ಈ ಬಾರಿ ಬಿಜೆಪಿಗೆ ಒಂದಂಕಿ ಫಲಿತಾಂಶ: ಸಚಿವ ರಾಮಲಿಂಗಾರೆಡ್ಡಿ

| Published : May 06 2024, 12:33 AM IST / Updated: May 06 2024, 07:40 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಸಾಧನೆ ಶೂನ್ಯ. ರಾಜ್ಯದಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸುತ್ತದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

  ಬೀದರ್‌ :  ಬಿಜೆಪಿ ಸುಳ್ಳು ಹೇಳುತ್ತ ಅಧಿಕಾರ ಮಾಡುತ್ತದೆ, ಕಾಂಗ್ರೆಸ್‌ ಕೆಲಸ ಮಾಡಿ ಅಧಿಕಾರಕ್ಕೆ ಬರುತ್ತದೆ ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಕೇವಲ ಸಿಂಗಲ್ ಡಿಜಿಟ್‌ನಲ್ಲಿ ಮಾತ್ರ ಗೆಲುವು ಸಾಧಿಸುತ್ತದೆ. ಕಾಂಗ್ರೆಸ್‌ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 236 ತಾಲೂಕುಗಳಲ್ಲಿ 223 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದರೂ ಕೇಂದ್ರ ಸರ್ಕಾರ ಸಂಪೂರ್ಣ ಪರಿಹಾರ ಬಿಡುಗಡೆ ಮಾಡಲಿಲ್ಲ. ಇದು ಅಕ್ಷಮ್ಯ ಅಪರಾಧ. ಬಿಜೆಪಿ ಆಶ್ವಾಸನೆ ನೀಡಿದಂತೆ ಯಾವುದೇ ಭರವಸೆ ಈಡೇರಿಸಿಲ್ಲ. ಬದಲಾಗಿ ಸಾರ್ವಜನಿಕ ಉದ್ದಿಮೆಗಳಾದ ಏರ್ಪೋರ್ಟ್‌, ಬಂದರು, ಗಣಿ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಇತರೆ ಕ್ಷೇತ್ರಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದರು.

ದೇಶಕ್ಕೆ ಸಾಲ ಮಾಡುವುದು ಬಿಟ್ಟರೆ ಮೋದಿ ಸಾಧನೆ ಶೂನ್ಯ. ‌ಮೋದಿಯವರದ್ದು ಹಿಟ್ಲರ್‌ ಆಡಳಿತ. ಹಿಟ್ಲರ್‌ನ ಮಂತ್ರಿ ಗ್ಲೋಬಲ್ಸ್‌ ಎಂಬುವವ ಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಮಾಡುತಿದ್ದ. ಆ ರೀತಿ ಎನ್‌ಡಿಎ ಸರ್ಕಾರ ಮಾಡುತ್ತಿದೆ. ದಿನ ಬೆಳಗೆದ್ದು ಸುಳ್ಳು ಹೇಳದಿದ್ದರೆ ಬಿಜೆಪಿಗರಿಗೆ ತಿಂದ ಅನ್ನ ಜೀರ್ಣ ಆಗುವುದಿಲ್ಲ ಎಂದು ವ್ಯಂಗ್ಯವಾಡಿದರು.

ಚುನಾವಣೆ ಬಂದಾಗ ಮಾತ್ರ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ರಾಜ್ಯಕ್ಕೆ ಬರುತ್ತಾರೆ. ಇವರಿಗೆ ರೈತರ ಹಿತ ಮುಖ್ಯವಲ್ಲ ಎಂದರಲ್ಲದೆ, ಇಂಡಿಯಾ ಒಕ್ಕೂಟದ ಗೆಲುವಿನ ನಂತರ ಪ್ರಧಾನಮಂತ್ರಿ ಆಯ್ಕೆ ಮಾಡಲಾಗುವುದು. ರಾಜ್ಯದಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಎಂ.ಎಲ್.ಸಿ. ಅರವಿಂದಕುಮಾರ ಅರಳಿ, ಡಾ. ಗುರಮ್ಮಾ ಸಿದ್ದಾರೆಡ್ಡಿ, ಮನ್ನಾನ್ ಸೇಠ್, ಮುರಳಿಧರ ಎಕಲಾರಕರ್, ಗುಂಡುರೆಡ್ಡಿ, ಜಾರ್ಜ್ ಫರ್ನಾಂಡೀಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.