ನಿರ್ಭೀತಿಯಿಂದ ಮತ ಚಲಾಯಿಸುವಂತೆ ಜಿಲ್ಲಾಧಿಕಾರಿ ಮನವಿ

| Published : May 07 2024, 01:02 AM IST

ನಿರ್ಭೀತಿಯಿಂದ ಮತ ಚಲಾಯಿಸುವಂತೆ ಜಿಲ್ಲಾಧಿಕಾರಿ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವತ್ರಿಕ ಲೋಕಸಭೆಯ ಚುನಾವಣೆಯ ಮತದಾನವು ಮುಕ್ತ, ನ್ಯಾಯಸಮ್ಮತ, ನಿಷ್ಪಕ್ಷಪಾತ ಹಾಗೂ ಶಾಂತಿಯುತವಾಗಿ ನಡೆಯಲು ಸಕಲ ವ್ಯವಸ್ಥೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಸಾರ್ವತ್ರಿಕ ಲೋಕಸಭೆಯ ಚುನಾವಣೆಯ ಮತದಾನವು ಮುಕ್ತ, ನ್ಯಾಯಸಮ್ಮತ, ನಿಷ್ಪಕ್ಷಪಾತ ಹಾಗೂ ಶಾಂತಿಯುತವಾಗಿ ನಡೆಯಲು ಸಕಲ ವ್ಯವಸ್ಥೆ ಮಾಡಲಾಗಿದೆ.

ಮೇ 7ರಂದು ಬೆಳಗಿನ 7ರಿಂದ ಸಂಜೆ 6ರ ವರೆಗೆ ಜರುಗುವ ಮತದಾನದಲ್ಲಿ ಮತದಾರರು ಯಾವುದೇ ಆಸೆ, ಆಮೀಷಕ್ಕೆ ಒಳಗಾಗದೇ ನಿರ್ಭೀತಿಯಿಂದ ಮತ ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಜಿಲ್ಲೆಯ ಮತದಾರ ಪ್ರಭುಗಳಲ್ಲಿ ಮನವಿ ಮಾಡಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವತ್ರಿಕ ಚುನಾವಣೆಗಳು ಮಹತ್ತರ ಪಾತ್ರ ವಹಿಸುತ್ತವೆ. ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರ ಬಂಧುಗಳೇ ಮಹಾ ಪ್ರಭುಗಳಾಗಿದ್ದಾರೆ. ಮತದಾರರ ಮತ ಚಲಾವಣೆಯ ಮೇಲೆಯೇ ಪ್ರಜಾಪ್ರಭುತ್ವ ನೆಲೆಗೊಂಡಿದ್ದು, 5 ವರ್ಷಕ್ಕೆ ಸಿಗುವ ಸಂವಿಧಾನಬದ್ಧ ಮತದ ಹಕ್ಕು ಅವಕಾಶವನ್ನು ಯಾರು ಕಳೆದುಕೊಳ್ಳಬಾರದು. ಮತದಾನ ಕೇವಲ ಹಕ್ಕು ಎಂದು ತಿಳಿಯದೆ ಅದು ಕರ್ತವ್ಯ ಎಂದು ಭಾವಿಸಿ ಮತ ಚಲಾಯಿಸಬೇಕಿದೆ ಎಂದು ಅವರು ಕರೆ ನೀಡಿದರು.

ಜಿಲ್ಲೆಯ ಪ್ರತಿಯೊಬ್ಬ ಮತದಾರ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಬಲವರ್ಧನೆಗೊಳಿಸಬೇಕು. ಮತಕ್ಕೆ ಹಣ ಕೊಡುವುದು ಮತ್ತು ಕೇಳೋದು ಅಪರಾಧವಾಗಿದ್ದು, ಜಿಲ್ಲೆಯ ಎಲ್ಲ ಮತಬಾಂಧವರು, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಸುಗಮ ಮತ್ತು ಶಾಂತಿಯುತ ಮತದಾನ ಪ್ರಕ್ರಿಯೆಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಮತದಾನ ಮಾಡಲು ಅನುಕೂಲವಾಗುವಂತೆ ಕೇಂದ್ರ-ರಾಜ್ಯ ಸರ್ಕಾರಿ ಕಚೇರಿ, ಕಾರ್ಖಾನೆ, ವಾಣಿಜ್ಯ, ಅಂಗಡಿ-ಮುಂಗಟ್ಟುಗಳು, ಸಂಘ-ಸಂಸ್ಥೆಗಳು, ಔದ್ಯೋಗಿಕ ಕಾರ್ಖಾನೆಗಳು, ಖಾಸಗಿ ಸಂಸ್ಥೆಗಳಿಗೆ ಸರ್ಕಾರ ರಜೆ ಘೋಷಿಸಿದೆ. ಇದಲ್ಲದೆ ಕಾರ್ಮಿಕರಿಗೂ ಸಹ ವೇತನ ಸಹಿತ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಎಲ್ಲರು ತಪ್ಪದೆ ಮತ ಚಲಾಯಿಸಬೇಕು. ಮಂಗಳವಾರ “ನಮ್ಮ ನಡೆ-ಮತಗಟ್ಟೆ ಕಡೆ” ಆಗಿರಬೇಕು ಎಂದಿದ್ದಾರೆ.

ವಯೋವೃದ್ಧರು, ಅಶಕ್ತರು ಬೆಳಿಗ್ಗೆಯೇ ಮತದಾನ ಮಾಡಿ: ಜಿಲ್ಲೆಯಲ್ಲಿ ಬಿಸಿಲು ತಾಪ ಹೆಚ್ಚಿದ್ದು, ವಯೋವೃದ್ಧರು, ಅಶಕ್ತರು, ವಿಶೇಷಚೇತನರು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವರು, ಗರ್ಭಿಣಿ-ಬಾಣಂತಿ ಮಹಿಳೆಯರು ಬೆಳಿಗ್ಗಿನ ಅವಧಿಯಲ್ಲಿಯೆ ಮತದಾನ ಮಾಡುವ ಮೂಲಕ ತೀವ್ರ ಬಿಸಿಲಿನಿಂದ ಶಕೆಯಿಂದ ರಕ್ಷಿಸಿಕೊಳ್ಳಬೇಕು. ಮತಗಟ್ಟೆಗೆ ಬರುವಾಗ ತಲೆಯ ಮೇಲೆ ಕ್ಯಾಪ್, ಸಾಧ್ಯವಾದರೆ ಬಿಳಿ ಬಟ್ಟೆ ಧರಿಸಿದರೆ ಒಳ್ಳೆಯದು. ಜೊತೆಯಲ್ಲಿ ಕುಡಿಯುವ ನೀರು ಇಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಕಳಕಳಿಯಿಂದ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಆರೋಗ್ಯ ಕಾಳಜಿ: ಬಿಸಿಲಿನ ತಾಪ ಹೆಚ್ಚಿರುವ ಕಾರಣ ಪ್ರತಿ ಮತಗಟ್ಟೆಯಲ್ಲಿ ಚುನಾವಣಾ ಸಿಬ್ಬಂದಿ ಮತ್ತು ಮತದಾರರ ಆರೋಗ್ಯ ಕಾಳಜಿ ಬಗ್ಗೆ ವಿಶೇಷವಾಗಿ ಗಮನ ಹರಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಓ.ಆರ್.ಎಸ್., ಕುಡಿಯುವ ನೀರು, ನೆರಳು, ವೇಟಿಂಗ್ ರೂಮ್ ವ್ಯವಸ್ಥೆ ಮಾಡಲಾಗಿದೆ. ಪ್ರಥಮ ಚಿಕಿತ್ಸಾ ಕಿಟ್ ಇಡಲಾಗಿದ್ದು, ಆಶಾ ಕಾರ್ಯಕರ್ತೆ, ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿರಲಿದ್ದಾರೆ. ತುರ್ತು ಸಂದರ್ಭದಲ್ಲಿ ಅರ್ಧ ಗಂಟೆಯಲ್ಲಿ ಆ್ಯಂಬುಲೆನ್ಸ್‌ ದೊರೆಯುವಂತೆ ಜಿಲ್ಲೆಯಾದ್ಯಂತ 66 ಆ್ಯಂಬುಲೆನ್ಸ್‌ ಮೀಸಲಿರಿಸದೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ-2, ಸಿ.ಹೆಚ್.ಸಿ ಹಾಗೂ ತಾಲೂಕಾ ಆಸ್ಪತ್ರೆಯಲ್ಲಿ-6 ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ 10 ಹಾಸಿಗೆ ಬಿಸಿಲಿನ ತಾಪ ಹಿನ್ನೆಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಮೀಸಲಿರಿಸಿದ್ದು, ಇಲ್ಲಿ 24 ಗಂಟೆ ವೈದ್ಯರು ಇರಲಿದ್ದಾರೆ ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾಹಿತಿ ನೀಡಿದರು.