ಬಸವಣ್ಣ ಕುರಿತು ಯೋಚಿಸುವಾಗ ಹೆಮ್ಮೆ ಪಡಬೇಕು: ಪ್ರೊ. ಮೊರಬದ ಮಲ್ಲಿಕಾರ್ಜುನ

| Published : May 06 2024, 12:35 AM IST

ಬಸವಣ್ಣ ಕುರಿತು ಯೋಚಿಸುವಾಗ ಹೆಮ್ಮೆ ಪಡಬೇಕು: ಪ್ರೊ. ಮೊರಬದ ಮಲ್ಲಿಕಾರ್ಜುನ
Share this Article
  • FB
  • TW
  • Linkdin
  • Email

ಸಾರಾಂಶ

ಶರಣರ ಆಲೋಚನೆ, ಚಿಂತನೆಗಳೇ ವಿಭಿನ್ನ. ಶರಣರು ಭೇದಗಳನ್ನು ಮೀರಿ ಒಂದು ಸಮಾಜವನ್ನು ಒಗ್ಗೂಡಿಸುವ ಕಾರ್ಯ ಮಾಡಿದ್ದಾರೆ, ಎಷ್ಟೇ ವೈಜ್ಞಾನಿಕವಾಗಿ, ವೈಚಾರಿಕವಾಗಿ ಯೋಚಿಸಿದರೂ ಅಂದಿನ ಶರಣರ ರೀತಿ ಬದುಕಲು ಸಾಧ್ಯವಿಲ್ಲ

ಕನ್ನಡಪ್ರಭ ವಾರ್ತೆ ಮೈಸೂರು

ಬಸವಣ್ಣ ಅವರು ಯಾವುದೇ ಅಸಮಾನತೆ ಇಲ್ಲದೇ ಇಡೀ ಜಗತ್ತಿಗೇ ಮಾನವೀಯತೆಯ ಬೆಳಕು ನೀಡಿದ ಚೈತನ್ಯ. ಅವರ ಕುರಿತು ಯೋಚಿಸುವಾಗ ಹೆಮ್ಮೆ ಪಡಬೇಕು ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ತಿಳಿಸಿದರು.

ನಗರದ ರಾಮಾನುಜ ರಸ್ತೆಯಲ್ಲಿರುವ ಮೈಸೂರು ಆರ್ಟ್ ಗ್ಯಾಲರಿ ಮತ್ತು ಕನ್ನಡ ಸಾಹಿತ್ಯ ಕಲಾಕೂಟ ಸಂಯುಕ್ತವಾಗಿ ಭಾನುವಾರ ಆಯೋಜಿಸಿದ್ದ ಇಷ್ಟಲಿಂಗ ಜನಕ ಬಸವಣ್ಣ ಕಲಾಕೃತಿ ಲೋಕಾರ್ಪಣೆ ಹಾಗೂ ಬಸವ ಜಯಂತಿಯಲ್ಲಿ ಅವರು ಮಾತನಾಡಿದರು.

ಶರಣರ ಆಲೋಚನೆ, ಚಿಂತನೆಗಳೇ ವಿಭಿನ್ನ. ಶರಣರು ಭೇದಗಳನ್ನು ಮೀರಿ ಒಂದು ಸಮಾಜವನ್ನು ಒಗ್ಗೂಡಿಸುವ ಕಾರ್ಯ ಮಾಡಿದ್ದಾರೆ, ಎಷ್ಟೇ ವೈಜ್ಞಾನಿಕವಾಗಿ, ವೈಚಾರಿಕವಾಗಿ ಯೋಚಿಸಿದರೂ ಅಂದಿನ ಶರಣರ ರೀತಿ ಬದುಕಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

12ನೇ ಶತಮಾನದ ವಚನ ಅನುಭವವನ್ನು, ವೈಚಾರಿಕತೆಯ ಮನೋಭಾವವನ್ನು, ತಾತ್ಪರ್ಯಗಳನ್ನು ಒಂದು ಮಿತಿಯಲ್ಲಾದರೂ ಪುನರ್ ಸೃಷ್ಟಿಸುವ ಕಾರ್ಯ ಇಂದು ಕೆಲವೆಡೆ ನಡೆಯುತ್ತಿದೆ. ಕಲಾಕಾರರು, ಬರಹಗಾರರಿಗೆ ಪ್ರೋತ್ಸಾಹಿಸಿ, ಅಪೂರ್ವ ಬದುಕನ್ನು ತರಲು ಪ್ರಯತ್ನಿಸಿ, ಮಾನವೀಯ ಧರ್ಮವನ್ನು ಸ್ಥಾಪಿಸಲು ಪ್ರಯತ್ನಿಸಿದ್ದು ಮೈಸೂರು ಆರ್ಟ್ ಗ್ಯಾಲರಿಯ ಸ್ಥಾಪಕ ಶಿವಲಿಂಗಪ್ಪ ಅವರು. ಇದು ಅವರ ಮಹತ್ಕಾರ್ಯಗಳಲ್ಲಿ ಒಂದು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪಂಚೇಂದ್ರಿಯಗಳಲ್ಲಿ ಅತ್ಯಂತ ಹೆಚ್ಚು ಗ್ರಹಿಕೆಯ ಶಕ್ತಿ ಇರುವುದು ಕಣ್ಣಿಗೆ. ನಾವು ನೋಡುವಂತಹ ಚಿತ್ರಗಳು ಮಾಹಿತಿಯ ಜೊತೆ ಅನುಭವವನ್ನು ಭದ್ರಗೊಳಿಸುತ್ತವೆ. ಚಿತ್ರವನ್ನು ನೋಡಿ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಈ ಸಮಾಜ ಇದೆಯೋ ಎಂಬುದು ದೊಡ್ಡ ಪ್ರಶ್ನೆಯಾಗಿದೆ ಎಂದರು.

ವರ್ತಮಾನದ ಕೆಲವು ಇಕ್ಕಟ್ಟುಗಳ ಕಾರಣಕ್ಕಾಗಿ ಹಿಂದೆ ಆಗಿ ಹೋದ ಘಟನೆಗಳ ಬಗ್ಗೆ ಮುಕ್ತವಾಗಿ ಆಲೋಚಿಸುವಲ್ಲಿ ಸಮಾಜ ಹಿಂದುಳಿದಿದೆ. ಮುಕ್ತವಾಗಿ ಈ ಸಮಾಜ ಬದುಕುತ್ತಿಲ್ಲ. ಇಂದಿನ ಜನರು ಮೆತ್ತಗಿನ ಮಾತಿಗೆ ಪ್ರತಿಕ್ರಿಯಿಸುವುದೇ ಇಲ್ಲ. ಜೋರಾಗಿ ಹೇಳಿದರೆ ಮಾತ್ರ ಎಚ್ಚೆತ್ತುಕೊಳ್ಳುವ ಮನಸ್ಥಿತಿ ಇಂದಿನವರದ್ದು ಎಂದು ಅವರು ವಿಷಾದಿಸಿದರು.

ಮಾನವೀಯ ಧರ್ಮಕ್ಕೆ ಅತ್ಯಂತ ಒತ್ತು ನೀಡಿದವರು ಶರಣರು. ಅವಿವೇಕಕ್ಕೆ ಅವಿವೇಕವೇ ಉತ್ತರ ಅಲ್ಲ. ಇನ್ನೊಬ್ಬರ ಅವಿವೇಕವನ್ನು ಎತ್ತಿ ಹಿಡಿದು, ಅವರ ಅವಿವೇಕದ ಬಗ್ಗೆ ಮಾತನಾಡಿ ನಮ್ಮ ವಿವೇಕವನ್ನು ಕಳೆದುಕೊಳ್ಳುವುದು ಸರಿಯಲ್ಲ ಎಂದರು.

ಬಸವಣ್ಣ ಕಲಾಕೃತಿಯನ್ನು ಕುಂದೂರು ಮಠದ ಶ್ರೀ ಡಾ. ಶರತ್ ಚಂದ್ರ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು. ಸಮಾಜ ಸೇವಕ ಕೆ. ರಘುರಾಂ, ಹಿರಿಯ ಕಲಾವಿದ ಎಲ್. ಶಿವಲಿಂಗಪ್ಪ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್, ಮಹಾದೇವಪ್ಪ, ಜಮುನರಾಣಿ ಮಿರ್ಲೆ, ದೇವರಾಜ ಪಿ. ಚಿಕ್ಕಳ್ಳಿ ಮೊದಲಾದವರು ಇದ್ದರು.