಗೆ ಲಂಕಾ ತಂಡಕ್ಕೆ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ.ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ಕಳಪೆ ಪ್ರದರ್ಶನ ತೋರಿದ್ದರಿಂದ ಕೋಚ್‌ ಸ್ಥಾನಕ್ಕೆ ಇಂಗ್ಲೆಂಡ್‌ನ ಕ್ರಿಸ್‌ ಸಿಲ್ವರ್‌ವುಡ್‌ ರಾಜೀನಾಮೆ ನೀಡಿದ್ದರು. ಜಯಸೂರ್ಯ ಲಂಕಾ ಪರ 110 ಟೆಸ್ಟ್‌ಗಳಲ್ಲಿ 6973 ರನ್‌, 445 ಏಕದಿನ ಪಂದ್ಯಗಳಲ್ಲಿ 13430 ರನ್‌ ಕಲೆಹಾಕಿದ್ದಾರೆ.