ರಾಜ್ಯ ಕಾಂಗ್ರೆಸ್ ಸರ್ಕಾರ ನೀರ ಮೇಲಿನ ಗುಳ್ಳೆಯಂತೆ: ಗೋವಿಂದ ಕಾರಜೋಳ

| Published : May 06 2024, 12:34 AM IST

ರಾಜ್ಯ ಕಾಂಗ್ರೆಸ್ ಸರ್ಕಾರ ನೀರ ಮೇಲಿನ ಗುಳ್ಳೆಯಂತೆ: ಗೋವಿಂದ ಕಾರಜೋಳ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಗ್ಯಾರಂಟಿಯಿಂದ ಜನರು ಉದ್ದಾರ ಆಗಲು ಸಾಧ್ಯವಿಲ್ಲ. 2 ಸಾವಿರ ರು.ಗಳು ಹಾಕಿ ಜನರಿಂದ ಬೆಲೆ ಏರಿಕೆ ಮೂಲಕ ಮೂರು ಪಟ್ಟು ದುಡ್ಡು ವಸೂಲಿ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಹುಣಸಗಿ

ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ನೀರ ಮೇಲಿನ ಗುಳ್ಳೆಯಿದ್ದಂತೆ, ಯಾವಾಗ ಬೇಕಾದರೂ ಒಡೆದು ಹೋಗಬಹುದು ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.

ಲೋಕಸಭೆ ಚುನಾವಣೆ ಹಾಗೂ ಸುರಪುರ ಕ್ಷೇತ್ರದ ವಿಧಾನಸಭಾ ಉಪಚುನಾವಣೆ ನಿಮಿತ್ತ ಶನಿವಾರ ಸಂಜೆ ಪಟ್ಟಣದ ಸುಬ್ಬಮ್ಮ ಗೌಡತಿ ಕಲ್ಯಾಣ ಮಂಟಪದಲ್ಲಿ ನಡೆದ ದಲಿತ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್ ಗ್ಯಾರಂಟಿಯಿಂದ ಜನರು ಉದ್ದಾರ ಆಗಲು ಸಾಧ್ಯವಿಲ್ಲ. 2 ಸಾವಿರ ರು.ಗಳು ಹಾಕಿ ಜನರಿಂದ ಬೆಲೆ ಏರಿಕೆ ಮೂಲಕ ಮೂರು ಪಟ್ಟು ದುಡ್ಡು ವಸೂಲಿ ಮಾಡಲಾಗುತ್ತಿದೆ ಎಂದು ರಾಜ್ಯ ಸರಕಾರದ ವಿರುದ್ಧ ಆಕ್ರೋಶ್ಯ ವ್ಯಕ್ತಪಡಿಸಿದರು.

ಕೊರೋನಾ ಬಂದಾಗ ದೇಶದಲ್ಲಿ ಜೀವಕಳೆದುಕೊಳ್ಳಬೇಕಿದ್ದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಗಳಿಂದ ಲಸಿಕೆ ತರಿಸಿಕೊಂಡು ಜನರ ಜೀವ ಉಳಿಸಿದ್ದಾರೆ. ಹೀಗಾಗಿ ಜನರ ಜೀವ ಉಳಿಸಿದ ಬಿಜೆಪಿಗೆ ಮತ ನೀಡಿ ಋಣ ತೀರಿಸಬೇಕಾಗಿ ಬಂದಿದೆ. ಕೊರೋನಾ ಬಂದಾಗ ಕಾಂಗ್ರೆಸ್‌ನವರು ಎಲ್ಲಿ ಹೋಗಿದ್ದರು? ಕೋವಿಡ್ ಲಸಿಕೆ ಬಗ್ಗೆ ಅಪಪ್ರಚಾರ ಮಾಡಿ ಜನರ ಜೀವನದ ಮೇಲೆ ಚೆಲ್ಲಾಟವಾಡಿದ ಕಾಂಗ್ರೆಸ್‌ಗೆ ಈ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು ಎಂದು ತಿಳಿಸಿದರು.

ಅಭಿವೃದ್ಧಿಗಾಗಿ ಒಬ್ಬ ಮಂತ್ರಿ ಕೂಡ ತರದೇ ಇರುವಷ್ಟು ಅನುದಾನವನ್ನು ಸುರಪುರ ಕ್ಷೇತ್ರಕ್ಕೆ 3500 ಕೋಟಿ ರು.ಗಳ ಅನುದಾನವನ್ನು ಮಾಜಿ ಸಚಿವ ರಾಜೂಗೌಡ ತಂದಿದ್ದಾರೆ. ಇದು ಅಲ್ಲದೆ ಈ ಭಾಗದ ಸುಮಾರು 1 ಲಕ್ಷಕ್ಕೂ ಹೆಚ್ಚು ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಿದ ರಾಜೂಗೌಡ ಅವರಿಗೆ ಮತ ನೀಡಿ ಗೆಲ್ಲಿಸಬೇಕೆಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಬಿಜೆಪಿಯ ಅಧಿಕಾರಾವಧಿಯಲ್ಲಿ ನೀರಾವರಿ ಸಚಿವನಿದ್ದಾಗ ರೈತರ ಎರಡು ಬೆಳೆಗಳಿಗೆ ನೀರು ತರಿಸಿದ ರೈತನಾಯಕ ರಾಜೂಗೌಡ ಮತ್ತು ರಾಜಾ ಅಮರೇಶ್ವರ ನಾಯಕ ಅವರಿಗೆ ನಿಮ್ಮ ಮತವನ್ನು ನೀಡಿ ಬಹುಮತದೊಂದಿಗೆ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಅಭ್ಯರ್ಥಿ ನರಸಿಂಹನಾಯಕ (ರಾಜೂಗೌಡ) ಮಾತನಾಡಿ, ಬಿಜೆಪಿ ಪಕ್ಷದಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ. ರೈತಾಪಿ ಜನರ ಏಳಿಗೆಗಾಗಿ ಬಿಜೆಪಿ ಪಕ್ಷಕ್ಕೆ ಕಾಳಜಿ ವಹಿಸುತ್ತದೆ. ಬಿಜೆಪಿ ಅಧಿಕಾರವಿದ್ದಾಗ ನೀರಾವರಿ ಸಚಿವ ಗೋವಿಂದ ಕಾರಜೋಳ ಅವರನ್ನು ಭೇಟಿಯಾಗಿ ಈ ಭಾಗದ ರೈತರ ಎರಡು ಬೆಳೆಗಳಿಗೆ ನೀರು ಕೊಡಿಸುವ ಕೆಲಸ ಮಾಡಿದ್ದೇನೆ. ನಮ್ಮ ಬಿಜೆಪಿ ಸರಕಾರ ರೈತರಿಗೆ ಯಾವತ್ತು ಕಣ್ಣೀರು ತರಿಸಿಲ್ಲ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಒಂದೇ ಬೆಳೆಗೆ ನೀರು ಬಿಡಲು ಹೆಣಗಾಡಿತು ಎಂದ ಅವರು, ನನಗೆ ಬೆಂಬಲಿಸಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಮುಖಂಡರಾದ ನಂದಕುಮಾರ ಬಾಂಬೆಕರ್ ಮತ್ತು ಮಾನು ಗುರಿಕಾರ ಮಾತನಾಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ಸಂಗಣ್ಣ ಸಾಹುಕಾರ ವೈಲಿ, ಬಸವರಾಜ ಸ್ವಾಮಿಸ್ಥಾವರಮಠ, ದೇವಿಂದ್ರನಾಥ ನಾದ, ದೀಪಾ ಶ್ರೀನಿವಾಸ, ಕಿರಣ ಸೂರ್ಯ, ಹಣಮಂತ ಇಟಗಿ, ಧರ್ಮಣ್ಣ ಮದಲಿಂಗನಾಳ, ಬಸವರಾಜ ವೈಲಿ, ಮಲ್ಲು ಹೆಬ್ಬಾಳ, ಭೀಮಶಂಕರ ಬಿಲ್ಲವ್, ಅಂಬ್ಲಪ್ಪ ಹಳ್ಳಿ, ಶಿವಪ್ಪ ಸದಬ, ನಾಗರಾಜ ಕೊಡೇಕಲ್, ಬಸವರಾಜ ದೊಡ್ಡಮನಿ, ಬಸವರಾಜ ಹಗರಟಗಿ, ಸಿದ್ದು ಮೇಲಿನಮನಿ ಶರಣಪ್ಪ ಗುಳಬಾಳ, ಚನ್ನಪ್ಪ ತೀರ್ಥ, ನಂದಪ್ಪ ಪೀರಾಪುರ, ಆನಂದ ಬಾರಿಗಿಡದ, ಸೇರಿದಂತೆ ಇತರರಿದ್ದರು.