ಮುಸ್ಲಿಂ ಮಹಿಳೆಯೊಂದಿಗೆ ಮಾತನಾಡಿದ್ದಕ್ಕೆ ದಾಳಿ: ನಾಲ್ವರಿಗೆ ಜಾಮೀನು

| Published : May 07 2024, 02:01 AM IST / Updated: May 07 2024, 11:38 AM IST

Karnataka highcourt
ಮುಸ್ಲಿಂ ಮಹಿಳೆಯೊಂದಿಗೆ ಮಾತನಾಡಿದ್ದಕ್ಕೆ ದಾಳಿ: ನಾಲ್ವರಿಗೆ ಜಾಮೀನು
Share this Article
  • FB
  • TW
  • Linkdin
  • Email

ಸಾರಾಂಶ

ಮುಸ್ಲಿಂ ಮಹಿಳೆಯೊಂದಿಗೆ ಮಾತನಾಡಿದ್ದನ್ನು ಆಕ್ಷೇಪಿಸಿ ಹಿಂದು ವ್ಯಕ್ತಿ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿದ ಮತ್ತು ಆತನಿಗೆ ಸೇರಿದ ಚಿನ್ನಾಭರಣಗಳನ್ನು ದೋಚಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ನಾಲ್ವರಿಗೆ ಹೈಕೋರ್ಟ್‌ ಜಾಮೀನು ನೀಡಿದೆ.

 ಬೆಂಗಳೂರು :   ಮುಸ್ಲಿಂ ಮಹಿಳೆಯೊಂದಿಗೆ ಮಾತನಾಡಿದ್ದನ್ನು ಆಕ್ಷೇಪಿಸಿ ಹಿಂದು ವ್ಯಕ್ತಿ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿದ ಮತ್ತು ಆತನಿಗೆ ಸೇರಿದ ಚಿನ್ನಾಭರಣಗಳನ್ನು ದೋಚಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ನಾಲ್ವರಿಗೆ ಹೈಕೋರ್ಟ್‌ ಜಾಮೀನು ನೀಡಿದೆ.

ಪ್ರಕರಣ ಸಂಬಂಧ ಜಾಮೀನು ಕೋರಿ ಚಿತ್ರದುರ್ಗದ ನಿವಾಸಿಗಳಾದ ಯೂನಸ್‌ ಅಹ್ಮದ್‌, ನವೀದ್‌, ಸಯ್ಯದ್‌ ಸಾದತ್‌ ಮತ್ತು ಜಾಫರ್‌ ಸಿದ್ದಕಿ ಸಲ್ಲಿಸಿದ್ದ ಜಾಮೀನು ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರ ಪೀಠ ಈ ಆದೇಶ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ಪರಿಶೀಲಿಸಿದರೆ, ಕ್ಷುಲ್ಲಕ ವಿಚಾರಕ್ಕೆ ಘಟನೆ ಸಂಭವಿಸಿದೆ ಎನ್ನುವುದು ತಿಳಿದು ಬರುತ್ತದೆ. ಅರ್ಜಿದಾರರು ಸೇರಿದಂತೆ ಗುಂಪೊಂದು ದೂರುದಾರ ಮೇಲೆ ಕೈ, ಕಾಲು ಮತ್ತು ಕಲ್ಲಿನಿಂದ ಹಲ್ಲೆ ನಡೆಸಿದೆ. ಅವರ ಕಾರು ಹಾನಿಗೊಳಿಸಿ, ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಿದೆ. ಅರ್ಜಿದಾರರು 2024ರ ಏ.4ರಿಂದ ಬಂಧನದಲ್ಲಿದ್ದು, ತನಿಖೆಯು ಗಣನೀಯ ಪ್ರಮಾಣದಲ್ಲಿ ಪ್ರಗತಿ ಹೊಂದಬಹುದಿತ್ತು. ಕಸ್ಟೋಡಿಯಲ್‌ ವಿಚಾರಣೆ ಸಹ ಪೂರ್ಣಗೊಳ್ಳುತ್ತಿತ್ತು. ಅರ್ಜಿದಾರರರು ಕ್ರಿಮಿನಲ್‌ ಹಿನ್ನೆಲೆ ಹೊಂದಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್‌ ಜಾಮೀನು ನೀಡಿದೆ.ಪ್ರಕರಣದ ವಿವರ:

ಬಿ.ಎಚ್‌. ಗೌಡ್ರು ಎಂಬುವರು ಚಿತ್ರದುರ್ಗ ಗ್ರಾಮೀಣ ಪೊಲೀಸ್‌ ಠಾಣೆಗೆ ದೂರು ನೀಡಿ, ‘ನಾನು 2024ರ ಏ.2ರಂದು ಮಧ್ಯಾಹ್ನ 2.30ರ ವೇಳೆ ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯ ಜೈ ಕನ್ನಡ ನಿವಾಸ ಸಂಸ್ಥೆಯ ಆವರಣದಲ್ಲಿ ಮುಸ್ಲಿಂ ಮಹಿಳೆ ಜೊತೆ ಮಾತನಾಡಿಕೊಂಡು ಕುಳಿತಿದ್ದೆ. ಅದನ್ನು ಆಕ್ಷೇಪಿಸಿ ಅರ್ಜಿದಾರರು ಸೇರಿದಂತೆ ಮುಸ್ಲಿಂ ಸಮುದಾಯಕ್ಕೆ ಸೇರಿದ 18ರಿಂದ 20 ವ್ಯಕ್ತಿಗಳು ಬಲವಂತವಾಗಿ ಸಂಸ್ಥೆಯ ಆವರಣಕ್ಕೆ ನುಗ್ಗಿದ್ದರು. ನನ್ನನ್ನು ಹಿಡಿದು ನೆಲಕ್ಕೆ ಬೀಳಿಸಿ, ಇಟ್ಟಿಗೆ, ಕಲ್ಲುಗಳಿಂದ ಮನಬಂದಂತೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದರು. ಎಳೆದುಕೊಂಡು ಹೋಗಿ ಕಲ್ಲನ್ನು ಎತ್ತಿಹಾಕಿ ಕೊಲೆ ಮಾಡಲು ಪ್ರಯತ್ನಿಸಿದ್ದರು. ಬಟ್ಟೆಗಳನ್ನು ಹರಿದು ಹಾಕಿ, ಕೊರಳಿನಲ್ಲಿದ್ದ 55 ಗ್ರಾಂ ಚಿನ್ನದ ಸರ, ಕೈಯಲ್ಲಿದ್ದ 30 ಗ್ರಾಂ ತೂಕದ ಚಿನ್ನದ ಬ್ರೇಸ್‌ಲೆಟ್‌ ಮತ್ತು 20 ಗ್ರಾಂ ತೂಕದ ಎರಡು ಉಂಗುರು, ಜೇಬಿನಲ್ಲಿದ್ದ 40 ಸಾವಿರ ನಗದು ದೋಚಿದರು ಎಂದು ಆರೋಪಿಸಿದ್ದರು.

ಚಿತ್ರದುರ್ಗ ಗ್ರಾಮೀಣ ಠಾಣೆ ಪೊಲೀಸರು, ಅರ್ಜಿದಾರರ ವಿರುದ್ಧ ಉದ್ದೇಶಪೂರ್ವಕವಾಗಿ ಅವಮಾನ ಮಾಡಿದ, ಅಕ್ರಮ ಕೂಟ ಸೇರಿದ, ಕಿಡಿಗೇಡಿತನ, ಗಲಭೆ, ದರೋಡೆ, ಅತಿಕ್ರಮ ಪ್ರವೇಶ, ಕೊಲೆಯತ್ನ ಅಪಾಯಕಾರಿ ವಸ್ತುಗಳಿಂದ ಹಲ್ಲೆ ನಡೆಸಿದ ಆರೋಪ ಸಂಬಂಧ ಎಫ್‌ಐಆರ್ ದಾಖಲಿಸಿದ್ದರು.

ಬಿ.ಎಚ್‌. ಗೌಡ್ರು ಅವರ ದೂರು ಸಂಬಂಧ ಚಿತ್ರದುರ್ಗ ಗ್ರಾಮೀಣ ಠಾಣಾ ಪೊಲೀಸರು ಅರ್ಜಿದಾರರನ್ನು ಬಂಧಿಸಿದ್ದರು. ಜಾಮೀನು ಕೋರಿ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ಚಿತ್ರದುರ್ಗ ಜಿಲ್ಲೆಯ 1ನೇ ಹೆಚ್ಚುವರಿ ಸಿವಿಲ್‌ (ಕಿರಿಯ ಶ್ರೇಣಿಯ) ಮತ್ತು ಜೆಂಎಫ್‌ಸಿ ನ್ಯಾಯಾಲಯ ವಜಾಗೊಳಿಸಿ, ಜಾಮೀನು ನಿರಾಕರಿಸಿತ್ತು. ಇದರಿಂದ ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು.