ಜಿಲ್ಲೆಯಲ್ಲಿ ತಪ್ಪಿದ ಚಿರತೆ ಹಾವಳಿ, ಜನರಿಗೆ ನೆಮ್ಮದಿ

| Published : May 06 2024, 12:34 AM IST

ಜಿಲ್ಲೆಯಲ್ಲಿ ತಪ್ಪಿದ ಚಿರತೆ ಹಾವಳಿ, ಜನರಿಗೆ ನೆಮ್ಮದಿ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲಂದರಲ್ಲಿ ಕಾಣಸಿಗುತ್ತಿದ್ದ ಮತ್ತು ಐದು ಮಂದಿಯನ್ನು ಕೊಂದು ನರಹಂತಕವಾಗಿದ್ದ ಚಿರತೆ ಕಾಟ ಈಗ ಬಹುತೇಕ ನಿಯಂತ್ರಣಕ್ಕೆ ಬಂದಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ಎಲ್ಲಂದರಲ್ಲಿ ಕಾಣಸಿಗುತ್ತಿದ್ದ ಮತ್ತು ಐದು ಮಂದಿಯನ್ನು ಕೊಂದು ನರಹಂತಕವಾಗಿದ್ದ ಚಿರತೆ ಕಾಟ ಈಗ ಬಹುತೇಕ ನಿಯಂತ್ರಣಕ್ಕೆ ಬಂದಿದೆ.ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಚಿರತೆ ಸಂತತಿ ಹೆಚ್ಚಿದೆ. ತುಮಕೂರು ಗ್ರಾಮಾಂತರ, ಕುಣಿಗಲ್ ಹಾಗೂ ಗುಬ್ಬಿ ತಾಲೂಕು ವ್ಯಾಪ್ತಿಯಲ್ಲಿ ಐದು ಮಂದಿಯನ್ನು ಚಿರತೆ ಕೊಂದಿತ್ತು. ಮನೆ ಮುಂದೆ ಆಡುತ್ತಿದ್ದ ಮಗುವನ್ನು ಚಿರತೆಯೊಂದು ಕೊಂದು ಹಾಕಿದ್ದು, ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅಲ್ಲದೇ ನರಹಂತಕ ಚಿರತೆ ಸೆರೆಗೆ ಆಪರೇಷನ್ ಚಿರತೆಗೆ ಚಾಲನೆ ಸಿಕ್ಕಿತ್ತು.ಈ ಚಿರತೆ ಸೆರೆಹಿಡಿಯಲು ಮೊದಲು ಬೋನ್‌ ಇಡಲಾಗಿತ್ತು. ಅದು ಬೋನಿನ ಬಳಿ ಬಂದರೂ ಬೋನಿನೊಳಗೆ ಇಡಲಾಗಿದ್ದ ನಾಯಿ ಬಳಿ ಹೋಗದೆ ವಾಪಾಸ್ ಆಗುತ್ತಿತ್ತು. ಬಳಿಕ ಆನೆಗಳ ಮೂಲಕ ಆಪರೇಷನ್‌ಗೆ ಕೈ ಹಾಕಲಾಯಿತು. ಆದರೆ ಅದು ಕೂಡ ಫಲಪ್ರದವಾಗಲಿಲ್ಲ. ಆದರೆ ಪಟ್ಟು ಬಿಡದೆ ಅರಣ್ಯ ಇಲಾಖೆ ನರಹಂತಕ ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾದರು.ಎಲ್ಲೆಂದರಲ್ಲಿ ಚಿರತೆಗಳು: ತುಮಕೂರು ಗ್ರಾಮಾಂತರ, ಕುಣಿಗಲ್ ಹಾಗೂ ಗುಬ್ಬಿ ತಾಲೂಕಿನಲ್ಲಿ ಒಂದು ಹಂತದಲ್ಲಿ ಎಲ್ಲಂದರಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದವು. ಅಲ್ಲದೇ ಸಂಜೆ ಮೇಲೆ ಯಾರೂ ಕೂಡ ಹೊರಗೇ ಹೋಗಲು ಹೆದರುತ್ತಿದ್ದರು. ಚಿರತೆಗಳು ನಿರಂತರ ಓಡಾಡುವಿಕೆಗೆ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದರು. ಇದರಿಂದ ಅರಣ್ಯ ಇಲಾಖೆ ಮೇಲೆ ದೂರುಗಳ ಸರಮಾಲೆಯೇ ಹೋಗುತ್ತಿತ್ತು. ಕಡೆಗೂ ಸಾಲು ಸಾಲು ಬೋನುಗಳನ್ನು ಇಟ್ಟು ವಾರದಲ್ಲಿ 10 ಕ್ಕೂ ಹೆಚ್ಚು ಚಿರತೆ ಹಿಡಿಯುವಲ್ಲಿ ಯಶಸ್ವಿಯಾಯಿತು. ಕಳೆದ ಎರಡು ತಿಂಗಳಿನಿಂದ ಚಿರತೆಗಳ ಕಾಟ ಕೊಂಚ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಕಾಡಂಚಿನ ಹಳ್ಳಿಗಳಿಗೆ ಬಂದು ನಾಯಿ, ಕುರಿ, ಮೇಕೆಗಳನ್ನು ಕೊಂದು ಹೋಗುತ್ತಿದ್ದ ಚಿರತೆಗಳ ಹಾವಳಿ ಕೊಂಚ ತಗ್ಗಿದೆ.

ನಗರಕ್ಕೂ ಬಂದಿತ್ತು ಚಿರತೆ: ತುಮಕೂರಿನಲ್ಲಿ ಚಿರತೆ ಹಾವಳಿ ಎಷ್ಟಿತ್ತೆಂದರೆ ತುಮಕೂರು ನಗರಕ್ಕೂ ಕೂಡ ಚಿರತೆ ದಾಳಿ ಮಾಡಿತ್ತು. ತುಮಕೂರಿನ ಸಪ್ತಗಿರಿ ಬಡಾವಣೆಯಲ್ಲಿ ಮನೆಯೊಂದಕ್ಕೆ ನುಗ್ಗಿ ದೊಡ್ಡ ಹೈಡ್ರಾಮ ಸೃಷ್ಟಿ ಮಾಡಿತ್ತು. ಬೆಳಗ್ಗೆ ಮನೆಯ ಮಾಲೀಕರು ಹಾಲು ತರಲು ಹೊರಗೆ ಹೋಗಿದ್ದ ಸಮಯದಲ್ಲಿ ಚಿರತೆ ಮನೆಯೊಳಗೆ ನುಗ್ಗಿತ್ತು. ಸಂಜೆಯ ವೇಳೆಗೆ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿತ್ತು.

ಆಹಾರ ಸರಪಳಿಗೆ ಪೆಟ್ಟು: ಕಲ್ಲು ಗಣಿಗಾರಿಕೆ ಹಾಗೂ ಅಕ್ರಮ ಬೇಟೆಯಿಂದಾಗಿ ಹಂದಿ, ಜಿಂಕೆಗಳು ಕಣ್ಮರೆಯಾಗಲು ಶುರುವಾಯಿತು. ಹೀಗಾಗಿ ಚಿರತೆಗೆ ಆಹಾರ ಸಿಗದ ಕಾರಣ ನಾಯಿ, ಕುರಿ, ಮೇಕೆಗಳನ್ನು ತಿನ್ನಲು ಶುರು ಮಾಡಿಕೊಂಡಿತು. ಈಗಲೂ ಅಲ್ಲಲ್ಲಿ ದಾಳಿಯಾಗುತ್ತಿದ್ದರೂ ನಿಯಂತ್ರಣಕ್ಕೆ ಬಂದಿದೆ. ಅಕ್ರಮ ಬೇಟೆ ತಪ್ಪಿರುವುದು ಕೂಡ ಇದಕ್ಕೆ ಕಾರಣವಿರಬಹುದು ಎನ್ನಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಚಿರತೆಗಳ ಹಾವಳಿ ತಪ್ಪಿರುವುದು ಜನರಿಗೆ ನೆಮ್ಮದಿಯುಂಟು ಮಾಡಿದೆ.