ಪ್ರಜಾಪ್ರಭುತ್ವದ ಉತ್ಸವಕ್ಕೆ ಕ್ಷಣಗಣನೆ

| Published : May 07 2024, 01:00 AM IST

ಸಾರಾಂಶ

2019ರ ಚುನಾವಣೆಯಲ್ಲಿ ಶೇ. 70.12ರಷ್ಟು ಮತದಾನ ನಡೆದಿದ್ದು, ಎಲ್ಲ ರೀತಿಯ ಜಾಗೃತಿ, ಪ್ರಚಾರದ ಮಧ್ಯೆ ಈ ಬಾರಿ ಎಷ್ಟರ ಮಟ್ಟಿಗೆ ಮತದಾನ ನಡೆಯಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಧಾರವಾಡ

ಚುನಾವಣೆಯ ಮಹತ್ವದ ಘಟ್ಟ ಮತದಾನ. ಇದೀಗ ಧಾರವಾಡ ಲೋಕಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಶುರುವಾಗಿದ್ದು, ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಧಾರವಾಡ ಜಿಲ್ಲೆಯ ಏಳು ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವ ಸೇರಿ ಎಂಟು ವಿಧಾನಸಭಾ ಕ್ಷೇತ್ರಗಳ ಒಟ್ಟು 1901 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

ರಾಜ್ಯದಲ್ಲಿ ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು 2ನೇ ಹಂತದ ಭಾಗವಾಗಿ ಧಾರವಾಡ ಕ್ಷೇತ್ರದಲ್ಲಿ ಏ. 12ರಂದು ಈ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಯಿತು. ಅಂದಿನಿಂದ ಶುರುವಾದ ಪ್ರಕ್ರಿಯೆ ನಾಮಪತ್ರ ಸಲ್ಲಿಕೆ, ಪರಿಶೀಲನೆ, ವಾಪಸ್ ಪಡೆಯುವುದು, ಪ್ರಚಾರ ಮುಗಿಸಿ ಇದೀಗ ಮಂಗಳವಾರ ಮತದಾನದ ವರೆಗೂ ಬಂದು ನಿಂತಿದೆ. ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ನೇತೃತ್ವದಲ್ಲಿ ಇಡೀ ಚುನಾವಣಾ ಪ್ರಕ್ರಿಯೆ ನಡೆಯುತ್ತಿದೆ.

17 ಅಭ್ಯರ್ಥಿಗಳು:

ಈ ಲೋಕಸಭಾ ಕ್ಷೇತ್ರದಲ್ಲಿ 9,17,926 ಪುರುಷ, 9,13,949 ಮಹಿಳೆ ಸೇರಿ ಒಟ್ಟು 18,31,975 ಮತದಾರರು ಮತ ಚಲಾಯಿಸಲು ಅರ್ಹತೆ ಪಡೆದಿದ್ದಾರೆ. 2019ರ ಚುನಾವಣೆಯಲ್ಲಿ ಶೇ. 70.12ರಷ್ಟು ಮತದಾನ ನಡೆದಿದ್ದು, ಎಲ್ಲ ರೀತಿಯ ಜಾಗೃತಿ, ಪ್ರಚಾರದ ಮಧ್ಯೆ ಈ ಬಾರಿ ಎಷ್ಟರ ಮಟ್ಟಿಗೆ ಮತದಾನ ನಡೆಯಲಿದೆ ಎಂಬುದು ಕುತೂಹಲ ಕೆರಳಿಸಿದೆ. ಆಯ್ಕೆ ಬಯಸಿ ಬರೋಬ್ಬರಿ 17 ಅಭ್ಯರ್ಥಿಗಳು ಸ್ಪರ್ಧಿಸಿದ್ದು ಕೇಂದ್ರ ಸಚಿವ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಹಾಗೂ ಕಾಂಗ್ರೆಸ್‌ನ ವಿನೋದ ಅಸೂಟಿ ಮಧ್ಯೆ ನೇರಾ ನೇರ ಸ್ಪರ್ಧೆ ಇದೆ. ಉಳಿದಂತೆ ಕೆಲವು ರಾಜಕೀಯ ಪಕ್ಷಗಳ ಹಾಗೂ ಪಕ್ಷೇತರರು ತಕ್ಕ ಮಟ್ಟಿಗೆ ಪ್ರಚಾರ ಮಾಡಿದ್ದು ಅಭ್ಯರ್ಥಿಗಳು ಎಷ್ಟೆಷ್ಟು ಮತ ಹಂಚಿಕೊಳ್ಳುತ್ತಾರೆ ಎಂಬುದನ್ನು ಮತ ಎಣಿಕೆಯ ಜೂ. 4ರ ವರೆಗೆ ಕಾಯ್ದು ನೋಡಬೇಕಿದೆ.

ಎರಡು ಮತಯಂತ್ರ..

ಸಾಮಾನ್ಯವಾಗಿ ಒಂದು ಮತಯಂತ್ರದಲ್ಲಿ 15 ಜನರ ಹೆಸರು ಮಾತ್ರ ಪ್ರಕಟಿಸಲು ಸ್ಥಳಾವಕಾಶವಿದೆ. 15ಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದಲ್ಲಿ ಎರಡು ಮತಯಂತ್ರ ಇಡಲಾಗುತ್ತದೆ. ಅಂತೆಯೇ, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 17 ಅಭ್ಯರ್ಥಿಗಳು ಹಾಗೂ ಒಂದು ನೋಟಾ ಸೇರಿ 18 ಹೆಸರುಗಳಿಗೆ ಸ್ಥಳಾವಕಾಶ ಬೇಕು. ಆದ್ದರಿಂದ ಈ ಚುನಾವಣೆಯಲ್ಲಿ ಎರಡು ಮತಯಂತ್ರಗಳ ಮೂಲಕ ಮತದಾನ ಮಾಡಲಾಗುತ್ತದೆ. ಕ್ರಮ ಸಂಖ್ಯೆ 1ರಿಂದ 15ರ ವರೆಗೆ ಒಂದು ಮತಯಂತ್ರದಲ್ಲಿ ಹೆಸರುಗಳಿದ್ದು, ಇನ್ನೊಂದು ಮತಯಂತ್ರದಲ್ಲಿ 16, 17 ಹಾಗೂ ನೋಟಾ ಹೆಸರು ಇರುತ್ತದೆ. ಮತ ನೀಡಿದಾಗ ಬೀಪ್‌ ಶಬ್ದ ಬರಲಿದ್ದು, ನಂತರ ಕೆಲವೇ ಸೆಕೆಂಡ್‌ಗಳಲ್ಲಿ ವಿವಿಪ್ಯಾಟ್‌ನಲ್ಲಿ ತಾವು ಯಾರಿಗೆ ಮತ ನೀಡಿದ್ದೀರೋ ಅವರ ಹೆಸರಿನ ಚೀಟಿ ತಮಗೆ ಕಾಣಲಿದೆ. ಎಲೆಕ್ಟ್ರಾನಿಕ್ ವಸ್ತು ಒಯ್ಯುವಂತಿಲ್ಲ.

ಗೌಪ್ಯ ಮತದಾನದ ಹಿನ್ನೆಲೆಯಲ್ಲಿ ಮತಗಟ್ಟೆಗೆ ಯಾರೂ ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಒಯ್ಯುವಂತಿಲ್ಲ. ಒಂದು ವೇಳೆ ಮತಗಟ್ಟೆಗೆ ಮೊಬೈಲ್‌ ಒಯ್ದರೂ ಮತಗಟ್ಟೆ ಅಧಿಕಾರಿ ಬಳಿ ಅದನ್ನು ಕೊಟ್ಟು ಮತದಾನ ಮಾಡಬೇಕು. ಈಗಾಗಲೇ ಮತದಾರರಿಗೆ ಮತದಾನ ಮಾಡುವ ಕುರಿತು ಗೈಡ್‌ ನೀಡಿದ್ದು ಅದರ ಪ್ರಕಾರ ತಮ್ಮ ಮಹತ್ವದ ಮತ ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅರ್ಹ ಮತದಾರರು ಯಾವುದೇ ನೆಪ ಹೇಳದೆ ಮಂಗಳವಾರ ಅದಷ್ಟು ಬೇಗ ಗುರುತಿನ ಚೀಟಿಯೊಂದಿಗೆ ಮತದಾನ ಮಾಡಿ ಪ್ರಭುಪ್ರಭುತ್ವದ ತಮ್ಮ ಹಕ್ಕು ಚಲಾಯಿಸಿ. ಮತಗಟ್ಟೆಗಳಲ್ಲಿ ತಮಗೆ ಬೇಕಾದ ಕುಡಿಯುವ ನೀರು ಸೇರಿದಂತೆ ಹಲವು ಸೌಲಭ್ಯಗಳಿದ್ದು ಅಗತ್ಯವಿದ್ದಲ್ಲಿ ಉಪಯೋಗಿಸಿಕೊಳ್ಳಿ. ಈ ಬಾರಿ ಶೇ. 75ರಷ್ಟು ಮತದಾನದ ಗುರಿ ಹೊಂದಲಾಗಿದೆ ಎಂದು ಚುನಾವಣಾಧಿಕಾರಿ ದಿವ್ಯಪ್ರಭು ಹೇಳಿದರು.