ನಾಲ್ಕುವರ್ಷ ಪೂರೈಸಿದ ನಿರಂತರ ಅನ್ನದಾಸೋಹ

| Published : May 06 2024, 12:43 AM IST

ಸಾರಾಂಶ

ದಾನಿಗಳ ನೆರವಿನಿಂದ ಅನ್ನದಾಸೋಹ ನೆರವೇರುತ್ತಿದೆ. ಇಂದು ವಯೋವೃದ್ಧರಿಗೆ ವಸ್ತ್ರ ವಿತರಣೆ ನಡೆಯುತ್ತಿದೆ. ಉಳ್ಳವರು ತಮ್ಮ ವಿಶೇಷ ದಿನಗಳನ್ನು ಈ ಕಾರ್ಯಕ್ರಮಕ್ಕೆ ಕೈಜೋಡಿಸುವ ಮೂಲಕ ಆಚರಿಸಿದರೆ ಅನುಕೂಲವಾಗುತ್ತದೆ.

ಕೊರೋನಾ ಸಂಕಷ್ಟದಲ್ಲಿ ಆರಂಭವಾದ ಹಸಿವು ನೀಗಿಸುವ ಪ್ರಕ್ರಿಯೆ

ದೊಡ್ಡಬಳ್ಳಾಪುರ: ಇಲ್ಲಿನ ದರ್ಗಾಜೋಗಿಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕೊರೋನಾ ಸಂಕಷ್ಟದ ವೇಳೆ ಆರಂಭವಾದ ನಿತ್ಯ ಉಚಿತ ಅನ್ನದಾಸೋಹ ಕಾರ್ಯಕ್ರಮ 1500 ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನಡೆದಿದ್ದು, ಭಾನುವಾರ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ರವಿ ಮಾವಿನಕುಂಟೆ, ಯುವ ಸಾಮಾಜಿಕ ಕಾರ್ಯಕರ್ತ ಮಲ್ಲೇಶ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸಾರ್ಥಕ ಕಾರ್ಯಕ್ರಮ ನಿರಂತರವಾಗಿ ನಡೆಯಲು ಸಹಕಾರ ನೀಡಿದ ದಾನಿಗಳ ನೆರವು ಅನನ್ಯ. ಬಡವರು, ಹಸಿದವರ ಆಶಯಗಳನ್ನು ಅನ್ನದ ಮೂಲಕ ಈಡೇರಿಸುವ ಸಂಕಲ್ಪ ವಿಶೇಷವಾದದ್ದು. ಸರ್ಕಾರಗಳು ಮಾಡಬೇಕಾದ ಕೆಲಸವನ್ನು ಓರ್ವ ವ್ಯಕ್ತಿ ಸಮುದಾಯದ ಸಹಕಾರದಲ್ಲಿ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕನ್ನಡ ಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ನಾಗರಾಜು ಮಾತನಾಡಿ, ಸತತವಾಗಿ ಕಡು ಬಡವರ ಹಸಿವನ್ನು ನೀಗಿಸುತ್ತಿರುವ ತಂಡದ ಕೆಲಸ ಅಭಿನಂದನಾರ್ಹ.ಮತ್ತಷ್ಟು ದಾನಿಗಳ ನೆರವು ದೊರೆಯಲಿ ಎಂದರು.

ಗ್ರಾಮ ಪಂಚಾಯತಿ ಸದಸ್ಯೆ ಶಶಿಕಲಾ ನಾಗರಾಜ್ ಮಾತನಾಡಿ, ಪ್ರತಿದಿನ ನೂರಾರು ಜನರ ಹಸಿವನ್ನು ನೀಗಿಸುವ ಸಲುವಾಗಿ ಜಿಲ್ಲೆಯಾದ್ಯಂತ ದಾನಿಗಳನ್ನು ಹುಡುಕುವ ತಂಡ,ನಿರಂತರ 1500 ದಿನಗಳ ಕಾಲ ಅನ್ನದಾಸೋಹವನ್ನು ಯಶಸ್ವಿಯಾಗಿ ಪೂರೈಸಿದೆ ಎಂದರು.

ಆಯೋಜಕ ಮಲ್ಲೇಶ್ ಮಾತನಾಡಿ, ದಾನಿಗಳ ನೆರವಿನಿಂದ ಅನ್ನದಾಸೋಹ ನೆರವೇರುತ್ತಿದೆ. ಇಂದು ವಯೋವೃದ್ಧರಿಗೆ ವಸ್ತ್ರ ವಿತರಣೆ ನಡೆಯುತ್ತಿದೆ. ಉಳ್ಳವರು ತಮ್ಮ ವಿಶೇಷ ದಿನಗಳನ್ನು ಈ ಕಾರ್ಯಕ್ರಮಕ್ಕೆ ಕೈಜೋಡಿಸುವ ಮೂಲಕ ಆಚರಿಸಿದರೆ ಅನುಕೂಲವಾಗುತ್ತದೆ ಎಂದರು.

ಕನ್ನಡ ಪಕ್ಷದ ಮುಖಂಡ ಸಂಜೀವ್ ನಾಯಕ್, ಯೋಗಾಚಾರ್ಯ ಬಿ.ಜಿ.ಅಮರನಾಥ್, ಮುಖಂಡರಾದ ಹನುಮಂತರಾಯಪ್ಪ, ನರಸಿಂಹ ಮೂರ್ತಿ, ರಂಗಸ್ವಾಮಿ, ಸೆಲ್ವಂ , ನವೀನ್, ಶ್ರೀನಿವಾಸ್, ಮುರಳಿ, ದೀಪು ಉಪಸ್ಥಿತರಿದ್ದರು.------------------------

ದೊಡ್ಡಬಳ್ಳಾಪುರದ ದರ್ಗಾಜೋಗಿಹಳ್ಳಿಯಲ್ಲಿ ಅನ್ನದಾಸೋಹ 1500ನೇ ದಿನವನ್ನು ವಿಶೇಷವಾಗಿ ಆಚರಿಸಿ ವಯೋವೃದ್ದರಿಗೆ ವಸ್ತ್ರಗಳನ್ನು ವಿತರಿಸಲಾಯಿತು.