ಬೆಳೆ ಹಾನಿ ಪರಿಹಾರ ಮೊತ್ತ ಹಳೇ ಸಾಲ ಜಮೆಗೆ ಆಕ್ರೋಶ

| Published : May 05 2024, 02:06 AM IST

ಸಾರಾಂಶ

ಸಭೆಯಲ್ಲಿ ರೈತ ಸಂಘಟನೆಗಳ ಅಸಮಧಾನ । ರೈತರಿಗೆ ನೋಟೀಸು ಕಳಿಸದಂತೆ ತಾಕೀತು

ಕನ್ನಡಪ್ರಭವಾರ್ತೆ, ಹಿರಿಯೂರು

ಭೀಕರ ಬರಪರಿಸ್ಥಿತಿ ಹಿನ್ನಲೆ ರೈತರ ಖಾತೆಗೆ ಜಮೆಯಾದ ಬೆಳೆ ವಿಮೆ ಹಾಗೂ ಬೆಳೆ ಹಾನಿ ಪರಿಹಾರ ಮೊತ್ತವನ್ನು ಬ್ಯಾಂಕ್ ಅಧಿಕಾರಿಗಳು ಹಳೇ ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿರುವುದರ ಬಗ್ಗೆ ರೈತ ಸಂಘದ ಪದಾಧಿಕಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ತಹಸೀಲ್ದಾರ್ ರಾಜೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸೇರಿದಂತೆ ತಾಲೂಕಿನ ಎಲ್ಲಾ ಬ್ಯಾಂಕ್‌ ಶಾಖಾ ಅಧಿಕಾರಿಗಳ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ರೈತ ಸಂಘದ ಪದಾಧಿಕಾರಿಗಳು ಅಸಮಧಾನ ವ್ಯಕ್ತಪಡಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಹಲವು ಬ್ಯಾಂಕ್‌ಗಳಲ್ಲಿ ಸರ್ಕಾರದಿಂದ ರೈತರ ಖಾತೆಗೆ ಬೆಳೆ ಪರಿಹಾರ, ಬೆಳೆ ವಿಮೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಪರಿಹಾರ ಬಂದರೆ ಅದನ್ನು ನೇರವಾಗಿ ಸಾಲಕ್ಕೆ ಜಮಾ ಮಾಡಲಾಗುತ್ತದೆ. ಬ್ಯಾಂಕಿನ ಅಧಿಕಾರಿಗಳು ಸರ್ಕಾರದ ಯಾವುದೇ ನಿರ್ದೇಶನವನ್ನು ಪಾಲನೆ ಮಾಡದೆ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

ಸರ್ಕಾರ ಬರಗಾಲ ಘೋಷಣೆ ಮಾಡಿದ್ದು, ಇಂತಹ ಸಂದರ್ಭದಲ್ಲಿ ರೈತರು ತಾವು ಬೆಳೆದ ಬೆಳೆ ಉಳಿಸಿಕೊಳ್ಳಲು ಬೋರ್‌ವೆಲ್ ಕೊರೆಸಿ ಸಾಲ ಸುಳಿಯಲ್ಲಿ ಸಿಲಿಕಿಕೊಳ್ಳುತ್ತಿದ್ದಾರೆ. ಹಲವು ರೈತರು ಖಾಸಗಿ ಟ್ಯಾಂಕರ್ ಮೂಲಕ ನೀರು ಹಾಯಿಸಿ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕಿನಿಂದ ನೋಟಿಸ್ ಕಳಿಸಿ ರೈತರಿಗೆ ಕಿರುಕುಳ ನೀಡಲಾಗುತ್ತಿದ್ದು, ಇದನ್ನು ಕೂಡಲೆ ತಡೆಯಬೇಕು. ಅಧಿಕಾರಿಗಳು ರೈತರಿಗೆ ಪುನಃ ಬೆಳೆ ಬೆಳೆಯಲು ಹೊಸದಾಗಿ ಸಾಲ ನೀಡಬೇಕು ಹಾಗೂ ತಾಲೂಕಿನ ಯಲ್ಲದಕೆರೆ ಗ್ರಾಮದಲ್ಲಿ ಬ್ಯಾಂಕ್ ಶಾಖೆ ಪ್ರಾರಂಭಕ್ಕೆ ಕೂಡಲೇ ಸೂಕ್ತ ಕ್ರಮ ವಹಿಸಬೇಕೆಂದು ತಿಪ್ಪೇಸ್ವಾಮಿ ಒತ್ತಾಯಿಸಿದರು.

ರೈತರ ಸಮಸ್ಯೆ ಆಲಿಸಿದ ಲೀಡ್ ಬ್ಯಾಂಕ್ ಮ್ಯಾನೇಜರ್ ಮತ್ತು ತಹಶೀಲ್ದಾರ್ ಅವರು ಶಾಖಾ ಅಧಿಕಾರಿಗಳಿಗೆ ಬಿಗಿ ನಿರ್ದೇಶನ ನೀಡಿದರು. ಸರ್ಕಾರದ ಪರಿಹಾರ ಮತ್ತು ಪ್ರೋತ್ಸಾಹ ಅನುದಾನ ಸಾಲಕ್ಕೆ ಜಮಾ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಿದರು. ಬರಗಾಲ ಪರಿಣಾಮ ರೈತರ ಸಾಲ ವಸೂಲಾತಿಗೆ ಒತ್ತಡ ಹಾಕಬಾರದು. ಒಂದು ವೇಳೆ ಬ್ಯಾಂಕುಗಳು ರೈತರಿಗೆ ಕಿರುಕುಳ ನೀಡಿದರೆ ಅಂತಹ ಬ್ಯಾಂಕ್‌ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು ಯಲ್ಲದಕೆರೆ ಗ್ರಾಮದಲ್ಲಿ ಬ್ಯಾಂಕ್ ಶಾಖೆ ಪ್ರಾರಂಭ ಮಾಡಲು ಕ್ರಮ ವಹಿಸಲಾಗುವುದು ಎಂದರು.ಈ ವೇಳೆ ಅರಳಿಕೆರೆ ತಿಪ್ಪೇಸ್ವಾಮಿ, ತಿಮ್ಮಾರೆಡ್ಡಿ, ಆದಿರಾಳು ನಾಗರಾಜಪ್ಪ, ವೈ ಶಿವಣ್ಣ, ಹೊಸಕೆರೆ ಜಯಣ್ಣ, ಜಗದೀಶ್, ಎಂಡಿ ರವಿ, ರಾಮಕೃಷ್ಣ, ಬಾಲಕೃಷ್ಣ, ರಂಗಸ್ವಾಮಿ, ವಿರೂಪಾಕ್ಷಪ್ಪ, ಶಶಿಧರ, ಗೋಪಾಲಪ್ಪ ಮುಂತಾದವರು ಹಾಜರಿದ್ದರು.

ಹಿರಿಯ ನಾಗರಿಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಲಿಸಿ: ರೈತ ಮುಖಂಡ ಸಿದ್ಧರಾಮಣ್ಣ ಮಾತನಾಡಿ, ಬ್ಯಾoಕ್‌ ಗಳಲ್ಲಿ ಹಿರಿಯ ನಾಗರೀಕರಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡುವುದರ ಮೂಲಕ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಹಲವು ಬ್ಯಾಂಕುಗಳು ಮಹಡಿ ಮೇಲೆ ಶಾಖೆ ತೆರೆದಿದ್ದು ಇದ್ದರಿಂದ ಹಿರಿಯ ನಾಗರಿಕರು ತೊಂದರೆಗೆ ಉಂಟಾಗುತ್ತಿದೆ. ಆದ್ದರಿಂದ ಹಿರಿಯರಿಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು.