ಮತದಾನಕ್ಕೆ ವಿಶೇಷ ಮತಗಟ್ಟೆಗಳ ಆಕರ್ಷಣೆ

| Published : May 07 2024, 01:05 AM IST

ಸಾರಾಂಶ

ಈ ಬಾರಿ ಈ ಲೋಕಸಭಾ ಸಾರ್ವತ್ರಿಕ ಚುನಾವಣೆ ಮತದಾನದ ಪ್ರತಿಶತವನ್ನು ಹೆಚ್ಚಿಸಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ಮಾಹಿತಿ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಹಾವೇರಿ

ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಮೇ ೭ರಂದು ನಡೆಯಲಿರುವ ಮತದಾನಕ್ಕೆ ಕ್ಷೇತ್ರ ವ್ಯಾಪ್ತಿಯ ೧೯೮೨ ಮತಗಟ್ಟೆಗಳು ಸಿದ್ಧಗೊಂಡಿದೆ. ಬಿಸಿಲಿನ ತಾಪಮಾನ ಹೆಚ್ಚಿರುವ ಹಿನ್ನೆಲೆಯಲ್ಲಿ ಮತಗಟ್ಟೆಗೆ ಬರುವ ಮತದಾರರಿಗೆ ಪ್ರತಿ ಮತಗಟ್ಟೆಯಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಸಹ ಕಲ್ಪಿಸಲಾಗಿದೆ. ಶುದ್ಧ ಕುಡಿಯುವ ನೀರು, ನೆರಳು, ರ‍್ಯಾಂಪ್, ಶೌಚಾಲಯ, ಬೂತ್ ಕನ್ನಡಿ, ಸೆಲ್ಫಿ ಸ್ಟ್ಯಾಂಡ್ ಮತ್ತು ಅಗತ್ಯ ಸೇವೆಗಳನ್ನು ಸಹ ಒದಗಿಸಲು ಕ್ರಮ ವಹಿಸಲಾಗಿದೆ. ಆ ಮೂಲಕ ಈ ಬಾರಿ ಈ ಲೋಕಸಭಾ ಸಾರ್ವತ್ರಿಕ ಚುನಾವಣೆ ಮತದಾನದ ಪ್ರತಿಶತವನ್ನು ಹೆಚ್ಚಿಸಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ಮಾಹಿತಿ ನೀಡಿದ್ದಾರೆ.

ಥೀಮ್ ಮತಗಟ್ಟೆಗಳು

ಹಾನಗಲ್ ಕ್ಷೇತ್ರದ ಹೆರೂರು ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ ೧೮೦, ಹಾವೇರಿ ನಗರದ ಹಳೆ ಜಿಪಂ ಕಟ್ಟಡ ಮತಗಟ್ಟೆ ಸಂಖ್ಯೆ ೨೧೪, ಬ್ಯಾಡಗಿ ಕ್ಷೇತ್ರದ ಮೊಟೇಬೆನ್ನೂರಿನ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ ಮತಗಟ್ಟೆ ಸಂಖ್ಯೆ ೮೦, ಹಿರೇಕೆರೂರು ಕ್ಷೇತ್ರದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ಮತಗಟ್ಟೆ ಸಂಖ್ಯೆ ೧೯೩ ಹಾಗೂ ರಾಣಿಬೆನ್ನೂರು ಕ್ಷೇತ್ರದ ಗೋವಿಂದ ಬಡಾವಣೆ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ ೬೨ರಲ್ಲಿ ಥೀಮ್ ಬೇಸ್ಡ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಯುವ ಮತದಾರರ ಮತಗಟ್ಟೆಗಳು

ಹಾನಗಲ್ ಕ್ಷೇತ್ರದ ಅಕ್ಕಿಆಲೂರ ಗ್ರಾಮ ಪಂಚಾಯಿತಿ ಮತಗಟ್ಟೆ ಸಂಖ್ಯೆ ೧೨೬, ಹಾವೇರಿ ಕ್ಷೇತ್ರದ ಹಾವೇರಿ ನಗರದ ಚನ್ನಬಸಪ್ಪ ಮಾಗಾವಿ ಹೈಸ್ಕೂಲ್ ಮತಗಟ್ಟೆ ಸಂಖ್ಯೆ ೨೩೦, ಬ್ಯಾಡಗಿ ಕ್ಷೇತ್ರದ ಬ್ಯಾಡಗಿ ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ ೧೩೦, ಹಿರೇಕೆರೂರು ಕ್ಷೇತ್ರದ ವರಹ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮತಗಟ್ಟೆ ಸಂಖ್ಯೆ ೨೦೨ ಹಾಗೂ ರಾಣಿಬೆನ್ನೂರು ಕ್ಷೇತ್ರದ ರಾಣಿಬೆನ್ನೂರ ನಗರದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ ೧೩೬ರಲ್ಲಿ ಥೀಮ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.