ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬೈಕ್‌ ಕಳ್ಳತನ

| Published : May 06 2024, 12:36 AM IST

ಸಾರಾಂಶ

ಪೊಲೀಸ್ ಇಲಾಖೆಯ ಗೋಡೆ ಬರಹ ಸದುಪಯೋಗ ಪಡಿಸಿಕೊಳ್ಳುತ್ತಿರುವ ಕಳ್ಳರು

ಕನ್ನಡಪ್ರಭವಾರ್ತೆ ಚಳ್ಳಕೆರೆ

ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನಿರಂತರ ಮೋಟಾರ್‌ ಬೈಕ್‌ಗಳ ಕಳ್ಳತನವಾಗುತ್ತಿದ್ದು, ಈ ಬಗ್ಗೆ ಬೈಕ್‌ ಸವಾರರು ಕಳವಳಗೊಂಡಿದ್ದಾರೆ. ಲಾಕ್ ಮಾಡಿದ ಬೈಕ್‌ಗಳನ್ನೇ ಕಳ್ಳರು ಕದ್ದುಕೊಂಡು ಹೋಗುತ್ತಿದ್ದು, ಇದರಿಂದ ಬೈಕ್‌ ಸವಾರರು ಬೈಕ್‌ಗಳನ್ನು ನಿಲ್ಲಿಸಲು ಚಿಂತನೆ ಮಾಡುವ ಸ್ಥಿತಿ ಉಂಟಾಗಿದೆ.

ನಗರದ ಪೊಲೀಸ್ ಇಲಾಖೆ ಆಸ್ಪತ್ರೆಯ ಗೋಡೆಯ ಮೇಲೆ ಗೋಡೆ ಬರಹ ಬರೆಸಿ ಇದು ಚಳ್ಳಕೆರೆ ಪೊಲೀಸ್ ಠಾಣೆ ಪ್ರಕಟಣೆ ಬೈಕ್, ಮೊಬೈಲ್ ಕಳ್ಳರಿದ್ದು, ಸಾರ್ವಜನಿಕರು ಎಚ್ಚರ ದಿಂದ ಇರಬೇಕೆಂದು ಬೋರ್ಡ್ ಹಾಕಲಾಗಿದೆ. ಆದರೆ, ಪೊಲೀಸ್ ಇಲಾಖೆಯ ಬೋರ್ಡ್ ಬಳಿಯೇ ನಿಲ್ಲಿಸಿದ್ದ ಅನೇಕ ಬೈಕ್‌ಗಳು ಪ್ರತಿನಿತ್ಯ ಕಳ್ಳತನವಾಗುತ್ತಿವೆ. ಕೇವಲ ಎರಡು ದಿನದಲ್ಲಿ ಮೂರು ಬೈಕ್‌ ಕಳ್ಳತನವಾಗಿವೆ.

ಬೈಕ್ ಕಳೆದುಕೊಂಡ ನತ ದೃಷ್ಠರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರೆ ಪೊಲೀಸ್ ಸಿಬ್ಬಂದಿ ಚುನಾವಣೆ ಕರ್ತವ್ಯಕ್ಕೆ ತೆರಳಿದ್ದು, ಬಂದ ನಂತರ ಕಳವಾದ ಬೈಕ್‌ ಪತ್ತೆ ಕಾರ್ಯ ಚುರುಕುಗೊಳ್ಳಲಿದೆ ಎಂದಿದ್ದಾರೆ. ವಿಶೇಷವಾಗಿ ಭಾನುವಾರ ಹೆಚ್ಚು ಬೈಕ್‌ ಕಳ್ಳತನವಾಗುತ್ತಿರುವ ಬಗ್ಗೆ ಪೊಲೀಸ್ ಇಲಾಖೆ ಜಾಗ್ರತೆ ವಹಿಸಬೇಕಿದೆ. ಕೇವಲ ಗೋಡೆ ಬರಹ ಬರೆಸಿದರೆ ಸಾಲದು ಲಾಕ್ ಮಾಡಿದ ಬೈಕ್‌ ಎತ್ತಿಕೊಂಡು ಹೋಗುವ ಕಳ್ಳರ ಬಗ್ಗೆ ಪೊಲೀಸರು ಜಾಗ್ರತೆಯಿಂದ ಅವರ ಜಾಡನ್ನು ಪತ್ತೆ ಮಾಡಬೇಕಿದೆ. ಲಕ್ಷಾಂತರ ರು. ಮೋಟಾರ್‌ ಬೈಕ್ ಕಳೆದುಕೊಂಡ ಸವಾರರು ಪೊಲೀಸ್ ಇಲಾಖೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದ್ಧಾರೆ.