ಆಕರ್ಷಣೀಯ ಸಖಿ, ವಿಕಲಚೇತನ ಮತಗಟ್ಟೆಗಳು

| Published : May 07 2024, 01:07 AM IST / Updated: May 07 2024, 01:08 AM IST

ಆಕರ್ಷಣೀಯ ಸಖಿ, ವಿಕಲಚೇತನ ಮತಗಟ್ಟೆಗಳು
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಒಟ್ಟು 35 ಸಖಿ ಮತಗಟ್ಟೆಗಳಿವೆ. ಏಳು ವಿಕಲಚೇತನ ಮತಗಟ್ಟೆಗಳಿವೆ. ಮಹಿಳೆಯರು ಮತ್ತು ವಿಕಲಚೇತನರು ಎಲ್ಲರ ಮುಂದೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಅವಕಾಶವಾಗಿದೆ.

ಧಾರವಾಡ:

ಮಹಿಳೆಯರು ಮತ್ತು ವಿಕಲಚೇತನರು ದುರ್ಬಲರಲ್ಲ, ಅವರು ಉಳಿದವರಷ್ಟೇ ಸಮರ್ಥರು. ಯಾವ ಕೆಲಸವನ್ನಾದರೂ ಸಂಪೂರ್ಣವಾಗಿ ಮಾಡಬಲ್ಲರು ಎಂಬುದನ್ನು ಸಾರಲು ಈ ಬಾರಿ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದಲೇ ನಡೆಸಲ್ಪಡುವ 35 ಸಖಿ ಮತಗಟ್ಟೆಗಳು, ವಿಕಲಚೇತನ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದಲೇ ನಿಭಾಯಿಸಲ್ಪಡುವ ಏಳು ವಿಕಲಚೇತನರ ಮತಗಟ್ಟೆ ಸ್ಥಾಪಿಸಲಾಗಿದೆ. ವಿಶೇಷವಾಗಿ ಅಲಂಕರಿಸಲ್ಪಟಿರುವ ಈ ಮತಗಟ್ಟೆಗಳು ಜನರನ್ನು ಮತದಾನಕ್ಕೆ ಆಕರ್ಷಿಸುತ್ತಿವೆ.

ಆಕರ್ಷಕ ಸ್ವಾಗತ ಕಮಾನು, ರಂಗೋಲಿ, ವರ್ಣಮಯ ಕಾಗದ, ಬಲೂನುಗಳಿಂದ ಸಿಂಗರಿಸಿದ್ದಾರೆ. ಬಣ್ಣ ಬಣ್ಣದ ಪರದೆಗಳು ಮತಗಟ್ಟೆಯ ಅಂದ ಹೆಚ್ಚಿಸಿವೆ. ಪಾಲಕರೊಂದಿಗೆ ಬರುವ ಮಕ್ಕಳಿಗೆ ಆಟವಾಡಲು ಕಿಡ್ಸ್ ಕಾರ್ನರ್ ಸ್ಥಾಪಿಸಲಾಗಿದೆ. ಮಕ್ಕಳಿಗೆ ಚಾಕಲೇಟ್ ವಿತರಣೆಗೆ ತಯಾರಿ ಮಾಡಿಕೊಂಡಿದ್ದಾರೆ. ಮತಗಟ್ಟೆಯಲ್ಲಿ ಮಹಿಳಾ ಅಧಿಕಾರಿ, ಸಿಬ್ಬಂದಿ ಹಾಗೂ ಮಹಿಳಾ ಪೊಲೀಸ್ ಪೇದೆ ಕರ್ತವ್ಯ ನಿರ್ವಹಿಸಲಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 35 ಸಖಿ ಮತಗಟ್ಟೆಗಳಿವೆ. ಏಳು ವಿಕಲಚೇತನ ಮತಗಟ್ಟೆಗಳಿವೆ. ಮಹಿಳೆಯರು ಮತ್ತು ವಿಕಲಚೇತನರು ಎಲ್ಲರ ಮುಂದೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಅವಕಾಶವಾಗಿದೆ. ವಿಕಲಚೇತನರನ್ನು ಮನೆಯಿಂದ ಮತಗಟ್ಟೆಗೆ ಕರೆತರಲು ವಾಹನ, ಗಾಲಿಖುರ್ಚಿ, ರ‍್ಯಾಂಪ್, ಭೂತ ಕನ್ನಡಿ ಮೊದಲಾದ ಸೌಕರ್ಯ ಒದಗಿಸಲಾತ್ತಿದೆ. ಅಮರಗೋಳದಲ್ಲಿ ಮಾವಿನ ತಳಿರು, ತೋರಣ, ರಂಗವಲ್ಲಿ, ಬಲೂನು ಸೇರಿ ಬಗೆ ಬಗೆಯ ವಸ್ತುಗಳಿಂದ ವಿಕಲಚೇತನರ ಮತಗಟ್ಟೆಯನ್ನು ಅಲಂಕರಿಸಲಾಗಿದೆ. ಹೆಬ್ಬಳ್ಳಿ ಜನತಾ ಪ್ಲಾಟನಲ್ಲಿ ಹಾಗೂ ಧಾರವಾಡ ಮರಾಠಾ ಕಾಲೋನಿಯ ಮಲ್ಲಸಜ್ಜನ ವ್ಯಾಯಾಮ ಶಾಲೆ ಮತ್ತು ಹುಬ್ಬಳ್ಳಿಯ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಚೇರಿಯ ಮತಗಟ್ಟೆಗಳು ಆಕರ್ಷಣಿಯವಾಗಿವೆ.

ಕಲಘಟಗಿ ಪಟ್ಟಣ ಪಂಚಾಯಿತಿ ಮತಗಟ್ಟೆಯಲ್ಲಿ ಪ್ರಸಿದ್ಧ ತೊಟ್ಟಿಲು ಮಾದರಿಗಳು ಗಮನ ಸೆಳೆಯುತಿವೆ. ನೆಲ್ಲಿಹರವಿಯ ಸರ್ಕಾರಿ ಲೋವರ್ ಪ್ರೈಮರಿ ಶಾಲೆಯ ಮತಗಟ್ಟೆ ಕೇಂದ್ರ 224ರಲ್ಲಿ ಸಿಬ್ಬಂದಿಗಳು ಲಂಬಾಣಿ ಸಂಪ್ರದಾಯಕ ಉಡುಪು ಧರಿಸಿರುವುದು ಸಹ ಆಕರ್ಷಣೀಯ ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾಗಿರುವ ಸ್ವರೂಪ ಟಿ.ಕೆ. ಮಾಹಿತಿ ನೀಡಿದರು.