ಅನಿತಾ ನಾರಾಯಣಗೆ ಅಧಿಕಾರ ನೀಡಲು ಆಗ್ರಹ

| Published : May 06 2024, 12:34 AM IST

ಸಾರಾಂಶ

ತಾಲೂಕಿನ ಬೆಟ್ಟದಪುರ ಗ್ರಾಪಂ ವ್ಯಾಪ್ತಿಗೆ ಸೇರಿದ ವಾರ್ಡ್ ನಂ. 2ಕ್ಕೆ 2020 ಮೇ 20 ರಂದು ಪ.ಜಾತಿ ಮಹಿಳೆ ಮೀಸಲು ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯ ಅಭ್ಯರ್ಥಿಗಳಾಗಿ ಅನಿತಾ ನಾರಾಯಣ ಮತ್ತು ಆರ್. ರೇಖಾ ಚಂದ್ರಕಾಂತ್ ಸ್ಪರ್ಧೆ ಮಾಡಿದ್ದರು.

ಕನ್ನಡಪ್ರಭ ವಾರ್ತೆ ಬೆಟ್ಟದಪುರಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಪಂನ 2020ರ ಉಪ ಚುನಾವಣೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ರದ್ದುಪಡಿಸಿ, ಇದಕ್ಕೆ ಕಾರಣರಾದವರಿಗೆ ಕ್ರಿಮಿನಲ್ ಮುಖದ್ದಮೆ ದಾಖಲಾಗಿದ್ದರೂ, ಪ.ಜಾತಿ ಮೀಸಲು ಕ್ಷೇತ್ರ ಅಭ್ಯರ್ಥಿ ಅನಿತಾ ನಾರಾಯಣ ಅವರಿಗೆ ಕೂಡಲೇ ಅಧಿಕಾರ ದೊರೆಯಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.ತಾಲೂಕಿನ ಬೆಟ್ಟದಪುರ ಗ್ರಾಪಂ ವ್ಯಾಪ್ತಿಗೆ ಸೇರಿದ ವಾರ್ಡ್ ನಂ. 2ಕ್ಕೆ 2020 ಮೇ 20 ರಂದು ಪ.ಜಾತಿ ಮಹಿಳೆ ಮೀಸಲು ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯ ಅಭ್ಯರ್ಥಿಗಳಾಗಿ ಅನಿತಾ ನಾರಾಯಣ ಮತ್ತು ಆರ್. ರೇಖಾ ಚಂದ್ರಕಾಂತ್ ಸ್ಪರ್ಧೆ ಮಾಡಿದ್ದರು. ಈ ಚುನಾವಣೆಯಲ್ಲಿ ಆರ್. ರೇಖಾ ಆಯ್ಕೆಯಾದ ಮತ ಎಣಿಕೆ ದಿನವೇ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ವಜಾ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಅನಿತಾ ನಾರಾಯಣ ದೂರು ನೀಡಿದ್ದರು.ಅದರಂತೆ ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿಗಳು ದೂರನ್ನು ಹಿರಿಯ ಅಧಿಕಾರಿಗಳಾದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಪ.ಜಾ/ಪ. ವರ್ಗಗಳ. ಜಾತಿ ಪರಿಶೀಲನ ಸಮಿತಿ ಸದಸ್ಯ ಕಾರ್ಯದರ್ಶಿಯಾಗಿರುವುದರಿಂದ ರವಾನಿಸಿದಾಗ ಸಮಿತಿಯಲ್ಲಿ ನೋಂದಾಯಿಸಿಕೊಂಡು ಮೂರು ವರ್ಷಗಳ ಕಾಲ ಸುದೀರ್ಘವಾಗಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಹೆಚ್ಚುವರಿ ಪೊಲೀಸ್ ಪ್ರಧಾನ ನಿರ್ದೇಶಕರ ಮಾರ್ಗದರ್ಶನದಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕಿ ಡಾ.ಬಿ.ಟಿ. ಕವಿತಾ ಮತ್ತು ಪೊಲೀಸ್ ಉಪ ಆಧೀಕ್ಷಕ ಎಚ್.ಎಂ. ಶೈಲೆಂದ್ರ ಅವರ ತಂಡದ ತನಿಖೆಯಲ್ಲಿ ಗುಪ್ತ ಮಾಹಿತಿಗಳು ಹಾಗೂ ಜಾತಿ ಮಹಜರ್, ವಿಚಾರ ಇತರೆ ಸಾಕ್ಷಿದಾರರ ಹೇಳಿಕೆ, ಶಾಲಾ ದಾಖಲಾತಿ ಪ್ರಕಾರ ಚಂದ್ರಕಾಂತ್ ಅವರ ಪತ್ನಿ ಆರ್. ರೇಖಾ ಅವರ ಮೂಲ ಹೆಸರು ಆರ್. ರುಕ್ಸರ್, ತಂದೆ ಹೆಸರು ರಹಿಮಾನ್ ಮುಸ್ಲಿಂ ಜನಾಂಗದ ಮಹಿಳೆಯಾಗಿದ್ದು, ಪ.ಜಾತಿ ಬೋವಿ ಜನಾಂಗದ ಪ್ರಮಾಣ ಪತ್ರ ಪಡೆದಿರುವ ಬಗ್ಗೆ ಪತ್ತೆಯಾಗಿದ್ದು ಈ ಎಲ್ಲಾವನ್ನು ಸಾಕ್ಷಿಕರಿಸಿದ ನಂತರ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು 2023ರ ಆ. 4ರಂದು ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸಿ ಆರ್. ರುಕ್ಸಾರ್ ಹಾಗು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.ಈ ಆದೇಶದಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಐ ಆರ್. ಕಿರಣ್ ಅವರು, ಆರ್. ರುಕ್ಸರ್, ಸುಳ್ಳು ಜಾತಿ ದೃಢೀಕರಣ ಪತ್ರ ನೀಡಿದ ಅಂದಿನ ತಾಲೂಕು ತಹಸೀಲ್ದಾರ್ ಶ್ವೇತಾ ಎನ್. ರವೀಂದ್ರ, ಕಂದಾಯ ನಿರೀಕ್ಷಕ ಎಚ್.ಆರ್. ಗೌರೀಶ್ ಹಾಗೂ ಗ್ರಾಮ ಲೇಕಿಗ ಧನಂಜಯ ನಾಯಕ್ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡು ಪಿರಿಯಾಪಟ್ಟಣ ಪೊಲೀಸ್ ವೃತ ನಿರೀಕ್ಷಕ ರಾಘವೇಂದ್ರ ಮುಂದಿನ ತನಿಖೆ ಕೈಗೊಂಡಿದ್ದಾರೆ. ವಂಚನೆಯಾಗಿದೆ ಆರೋಪಕೆಲವು ಅಧಿಕಾರಿಗಳ ಜವಾಬ್ದಾರಿ ಮತ್ತು ಆರ್. ರುಕ್ಸರ್ ಸೃಷ್ಟಿಸಿದ ಸುಳ್ಳು ದಾಖಲಾತಿಗಳಿಂದ ಅನಿತಾ ನಾರಾಯಣಗೆ ಮೀಸಲಾತಿಯಲ್ಲಿ ವಂಚನೆಯಾಗಿದ್ದು, ಸಿಗಬೇಕಾದ ಅಧಿಕಾರವನ್ನು ಇಷ್ಟು ವರ್ಷಗಳ ಕಾಲ ಕಸಿದುಕೊಂಡಿದ್ದಾರೆ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮವಾಗಬೇಕು ಮತ್ತು ಬೆಟ್ಟದಪುರ ಗ್ರಾಪಂನಲ್ಲಿ ಕೂಡಲೇ ಅಧಿಕಾರ ದೊರಕಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು ಎಂದು ಕರ್ನಾಟಕ ದಲಿತ ಚಳವಳಿ ನವ ನಿರ್ಮಾಣ ವೇದಿಕೆ ಮುಖಂಡ ಟಿ. ಈರಯ್ಯ, ಸೀಗೂರು ವಿಜಯಕುಮಾರ್, ಎಚ್.ಡಿ. ರಮೇಶ್ ಮತ್ತು ಆದಿ ಜಾಂಬವ ಸಂಘದ ತಾಲೂಕು ಗೌರವ ಅಧ್ಯಕ್ಷ ಬೂತನಹಳ್ಳಿ ಶಿವಣ್ಣ, ಅಧ್ಯಕ್ಷ ಸಿ.ಜಿ. ರವಿ ಒತ್ತಾಯಿಸಿದ್ದಾರೆ.