ಪ್ರಜ್ವಲ್‌ ಬಂಧನಕ್ಕೆ ಎಸ್‌ಐಟಿ ಸನ್ನದ್ಧ

| Published : May 06 2024, 08:47 AM IST

Prajwal Revanna

ಸಾರಾಂಶ

ಮಹಿಳೆಯ ಅಪಹರಣ ಪ್ರಕರಣದಲ್ಲಿ ತಂದೆ ಎಚ್‌.ಡಿ.ರೇವಣ್ಣ ಬಂಧನವಾಗಿರುವ ಹಿನ್ನೆಲೆಯಲ್ಲಿ ಪ್ರಜ್ವಲ್‌ ರೇವಣ್ಣ ವಿದೇಶದಿಂದ ಯಾವುದೇ ಸಮಯದಲ್ಲಿ ರಾಜ್ಯಕ್ಕೆ ವಾಪಸ್‌ ಆಗುವ ಸಾಧ್ಯತೆಯಿದೆ.

ಬೆಂಗಳೂರು :  ಮಹಿಳೆಯ ಅಪಹರಣ ಪ್ರಕರಣದಲ್ಲಿ ತಂದೆ ಎಚ್‌.ಡಿ.ರೇವಣ್ಣ ಬಂಧನವಾಗಿರುವ ಹಿನ್ನೆಲೆಯಲ್ಲಿ ಪ್ರಜ್ವಲ್‌ ರೇವಣ್ಣ ವಿದೇಶದಿಂದ ಯಾವುದೇ ಸಮಯದಲ್ಲಿ ರಾಜ್ಯಕ್ಕೆ ವಾಪಸ್‌ ಆಗುವ ಸಾಧ್ಯತೆಯಿದೆ.

ಈಗಾಗಲೇ ಎಸ್‌ಐಟಿ ತಂಡಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೇಶದ ಪ್ರಮುಖ ವಿಮಾನ ನಿಲ್ದಾಣದಲ್ಲಿ ನಿಗಾ ವಹಿಸಿವೆ. ಪ್ರಜ್ವಲ್‌ ರೇವಣ್ಣ ಬಂದ ತಕ್ಷಣ ವಶಕ್ಕೆ ಪಡೆಯಲಿವೆ.

ತಂದೆ ಎಚ್‌.ಡಿ.ರೇವಣ್ಣ ಅವರ ಬಂಧನವಾಗಿರುವ ಹಿನ್ನೆಲೆಯಲ್ಲಿ ವಕೀಲರ ಸಲಹೆ ಮೇರೆಗೆ ಪ್ರಜ್ವಲ್‌ ವಿದೇಶದಿಂದ ರಾಜ್ಯಕ್ಕೆ ವಾಪಸ್‌ ಆಗುವ ಸಾಧ್ಯತೆಯಿದೆ. ಶನಿವಾರ ತಂದೆ ರೇವಣ್ಣ ಬಂಧನಕ್ಕೆ ಒಳಗಾಗುವ ಮುನ್ನ ಪ್ರಜ್ವಲ್‌ಗೆ ಕರೆ ಮಾಡಿ ಕೆಲ ಕಾಲ ಮಾತನಾಡಿದ್ದಾರೆ. ಇದರ ಬೆನ್ನಲ್ಲೇ ಪ್ರಜ್ವಲ್‌ ವಿದೇಶದಿಂದ ಬೆಂಗಳೂರಿಗೆ ವಾಪಸ್‌ ಆಗಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಜ್ವಲ್‌ ವಿರುದ್ಧ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಸ್ಥಳೀಯ ಸಂಸ್ಥೆಗಳ ಮಾಜಿ ಸದಸ್ಯೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಎಫ್‌ಐಆರ್‌ ದಾಖಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಎರಡು ಬಾರಿ ನೋಟಿಸ್‌ ನೀಡಿದರೂ ಗೈರು ಹಾಜರಾಗಿದ್ದಾರೆ. ಈ ನಡುವೆ ಎಸ್‌ಐಟಿ ಲುಕೌಟ್‌ ನೋಟಿಸ್‌ ಜಾರಿ ಮಾಡಿ ದೇಶದ ಎಲ್ಲಾ ವಿಮಾನ ನಿಲ್ದಾಣಗಳಿಗೂ ತಲುಪಿಸಿದೆ.

ಅಂತೆಯೆ ವಿದೇಶದಲ್ಲಿ ಪ್ರಜ್ವಲ್‌ ರೇವಣ್ಣನ ಚಲನವನಗಳ ಮೇಲೆ ನಿಗಾವಹಿಸಲು ಕೇಂದ್ರದ ತನಿಖಾ ಸಂಸ್ಥೆ ಸಿಬಿಐ ಸಂಪರ್ಕಿಸಿ ಇಂಟರ್‌ಪೋಲ್‌ ಮುಖಾಂತರ ಬ್ಲೂ ಕಾರ್ನರ್‌ ನೋಟಿಸ್‌ ಜಾರಿ ಮಾಡಿದೆ. ಈಗಾಗಲೇ ಎಸ್‌ಐಟಿ ಅಧಿಕಾರಿಗಳು ವಿದೇಶದಲ್ಲಿ ಪ್ರಜ್ವಲ್‌ ರೇವಣ್ಣನ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಲೋಕಸಭಾ ಚುನಾವಣೆ ಮೊದಲ ಹಂತದ ಮತದಾನಕ್ಕೆ ಎರಡು ದಿನ ಬಾಕಿ ಇರುವಾಗ ಪ್ರಜ್ವಲ್‌ ರೇವಣ್ಣ ಕೆಲ ಮಹಿಳೆಯರ ಜತೆಗೆ ನಡೆಸಿದ್ದಾರೆ ಎನ್ನಲಾದ ಲೈಂಗಿಕ ಕ್ರಿಯೆಯ ಅಶ್ಲೀಲ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇದರ ಬೆನ್ನಲ್ಲೇ ಮತದಾನ ಮುಗಿದ ಮಾರನೇ ದಿನವೇ ಪ್ರಜ್ವಲ್‌ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್‌ ಪಡೆದು ಜರ್ಮನಿಗೆ ತೆರಳಿದ್ದಾರೆ.