ನರಸಿಂಹರಾಜಪುರಕ್ಕೆ ವರವಾಗಿದೆ ಭದ್ರಾ ಹಿನ್ನೀರು

| Published : May 07 2024, 01:01 AM IST

ನರಸಿಂಹರಾಜಪುರಕ್ಕೆ ವರವಾಗಿದೆ ಭದ್ರಾ ಹಿನ್ನೀರು
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಪಟ್ಟಣದ ಜನತೆಗೆ 38 ಕೊಳವೆ ಬಾವಿಗಳಿಂದ ಶುದ್ಧವಾದ ಕುಡಿವ ನೀರನ್ನು ಪಟ್ಟಣ ಪಂಚಾಯಿತಿ ಒದಗಿಸುತ್ತಿದ್ದು, ಇದರಲ್ಲಿ ರಾಜೀವ್ ನಗರದ ಒಂದು ಕೊಳವೆ ಬಾವಿ ಬತ್ತಿ ಹೋಗಿದ್ದು ಅಲ್ಲಿನ 37 ಮನೆಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ.

ಏಪ್ರಿಲ್‌ ತಿಂಗಳಲ್ಲಿ ಬತ್ತಿದ ಬೋರ್‌ವೆಲ್ । ರಾಜೀವ್‌ ನಗರದ 38 ಮನೆಗಳಿಗೆ ಟ್ಯಾಂಕರ್‌ ನೀರು । ಭದ್ರಾ ಹಿನ್ನೀರಿನಿಂದ ಬೋರ್‌ವೆಲ್ ಅಂತರ್ಜಲ ಹೆಚ್ಚಳ

ಯಡಗೆರೆ ಮಂಜುನಾಥ್

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಪಟ್ಟಣದ ಜನತೆಗೆ 38 ಕೊಳವೆ ಬಾವಿಗಳಿಂದ ಶುದ್ಧವಾದ ಕುಡಿವ ನೀರನ್ನು ಪಟ್ಟಣ ಪಂಚಾಯಿತಿ ಒದಗಿಸುತ್ತಿದ್ದು, ಇದರಲ್ಲಿ ರಾಜೀವ್ ನಗರದ ಒಂದು ಕೊಳವೆ ಬಾವಿ ಬತ್ತಿ ಹೋಗಿದ್ದು ಅಲ್ಲಿನ 37 ಮನೆಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ.

ಜಿಲ್ಲೆಯ ಉಳಿದ ಪಟ್ಟಣಕ್ಕೆ ಹೋಲಿಕೆ ಮಾಡಿದರೆ ನರಸಿಂಹರಾಜಪುರ ಪಟ್ಟಣದಲ್ಲಿ ಸದ್ಯಕ್ಕೆ ಅಂತಹ ಕುಡಿಯುವ ನೀರಿನ ಕೊರತೆ ಎದುರಾಗಿಲ್ಲ. ಪಟ್ಟಣದ 11 ವಾರ್ಡ್‌ಗಳಲ್ಲಿ 1402 ನಲ್ಲಿ ಸಂಪರ್ಕ ಇದೆ. 38 ಕೊಳವೆ ಬಾವಿಗಳಿದ್ದು ಇದರ ಮೂಲಕ 4 ಓವರ್‌ ಹೆಡ್‌ ಟ್ಯಾಂಕಿಗೆ ನೀರು ಸರಬರಾಜು ಮಾಡಿ ಆ ಟ್ಯಾಂಕಿನಿಂದ ಜನರಿಗೆ ನೀರು ನೀಡಲಾಗುತ್ತದೆ. ಪಟ್ಟಣದ ಅತಿ ದೊಡ್ಡ ಓವರ್‌ ಹೆಡ್‌ ಟ್ಯಾಂಕ್‌ ಬಸ್‌ ನಿಲ್ದಾಣ ಸಮೀಪವಿದೆ. ಆ ಟ್ಯಾಂಕಿನಲ್ಲಿ 2 .50 ಲಕ್ಷ ಲೀಟರ್ ನೀರು ಸಂಗ್ರಹವಾದರೆ, ಪ್ರವಾಸಿ ಮಂದಿರ ಸಮೀಪದ ಇನ್ನೊಂದು ಟ್ಯಾಂಕಿಗೆ 1.50 ಲಕ್ಷ ಲೀಟರ್‌ ನೀರು ಸಂಗ್ರಹವಾಗಲಿದೆ. ಹಾಗೆಯೇ ಬಸ್ತಿಮಠ ಸಮೀಪ ಟ್ಯಾಂಕಿಗೆ 75 ಸಾವಿರ ಲೀಟರ್‌, ಬೆಟಗೇರಿ ಟ್ಯಾಂಕಿನಲ್ಲಿ 2 ಲಕ್ಷ ಲೀಟರ್‌ ನೀರು ಸಂಗ್ರಹ ವಾಗಲಿದೆ. 13 ನೀರು ಗಂಟಿಗಳು ಪ್ರತಿನಿತ್ಯ ಪಟ್ಟಣದ ಜನತೆಗೆ ನೀರು ಒದಗಿಸುವ ಕೆಲಸ ಮಾಡುತ್ತಾರೆ. ಪ್ರತಿ ನಿತ್ಯ ಬೆಳಗ್ಗೆ 6 ರಿಂದ 7 ಗಂಟೆಯವರೆಗೆ ನೀರು ಬಿಡುತ್ತಾರೆ.

ವರವಾಗಿದೆ ಭದ್ರಾ ಹಿನ್ನೀರು:

ನರಸಿಂಹರಾಜಪುರ ಪಟ್ಟಣದ ವಿಶೇಷ ಎಂದರೆ ಇಲ್ಲಿ 200 ರಿಂದ 300 ಅಡಿಗೆ ಬೋರ್ ವೆಲ್‌ ಕೊರೆದರೆ ನೀರು ಸಿಗುತ್ತದೆ. ಇದಕ್ಕೆ ಮುಖ್ಯಕಾರಣ ಪಟ್ಟಣದ ಸುತ್ತ ಆವರಿಸಿಕೊಂಡಿರುವ ಭದ್ರಾ ಹಿನ್ನೀರು. 1965ರ ಸುಮಾರಿಗೆ ಲಕ್ಕವಳ್ಳಿಯಲ್ಲಿ ಭದ್ರಾ ನದಿಗೆ ಅಡ್ಡವಾಗಿ ಭದ್ರಾ ಡ್ಯಾಂ ಕಟ್ಟಿದ್ದರಿಂದ ನರಸಿಂಹರಾಜಪುರ ಪಟ್ಟಣ ಅರ್ಧ ಮುಳುಗಡೆಯಾಗಿದೆ. ಪಟ್ಟಣದ ಹತ್ತಿರ ದಲ್ಲೇ ಭದ್ರಾ ಹಿನ್ನೀರು ಇರುವುದರಿಂದ ಸಹಜವಾಗೇ ಬೋರ್‌ವೆಲ್‌ಗಳಲ್ಲಿ ನೀರು ಬರುತ್ತಿದೆ. ಭದ್ರಾ ಹಿನ್ನೀರು ಬೋರ್‌ ವೆಲ್‌ಗಳಿಗೆ ವರವಾಗಿದ್ದು ಅಂತರ್ಜಲ ಹೆಚ್ಚಿದೆ. ಇತಿಹಾಸ ಗಮನಿಸಿದರೆ ಕಳೆದ 30- 40 ವರ್ಷಗಳಿಂದಲೂ ಪಟ್ಟಣಕ್ಕೆ ಬೋರ್ ವೆಲ್‌ಗಳೇ ಕುಡಿವ ನೀರಿಗೆ ಆಧಾರವಾಗಿದೆ. ಆದರೆ, ಈ ವರ್ಷ ಬರಗಾಲ ವಾದ್ದರಿಂದ ಸಹಜವಾಗೇ ಬೋರ್‌ ವೆಲ್ ನೀರು ಕಡಿಮೆಯಾಗಿದ್ದರೂ ಪೂರ್ಣ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ.

ಕೈಕೊಟ್ಟ ಬೋರ್‌ವೆಲ್:

ರಾಜೀವ್ ನಗರದ ಒಂದು ಬೋರ್‌ವೆಲ್‌ ಬಿಟ್ಟರೆ ಉಳಿದ 37 ಬೋರ್‌ವೆಲ್ ನಿಂದಲೇ ಪಟ್ಟಣದ ಜನರಿಗೆ ಕುಡಿವ ನೀರು ಸಿಗುತ್ತಿದೆ. ರಾಜೀವ್ ನಗರದ 37 ಮನೆಗಳಿಗೆ ಸುಂಕದ ಕಟ್ಟೆ ಬೋರ್‌ವೆಲ್‌ನಿಂದ ನೀರು ತಂದು ಅಲ್ಲಿನ ನಿವಾಸಿಗಳಿಗೆ ನೀಡಲಾಗುತ್ತಿದೆ ಎನ್ನುತ್ತಾರೆ ಆ ವಾರ್ಡಿನ ಸದಸ್ಯ ಸೋಜ.

ಶಾಶ್ವತ ಕುಡಿವ ನೀರಿನ ಚಿಂತನೆ:

ಹವಾಮಾನ ವೈಪರೀತ್ಯ, ಪದೇ, ಪದೇ ಬರಗಾಲ ಬರುತ್ತಿರುವುದರಿಂದ ಅಂತರ್ಜಲ ಕಡಿಮೆಯಾಗಿ ಬೋರ್‌ವೆಲ್ ಕೈ ಕೊಟ್ಟರೆ ಪರ್ಯಾಯವಾಗಿ ಶಾಶ್ವತ ಕುಡಿವ ನೀರಿನ ಯೋಜನೆ ರೂಪಿಸಬೇಕು ಎಂಬುದು ಸಹ ಪಟ್ಟಣ ಪಂಚಾಯಿತಿಗೆ ಚಿಂತನೆಯಾಗಿದೆ. ಹಲವಾರು ವರ್ಷಗಳ ಹಿಂದೆ ಹೊಸ ಸೇತುವೆ ಸಮೀಪದಲ್ಲಿ ಬ್ಯಾರೇಜ್‌ ಕಟ್ಟಿ ಶಾಶ್ವತ ಕುಡಿವ ನೀರಿನ ಯೋಜನೆ ಮಾಡಿದ್ದರೂ ಯಶಸ್ಸು ಕಾಣದೆ ಪಟ್ಟಣಕ್ಕೆ ನೀರು ಸಿಗಲಿಲ್ಲ. ಭದ್ರಾ ಹಿನ್ನೀರಿನಿಂದಲೂ ನೀರು ತಂದು ಶಾಶ್ವತ ಕುಡಿವ ನೀರಿನ ಯೋಜನೆಗೂ ಚಿಂತನೆ ನಡೆಸಲಾಗಿತ್ತು. ಈಗ ಮುತ್ತಿನಕೊಪ್ಪದ ತುಂಗಾ ನದಿಯಿಂದ ನೀರು ತಂದು ಶಾಶ್ವತ ಕುಡಿವ ನೀರಿನ ಯೋಜನೆ ರೂಪಿಸಲೂ ಚಿಂತನೆ ನಡೆಸಲಾಗುತ್ತಿದೆ.--ಕೋಟ್‌...1...

ಪದೇ, ಪದೇ ಆವರಿಸುತ್ತಿರುವ ಬರಗಾಲದಿಂದ ಭವಿಷ್ಯದ ದೃಷ್ಟಿ ಇಟ್ಟುಕೊಂಡು ಕೇವಲ ಕೊಳವೆ ಬಾವಿ ಮಾತ್ರ ನಂಬಿ ಕೊಳ್ಳದೆ ಪರ್ಯಾಯವಾಗಿ ಶಾಶ್ವತ ಕುಡಿವ ನೀರಿನ ಯೋಜನೆ ರೂಪಿಸಬೇಕು ಎಂದು ಚಿಂತನೆ ನಡೆಸಲಾಗಿದೆ. ಪಟ್ಟಣದ ಕೆಲವು ಬೋರ್‌ವೆಲ್‌ಗಳಲ್ಲಿ ಈ ವರ್ಷ ನೀರು ಕಡಿಮೆಯಾಗಿದೆ. ರಾಜೀವ್ ನಗರದ ಒಂದು ಬೋರ್‌ವೆಲ್‌ನಲ್ಲಿ ನೀರು ನಿಂತು ಹೋಗಿದೆ. ಈ ನಿಟ್ಟಿನಲ್ಲಿ ಮುತ್ತಿನಕೊಪ್ಪದ ತುಂಗಾ ನದಿಯಿಂದ ನರಸಿಂಹರಾಜಪುರ ಪಟ್ಟಣಕ್ಕೆ ನೀರು ತರಬೇಕು ಎಂದು ಪಟ್ಟಣ ಪಂಚಾಯಿತಿಯಿಂದ ಸರ್ಕಾರದ ಒಳ ಚರಂಡಿ ನೀರು ಸರಬರಾಜು ಇಲಾಖೆಗೆ ಪ್ರಸ್ತಾವನೆ ಕಳಿಸಲಾಗಿದೆ. ಈ ಬಗ್ಗೆ ನೀಲನಕ್ಷೆ ತಯಾರಿಸುತ್ತಿದ್ದಾರೆ. ಶಾಸಕರ ಮೂಲಕ ಸರ್ಕಾರಕ್ಕೆ ಈ ಬಗ್ಗೆ ಒತ್ತಡ ತರುತ್ತಿದ್ದೇವೆ.

- ಪ್ರಶಾಂತಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರು, ಪಪಂ ನರಸಿಂಹರಾಜಪುರಕೋಟ್.....2...

ಜಿಲ್ಲೆಯ ಬೇರೆ ಪಟ್ಟಣಕ್ಕೆ ಹೋಲಿಕೆ ಮಾಡಿದರೆ ನರಸಿಂಹರಾಜಪುರ ಪಟ್ಟಣದಲ್ಲಿ ಮನೆ, ಮನೆಗಳಿಗೂ ಪ್ರತಿ ನಿತ್ಯ 1 ಗಂಟೆ ನೀರು ನೀಡುತ್ತಿದ್ದು ಕುಡಿವ ನೀರಿನ ಸಮಸ್ಯೆ ಬಂದಿಲ್ಲ. ಕೆಲವು ಬೋರ್‌ವೆಲ್‌ನಲ್ಲಿ ನೀರು ಕಡಿಮೆಯಾಗಿದೆ. ಆದರೆ, ನೀರಿನ ಅಭಾವ ಆಗಿಲ್ಲ. ಪಪಂ ಸದಸ್ಯರು, ಸಿಬ್ಬಂದಿ ಸಹಕಾರದಿಂದ ಜನರಿಗೆ ಕುಡಿವ ನೀರಿನ ತೊಂದರೆ ಆಗದಂತೆ ನೋಡಿ ಕೊಂಡಿದ್ದೇವೆ. ಉಮಾ ಮಹೇಶ್ವರ ದೇವಸ್ಥಾನ ಸಮೀಪದಲ್ಲಿ ಹೊಸದಾಗಿ ಒಂದು ಬೋರ್‌ವೆಲ್ ಮಂಜೂರಾಗಿದ್ದು ಟೆಂಡರ್ ಕರೆಯಲಾಗಿದೆ.

- ಆರ್‌.ವಿ.ಮಂಜುನಾಥ್, ಮುಖ್ಯಾಧಿಕಾರಿ, ಪಪಂ ನರಸಿಂಹರಾಜಪುರಕೋಟ್‌...3 .....

ರಾಜೀವ್‌ ನಗರದಲ್ಲಿ 2 ಬೋರ್‌ವೆಲ್‌ಗಳಿದ್ದು ಒಂದರಲ್ಲಿ ನೀರು ಬರುವುದು ನಿಂತು ಹೋಗಿದೆ. ಸುಂಕದ ಕಟ್ಟೆ ಬೋರ್‌ ವೆಲ್ ನೀರನ್ನು ಕಳೆದ ಒಂದು ತಿಂಗಳಿಂದಲೂ ಟ್ಯಾಂಕರ್‌ ಮೂಲಕ ರಾಜೀವ್‌ ನಗರಕ್ಕೆ ತರಲಾಗುತ್ತಿದ್ದು, 37 ಮನೆಗಳಿಗೆ ನೀರು ನೀಡಲಾಗುತ್ತಿದೆ. ರಾಜೀವ್ ನಗರದ ಸಮೀಪದ ಅರಣ್ಯ ಇಲಾಖೆ ಡಿಪೋದಲ್ಲಿರುವ ಕೊಳವೆ ಬಾವಿಯಿಂದ ನೀರು ತರುವ ಬಗ್ಗೆ ಮಾತುಕತೆ ನಡೆದಿದೆ.

- ಜುಬೇದ, ಪಪಂ ಸದಸ್ಯ, ನರಸಿಂಹರಾಜಪುರ