ಭಾರತ ಕಿರಿಯರ ಹಾಕಿ ತಂಡ: ಕೊಡಗಿನ ವಚನ್‌, ಬಿಪಿನ್‌ ಆಯ್ಕೆ

| Published : May 06 2024, 12:34 AM IST

ಸಾರಾಂಶ

20 ಮಂದಿಯ ತಂಡದಲ್ಲಿ ಕರ್ನಾಟಕದ ಇಬ್ಬರು ಆಯ್ಕೆಯಾಗಿದ್ದಾರೆ. ಇಬ್ಬರೂ ಕೊಡಗು ಮೂಲದವರು ಎಂಬುದು ವಿಶೇಷ.

ಮುರಳೀಧರ್‌ ಶಾಂತಳ್ಳಿ

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಯುರೋಪ್‌ ಪ್ರವಾಸಕ್ಕೆ ಮೇ 20ರಿಂದ ಹತ್ತು ದಿನಗಳ ಕಾಲ ತೆರಳಲಿರುವ ಭಾರತ ಕಿರಿಯರ ತಂಡವನ್ನು ಹಾಕಿ ಇಂಡಿಯಾ ಶನಿವಾರ ಪ್ರಕಟಿಸಿದ್ದು, 20 ಮಂದಿಯ ತಂಡದಲ್ಲಿ ಕರ್ನಾಟಕದ ಇಬ್ಬರು ಆಯ್ಕೆಯಾಗಿದ್ದು, ಇಬ್ಬರೂ ಕೊಡಗು ಮೂಲದವರು ಎಂಬುದು ವಿಶೇಷ.ಜಿಲ್ಲೆಯ ಸೋಮವಾರಪೇಟೆಯ ಹಾಕಿ ಆಟಗಾರ ವಚನ್‌ ಅಶೋಕ್‌ ಮತ್ತು ಪೊನ್ನಂಪೇಟೆಯ ಬಿಪಿನ್‌ ರವಿ ತಂಡಕ್ಕೆ ಆಯ್ಕೆಯಾದ ಕನ್ನಡಿಗರು.

ಇಬ್ಬರೂ ಆಟಗಾರರು ಪೊನ್ನಂಪೇಟೆಯ ಕ್ರೀಡಾಶಾಲೆಗೆ ಸೇರ್ಪಡೆಗೊಂಡು ಹತ್ತನೇ ತರಗತಿ ಮುಗಿದ ನಂತರ ಪಿಯುಸಿ ಮತ್ತು ಪದವಿ ಶಿಕ್ಷಣವನ್ನು ಬೆಂಗಳೂರಿನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಒಟ್ಟಿಗೆ ಭಾರತ ಕಿರಿಯರ ತಂಡಕ್ಕೆ ಆಯ್ಕೆಯಾಗುವ ಮೂಲಕ ಅಪರೂಪದ ಸ್ನೇಹಿತರೆನಿಸಿಕೊಂಡಿದ್ದಾರೆ.

ಮೂಲತಃ ಸೋಮವಾರಪೇಟೆಯ ಡಾಲ್ಫಿನ್ಸ್‌ ಸ್ಪೋರ್ಟ್ಸ್‌ ಕ್ಲಬ್‌ ಅಧ್ಯಕ್ಷ ಅಶೋಕ್‌-ಸುಜಿನಿ ದಂಪತಿ ಪುತ್ರ ವಚನ್‌, ಬಾಲ್ಯದಿಂದಲೇ ಹಾಕಿ ಕ್ರೀಡೆಯತ್ತ ಒಲವು ಮೂಡಿಸಿಕೊಂಡವರು. ಎಂಟನೇ ತರಗತಿಗೆ ಪೊನ್ನಂಪೇಟೆಯ ಕ್ರೀಡಾಶಾಲೆಗೆ ಆಯ್ಕೆಯಾದರು. ಪಿಯುಸಿಗೆ ಬೆಂಗಳೂರಿನ ಡಿವೈಎಸ್‌ಎಸ್‌ ಕ್ರೀಡಾ ಹಾಸ್ಟೆಲ್‌ಗೆ ಸೇರ್ಪಡೆಗೊಂಡರು. ಪ್ರಸ್ತುತ ಬೆಂಗಳೂರಿನ ಮಹಾವೀರ್‌ ಜೈನ್‌ ಕಾಲೇಜಿನಲ್ಲಿ ಅಂತಿಮ ಪದವಿ ವಿದ್ಯಾರ್ಥಿ.ವಚನ್‌ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸೋಮವಾರಪೇಟೆಯ ಒಎಲ್‌ವಿ ಕಾನ್ವೆಂಟ್‌ನಲ್ಲಿ ಪೂರೈಸಿದ್ದಾರೆ.

2019ರಲ್ಲಿ ಛತ್ತೀಸ್‌ಗಡ್‌ನ ಬಿಲಾಸ್‌ಪುರದಲ್ಲಿ ಜರುಗಿದ ಸಬ್‌ ಜೂನಿಯರ್‌ ರಾಷ್ಟ್ರೀಯ ಪಂದ್ಯಾವಳಿ, 2022ರಲ್ಲಿ ಚೆನ್ನೈನ ಕೋವಿಲ್‌ಪಟ್ಟಿಯಲ್ಲಿ ನಡೆದ ಕಿರಿಯರ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು, ಒಡಿಶಾದ ರೂರ್ಕೆಲಾದಲ್ಲಿ ಕಿರಿಯರ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ವಚನ್‌ ಮತ್ತು ಬಿಪಿನ್‌ ಇಬ್ಬರೂ ಪಾಲ್ಗೊಂಡಿರುವುದು ವಿಶೇಷ. ಅಲ್ಲದೇ 2024ರ ಯುರೋಪ್‌ ಪ್ರವಾಸಕ್ಕೂ ಕೂಡ ಒಟ್ಟಿಗೆ ಆಯ್ಕೆಯಾಗಿರುವುದು ವಿಶೇಷವಾಗಿದೆ.

ಬಿಪಿನ್‌ ಪರಿಚಯ: ಮೂಲತಃ ಪೊನ್ನಂಪೇಟೆಯ ಬಿಲ್ಲವರ ರವಿ-ಸುನಂದ ದಂಪತಿ ಬಿಪಿನ್‌ ಕಳೆದ ವರ್ಷವೂ ಕಿರಿಯರ ತಂಡದ ಕ್ಯಾಂಪ್‌ನಲ್ಲಿ ಸ್ಥಾನಪಡೆದಿದ್ದರು. ಆದರೆ ಈ ಬಾರಿ ಭಾರತ ಕಿರಿಯರ ತಂಡಕ್ಕೆ ಆಯ್ಕೆಯಾಗುವ ಮೂಲಕ ಭವಿಷ್ಯದಲ್ಲಿ ಉತ್ತಮ ಆಟಗಾರರಾಗಿ ರೂಪುಗೊಳ್ಳುವ ಭರವಸೆ ಮೂಡಿಸಿದ್ದಾರೆ. ಪೊನ್ನಂಪೇಟೆಯ ಕ್ರೀಡಾಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಬಿಪಿನ್‌ ಮತ್ತು ವಚನ್‌ ಒಂದೇ ಬ್ಯಾಚ್‌ನಲ್ಲಿ ಕ್ರೀಡಾಶಾಲೆಗೆ ಆಯ್ಕೆಯಾದವರು. ಬಿಪಿನ್‌ ಎರಡು ಸಬ್‌ಜೂನಿಯರ್‌, ಎರಡು ಜೂನಿಯರ್‌ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಪ್ರತಿನಿಧಿಸಿ, ಒಂದು ವರ್ಷದ ಹಿಂದೆಯೇ ಹಾಕಿ ಕ್ಯಾಂಪ್‌ಗೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದರು.

20 ಮಂದಿಯ ತಂಡ: ಡಿಫೆಂಡರ್‌ ರೋಹಿತ್‌ ನೇತೃತ್ವದಲ್ಲಿ 20 ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ಉಪನಾಯಕನಾಗಿ ಶ್ರದ್ಧಾನಂದ್‌ ತಿವಾರಿ ಆಯ್ಕೆಯಾಗಿದ್ದಾರೆ. ಮೇ 20ರಂದು ಪ್ರಥಮ ಪಂದ್ಯವನ್ನು ಬೆಲ್ಜಿಯಂನೊಂದಿಗೆ ಆರಂಭಿಸಲಿರುವ ಭಾರತ ತಂಡ. ನಂತರ 22ರಂದು ನೆದರ್‌ಲ್ಯಾಂಡ್ಸ್‌ನ ಕ್ಲಬ್‌ ತಂಡದೊಂದಿಗೆ, 28 ಮತ್ತು 29ರಂದು ಜರ್ಮನಿ ತಂಡದೊಂದಿಗೆ ಆಡಲಿದೆ.

ಕಿರಿಯರ ಹಾಕಿ ತಂಡಕ್ಕೆ ಇಬ್ಬರೂ ಆಯ್ಕೆಯಾಗಿರುವುದು ಸಂತಸ ತಂದಿದೆ. ನಾನೂ ಕೂಡ ಹಾಕಿ ಕ್ರೀಡೆಯಲ್ಲಿ ರಾಷ್ಟ್ರೀಯ ತಂಡದಲ್ಲಿ ಆಡಬೇಕೆಂದು ಕನಸು ಕಂಡಿದ್ದೆ. ಆದರೆ ನನ್ನ ಕನಸನ್ನು ಮಗ ಈಡೇರಿಸುವ ಹಾದಿಯಲ್ಲಿ ಹೆಜ್ಜೆ ಹಾಕಿದ್ದಾನೆ ಎಂದು ಡಾಲ್ಫಿನ್‌ ಹಾಕಿ ಕ್ಲಬ್‌ ಅಧ್ಕ್ಷಕ್ಷ ಹಾಗೂ ವಚನ್‌ ತಂದೆ ಅಶೋಕ್‌ ಮತ್ತು ತಾಯಿ ಸುಜಿನಿ ‘ಕನ್ನಡಪ್ರಭ’ದೊಂದಿಗೆ ಸಂತಸ ಹಂಚಿಕೊಂಡರು.

ಬಾಲ್ಯದಿಂದಲೇ ಹಾಕಿಯತ್ತ ವಿಶೇಷ ಆಸಕ್ತಿಹೊಂದಿದ್ದ ಬಿಪಿನ್‌, ಸತತ ಪರಿಶ್ರಮದಿಂದ ಭಾರತ ಕಿರಿಯರ ತಂಡಕ್ಕೆ ಆಯ್ಕೆಯಾಗಿದ್ದಾನೆ. ಕಳೆದ ವರ್ಷವೂ ಕೂಡ ಕ್ಯಾಂಪ್‌ಗೆ ಆಯ್ಕೆಯಾದರೂ, ತಂಡದಲ್ಲಿ ಸ್ಥಾನ ದೊರೆತಿರಲಿಲ್ಲ. ಆದರೆ ಈ ಬಾರಿ ಅವಕಾಶ ದೊರೆತಿದೆ. ಇವನ ಜೊತೆಗೆ ಸೋಮವಾರಪೇಟೆಯ ವಚನ್‌ ಕೂಡ ಆಯ್ಕೆಯಾಗಿರುವುದು ಸಂತಸ ತಂದಿದೆ. ಪ್ರಸ್ತುತ ಬೆಂಗಳೂರಿನ ಕೆಂಗೇರಿಯಲ್ಲಿರುವ ಸಾಯ್‌ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಪೊನ್ನಂಪೇಟೆಯ ಬಿಪಿನ್‌ ತಂದೆ ರವಿ ಮತ್ತು ಸುನಂದ ದಂಪತಿ ಸಂತಸ ಹಂಚಿಕೊಂಡರು.

ವಚನ್‌ ತಂದೆ ಅಶೋಕ್‌ ಕೂಡ ಉತ್ತಮ ಹಾಕಿ ಪಟುವಾಗಿದ್ದು, ಸೋಮವಾರಪೇಟೆಯಲ್ಲಿ ಕಳೆದ 15ವರ್ಷಗಳಿಂದ ಮಕ್ಕಳಿಗೆ ಹಾಕಿ ತರಬೇತಿ ಕ್ಯಾಂಪ್‌ ನಡೆಸಿಕೊಂಡು ಬರಲು ವಿಶೇಷ ಕಾಳಜಿ ವಹಿಸಿದ್ದು, ಸಾವಿರಾರು ಮಕ್ಕಳಿಗೆ ಕ್ರೀಡೆಯಲ್ಲಿ ಸಾಧನೆ ಮಾಡಲು ತಮ್ಮ ಕ್ಲಬ್‌ನ ಸದಸ್ಯರ ಮೂಲಕ ನಿರಂತರವಾಗಿ ಶ್ರಮ ಪಟ್ಟಿದಾರೆ. ಅವರ ಪರಿಶ್ರಮಕ್ಕೆ ಸಂದ ಗೌರವವಾಗಿದೆ ಎಂದು ಸೋಮವಾರಪೇಟೆ ಹಿರಿಯ ಹಾಕಿ ಪಟು ಬಿ.ಕೆ.ಹಾಲಪ್ಪ ಹೇಳಿದರು.

ಬಾಲ್ಯದಿಂದಲೇ ಹಾಕಿ ಕ್ರೀಡೆಯತ್ತ ಒಲವು ಮೂಡಿಸಿಕೊಂಡಿದ್ದ ವಚನ್‌ ಒಎಲ್‌ವಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿ, ಹಾಕಿ ಕ್ರೀಡೆಯಲ್ಲಿ ವಿಶೇಷ ಪ್ರೋತ್ಸಾಹ ನೀಡಿ ಅವನನ್ನು ಪ್ರಾಥಮಿಕ ಹಂತದಿಂದಲೇ ತಯಾರು ಮಾಡಲಾಗಿತ್ತು. ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ದೇಶದ ಹಿರಿಯರ ತಂಡಕ್ಕೆ ಆಯ್ಕೆಯಾಗುವ ಮೂಲಕ ಮುಂದಿನ ಹತ್ತು ವರ್ಷಗಳು ಅಧಿಕ ಕಾಲ ದೇಶಕ್ಕಾಗಿ ಆಡುವ ಮೂಲಕ ಸಾಧನೆ ಮಾಡಲಿ ಎಂದು ಸೋಮವಾರಪೇಟೆ ಒಎಲ್‌ವಿ ಕಾನ್ವೆಂಟ್‌ ಶಾಲೆ ದೈಹಿಕ ಶಿಕ್ಷಣ ಶಿಕ್ಷಕರು ಸಿ.ಎಲ್‌.ಮೋಹನ್‌ ಹೇಳಿದರು.

ಹಾಕಿ ಕ್ರೀಡೆಯನ್ನು ಹೆಚ್ಚಾಗಿ ಪ್ರೀತಿಸುವ ಬಿಪಿನ್‌ ಮತ್ತು ವಚನ್‌ ಇಬ್ಬರೂ ದೇಶದ ಹಿರಿಯರ ತಂಡವನ್ನು ಪ್ರತಿನಿಧಿಸುವಂತಾಗಲಿ. ಇಬ್ಬರೂ ಸ್ನೇಹಿತರು ರಾಜ್ಯದಿಂದ ಆಯ್ಕೆಯಾಗಿರುವುದು ಅವರ ತಂದೆ ತಾಯಿಯವರ ಶ್ರಮಕ್ಕೆ ಸಂದ ಗೌರವ ಎಂದು ಪೊನ್ನಂಪೇಟೆ ಹಿರಿಯ ಪತ್ರಕರ್ತ ಶ್ರೀಧರ್‌ ನೆಲ್ಲಿತಾಯ ಹೇಳಿದರು.