ಹಕ್ಕು ಚಲಾಯಿಸಲು ಕ್ಷಣಗಣನೆ

| Published : May 07 2024, 01:06 AM IST

ಸಾರಾಂಶ

ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ 18ನೇ ಚುನಾವಣೆ ಮೇ 7ರಂದು ನಡೆಯುತ್ತಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಮತದಾರರು ತಪ್ಪದೇ ಮತ ಚಲಾಯಿಸುವ ಮೂಲಕ ತಮ್ಮ ಹಕ್ಕು ಚಲಾಯಿಸಬೇಕು. ಈ ಮೂಲಕ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಬೇಕು.

- 1866397 ನೋಂದಾಯಿತ ಮತದಾರರು

- 2045 ಮತಗಟ್ಟೆಗಳು

- 10 ಸಾವಿರಕ್ಕೂ ಹೆಚ್ಚು ಮತಗಟ್ಟೆ ಸಿಬ್ಬಂದಿ

- ಜಿಲ್ಲಾದ್ಯಂತ ಪೊಲೀಸ್‌ ಪಹರೆಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ 18ನೇ ಚುನಾವಣೆ ಮೇ 7ರಂದು ನಡೆಯುತ್ತಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಮತದಾರರು ತಪ್ಪದೇ ಮತ ಚಲಾಯಿಸುವ ಮೂಲಕ ತಮ್ಮ ಹಕ್ಕು ಚಲಾಯಿಸಬೇಕು. ಈ ಮೂಲಕ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಬೇಕು.

ಮತದಾನ ಶ್ರೇಷ್ಠವಾಗಿದ್ದು, ಅದನ್ನು ತಪ್ಪದೇ ಮಾಡಬೇಕಾಗಿದೆ. ಕಾರಣ ಹೇಳದೆ ಮತದಾನ ಮಾಡಿಯೇ ನಂತರ ಬೇರೆ ಕೆಲಸಕ್ಕೆ ಹೋಗಬೇಕು ಎನ್ನುವ ವಿನಂತಿಯನ್ನು ಖುದ್ದು ಚುನಾವಣೆ ಆಯೋಗ ಪದೇ ಪದೇ ಮಾಡುತ್ತಿದೆ. ಅದರಲ್ಲೂ ಈ ಬಾರಿ ಪ್ರತಿಯೊಬ್ಬರ ಮೊಬೈಲ್‌ಗೂ ಪದೇ ಪದೇ ಕರೆ ಮಾಡಿ, ಮತದಾನಕ್ಕೆ ಮನವಿ ಮಾಡಲಾಗಿದೆ.

ಕೊಪ್ಪಳ ಜಿಲ್ಲಾಡಳಿತ ಸಹ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ, ಈ ಮತದಾನ ಕಾರ್ಯದಲ್ಲಿ ಯಾರು ಸಹ ವಂಚಿತರಾಗಬಾರದು ಎಂದು ಮನದಟ್ಟು ಮಾಡುವ ಪ್ರಯತ್ನ ಮಾಡಿದೆ. ಉದ್ಯೋಗ ಖಾತ್ರಿ ಕೆಲಸ ನಡೆದಿರುವ ಸ್ಥಳಗಳಿಂದ ಹಿಡಿದು, ಬಸ್ ನಿಲ್ದಾಣದಲ್ಲಿ, ಬಸ್ಸಿನಲ್ಲಿ, ಶಾಲಾ, ಕಾಲೇಜಿನಲ್ಲಿ ಅಷ್ಟೇ ಯಾಕೆ, ದಾರಿಯುದ್ದಕ್ಕೂ, ಕ್ರೀಡಾಂಗಣದಲ್ಲಿಯೂ ಮತದಾನ ಜಾಗೃತಿ ಮೂಡಿಸಿದೆ. ಹೀಗಾಗಿ, ಮತದಾರರು ನೆಪ ಹೇಳುವುದನ್ನು ಬಿಟ್ಟು, ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸುತ್ತಾರೆ ಎನ್ನುವ ನಂಬಿಕೆ ಜಿಲ್ಲಾಡಳಿತದ್ದಾಗಿದೆ.

ಬಿಗಿಪಹರೆ:

ಶಾಂತಿಯುತ ಮತದಾನ ನಡೆಸುವುದಕ್ಕಾಗಿ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಬಿಗಿ ಪೊಲೀಸ್ ಪಹರೆಯನ್ನು ಹಾಕಿದೆ. ಈಗಾಗಲೇ ಶಾಂತಿ ಕದಡಬಹುದಾದ 8 ಗೂಂಡಾಗಳನ್ನು ಗಡಿಪಾರು ಮಾಡಲಾಗಿದೆ.

ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ 1538, ಹೋಮ್ ಗಾರ್ಡ್ 750, ಆರ್ಮಿ ತುಕಡಿಯ 216 ಸಿಬ್ಬಂದಿ, 4 ಕೆಎಸ್‌ಆರ್‌ಪಿ ಹಾಗೂ 6 ಡಿಎಆರ್ ತುಕಡಿಗಳು ಜಿಲ್ಲಾದ್ಯಂತ ಲಭ್ಯವಿವೆ.

ಮಸ್ಟರಿಂಗ್ ಕಾರ್ಯ ಯಶಸ್ವಿ, ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ:

ಲೋಕಸಭಾ ಚುನಾವಣೆ ಹಿನ್ನೆಲೆ ಮೇ 7ರಂದು ಮತದಾನ ಜರುಗಲಿದ್ದು, ಮತಗಟ್ಟೆ ಸಿಬ್ಬಂದಿಗೆ ಮತಯಂತ್ರ ಹಾಗೂ ಚುನಾವಣಾ ಸಾಮಗ್ರಿಯನ್ನು ವಿತರಿಸುವ ಪ್ರಮುಖ ಘಟ್ಟವಾಗಿರುವ ಮಸ್ಟರಿಂಗ್ ಕಾರ್ಯ ಸೋಮವಾರ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯಿತು.

ಮಸ್ಟರಿಂಗ್ ಕೇಂದ್ರಗಳಿಗೆ ಜಿಲ್ಲಾಧಿಕಾರಿಗಳ ಭೇಟಿ:

ಕುಷ್ಟಗಿ, ಕನಕಗಿರಿ, ಕೊಪ್ಪಳ ಮತ್ತು ವಿವಿಧ ಮಸ್ಟರಿಂಗ್ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್ ಭೇಟಿ ನೀಡಿ, ಮಸ್ಟರಿಂಗ್ ಕಾರ್ಯ ಪರಿಶೀಲಿಸಿದರು. ಈ ಸಂದರ್ಭ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಇತರರಿದ್ದರು.

ವಿವಿಧೆಡೆ ಮಸ್ಟರಿಂಗ್ ಕಾರ್ಯ:

60-ಕುಷ್ಟಗಿ, 61-ಕನಕಗಿರಿ, 62- ಗಂಗಾವತಿ, 63-ಯಲಬುರ್ಗಾ, 64-ಕೊಪ್ಪಳ, 58-ಸಿಂಧನೂರು, 59- ಮಸ್ಕಿ ಹಾಗೂ 92-ಸಿರಗುಪ್ಪ ವಿಧಾನಸಭಾ ಕ್ಷೇತ್ರಗಳು ಒಳಗೊಂಡಂತೆ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 2045 ಮತಗಟ್ಟೆಗಳಿಗೆ 2435 ಪಿಆರ್‌ಒ, 2435 ಎಪಿಆರ್‌ಒ, 4869ಪಿಒ ಮತ್ತು 248 ಎಂಒಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಮಸ್ಟರಿಂಗ್ ಕಾರ್ಯವು ಕುಷ್ಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕನಕಗಿರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್, ಗಂಗಾವತಿಯ ಲಯನ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಯಲಬುರ್ಗಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊಪ್ಪಳದ ಗವಿಸಿದ್ದೇಶ್ವರ ಬಿಇಡಿ ಕಾಲೇಜು, ಸಿಂಧನೂರಿನ ಸರ್ಕಾರಿ ಪದವಿ ಕಾಲೇಜು, ಮಸ್ಕಿಯ ದೇವನಾಮ ಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸಿರಗುಪ್ಪದ ಶ್ರೀ ವಿವೇಕಾನಂದ ಪಬ್ಲಿಕ್ ಸ್ಕೂಲ್‌ಗಳಲ್ಲಿ ಜರುಗಿತು.

ಅಧಿಕಾರಿಗಳು ಹಾಗೂ ಸಿಬ್ಬಂದಿ ತಮಗೆ ನಿಯೋಜಿಸಲಾದ ಮತಗಟ್ಟೆಗಳಿಗೆ ತೆರಳಲು ಸಿದ್ಧತೆ ಮಾಡಿಕೊಳ್ಳುವ ದೃಶ್ಯಗಳು ಮಸ್ಟರಿಂಗ್ ಕೇಂದ್ರದಲ್ಲಿ ಸಾಮಾನ್ಯವಾಗಿತ್ತು.

ಚುನಾವಣೆಯು ಶಾಂತರೀತಿಯಿಂದ ನಡೆಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಗತ್ಯ ಸಂಖ್ಯೆಯಲ್ಲಿ ನಿಯೋಜಿಸಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹ ಆಯಾ ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿ, ನಿಗದಿಪಡಿಸಿದ ಮತಗಟ್ಟೆಗಳಿಗೆ ತೆರಳಿದರು.

ಕಣದಲ್ಲಿರುವ ಅಭ್ಯರ್ಥಿಗಳು

1. ಡಾ. ಬಸವರಾಜ ಬಿಜೆಪಿ

2. ರಾಜಶೇಖರ ಹಿಟ್ನಾಳ ಕಾಂಗ್ರೆಸ್

3. ಶಂಕರ ಬಿಎಸ್ಪಿ

4. ಅನೋಜಿರಾವ್ ಸರ್ವ ಜನತಾ ಪಾರ್ಟಿ

5. ದುರ್ಗಾ ಪ್ರಸಾದ ಚಾಲೇಂಜರ್ ಪಾರ್ಟಿ

6. ನಿರುಪಾದಿ ಗೋಮರ್ಸಿ ಕರ್ನಾಟಕ ರಾಷ್ಟ್ರ ಸಮಿತಿ

7. ರಮ್ಜಾನ್ ಬಿ ಆಲ್ ಇಂಡಿಯಾ ಉಲಾಮ ಪಾರ್ಟಿ

8. ಶರಣಪ್ಪ ಕಮ್ಯುನಿಸ್ಟ್‌ ಪಾರ್ಟಿ,

9. ಸಿ. ಶರಣಬಸಪ್ಪ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ

10. ಇಮಾಮ್ ಸಾಬ ಜಂಗ್ಲಿ ಸಾಬ ಪಕ್ಷೇತರ

11. ಕರಿಂಪಾಶಾ ಪಕ್ಷೇತರ

12. ಕಾಳಪ್ಪ ಬಡಿಗೇರ ಪಕ್ಷೇತರ

13. ಪ.ಯ. ಗಣೇಶ ಪಕ್ಷೇತರ

14. ನಾಗರಾಜ ಕಲಾಲ ಪಕ್ಷೇತರ

15. ಕರಡಿ ಬಸವರಾಜ ಪಕ್ಷೇತರ

16. ಮಲ್ಲಿಕಾರ್ಜುನ ಹಡಪದ ಪಕ್ಷೇತರ

17. ರುಕ್ಮಿಣಿ ಪಕ್ಷೇತರ

18. ಸುರೇಶಗೌಡ ಪಕ್ಷೇತರ

19. ಹನುಮೇಶ ಎಚ್. ಎಸ್. ಪಕ್ಷೇತರ

ಹಾಗೂ ನೋಟಾ