ಕಾಂಗ್ರೆಸ್ಸಿಗರಿಂದ ಆಕಾಶಕ್ಕೆ ಉಗುಳುವ ಪ್ರಯತ್ನ: ಕೇಂದ್ರ ಸಚಿವ ಜೋಶಿ

| Published : May 06 2024, 12:35 AM IST

ಸಾರಾಂಶ

ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ದೇಶದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. 2014ರಲ್ಲಿ 44 ಕ್ಷೇತ್ರ ಹಾಗೂ 2019ರಲ್ಲಿ 52 ಸೀಟುಗಳನ್ನಷ್ಟೇ ಗೆದ್ದುಕೊಂಡ ರಾಹುಲ್ ಗಾಂಧಿ ಅವರಿಗೆ ಅಧಿಕೃತ ವಿರೋಧ ಪಕ್ಷವಾಗಲೂ ಶಕ್ತವಾಗಲಿಲ್ಲ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಪ್ರಧಾನಿ ನರೇಂದ್ರ ಮೋದಿ ಆಕಾಶ ಇದ್ದ ಹಾಗೆ. ಕಾಂಗ್ರೆಸಿಗರು ಆಕಾಶಕ್ಕೆ ಉಗುಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹರಿಹಾಯ್ದರು.

ಕಲಘಟಗಿಯಲ್ಲಿ ಭಾನುವಾರ ಬೃಹತ್ ರೋಡ್ ಶೋ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ಅಬ್ಬರಿಸಿದ ಜೋಶಿ, ಆಕಾಶಕ್ಕೆ ಮುಖ ಮಾಡಿ ಉಗುಳಿದರೆ ಅದು ತಮ್ಮ ಮುಖಕ್ಕೆ ಸಿಡಿಯುತ್ತದೆ ಎಂಬುದನ್ನು ಅರಿತುಕೊಳ್ಳಲಿ. ಸಚಿವ ಸಂತೋಷ ಲಾಡ್ ಮೋದಿ ಅವರಿಗೆ ಬೈದರೆ ತಾವು ದೊಡ್ಡ ವ್ಯಕ್ತಿ ಆಗಬಹುದು ಎಂದುಕೊಂಡಿದ್ದಾರೆ. ಹಾಗಾಗಿ, ಲಾಡ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಮೋದಿ ವಿರುದ್ಧ ಗುಡುಗುತ್ತಿದ್ದಾರೆ ಎಂದು ಟೀಕಿಸಿದರು.

ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ದೇಶದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. 2014ರಲ್ಲಿ 44 ಕ್ಷೇತ್ರ ಹಾಗೂ 2019ರಲ್ಲಿ 52 ಸೀಟುಗಳನ್ನಷ್ಟೇ ಗೆದ್ದುಕೊಂಡ ರಾಹುಲ್ ಗಾಂಧಿ ಅವರಿಗೆ ಅಧಿಕೃತ ವಿರೋಧ ಪಕ್ಷವಾಗಲೂ ಶಕ್ತವಾಗಲಿಲ್ಲ ಎಂದರು.

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಆಸ್ತಿ ಸರ್ವೇ ಪ್ರಕಟಿಸಿದೆ. ಅರ್ಧದಷ್ಟು ಆಸ್ತಿಯನ್ನು ವಶಕ್ಕೆ ಪಡೆದು ಹೆಚ್ಚು ಮಕ್ಕಳಿರುವ ಮುಸ್ಲಿಮರಿಗೆ ಹಂಚಲಿದೆ. ಈಗಲೇ ಎಚ್ಚರ ವಹಿಸಿ ಎಂದರು.

2014ರಿಂದ ಮೋದಿ ನೇತೃತ್ವದಲ್ಲಿ ಆದ ದೇಶದ ಅಭಿವೃದ್ಧಿಯನ್ನು ಜಗತ್ತೇ ಗಮನಿಸಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಾದ ಅಭಿವೃದ್ಧಿ ಏನೆಂಬುದೂ ಕ್ಷೇತ್ರದ ಜನತೆಗೆ ಮನದಟ್ಟಾಗಿದೆ ಎಂದರು.

ಈ ವೇಳೆ ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ, ಬಿಜೆಪಿ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಪ್ರಮುಖರಾದ ಶಶಿಧರ ನಿಂಬಣ್ಣವರ, ಐ.ಸಿ. ಗೋಕುಲ, ಸೀತಪ್ಪ ಪಾಟೀಲ, ವೀರಣ್ಣ ಜಡಿ, ಬಸವರಾಜ ಕರಡಿಕೊಪ್ಪ, ಪುಟ್ಟಪ್ಪ ಕಲ್ಲಪ್ಪ ಪುಟ್ಟಪ್ಪನವರ, ಮಾಂತೇಶ ತಹಸೀಲ್ದಾರ ಸೇರಿದಂತೆ ಹಲವರಿದ್ದರು.