ದೇಶದ ರಕ್ಷಣೆ, ಅಭಿವೃದ್ಧಿಗೆ ಜೆಡಿಎಸ್-ಬಿಜೆಪಿ ಮೈತ್ರಿ: ಮಾಲಕರಡ್ಡಿ

| Published : May 05 2024, 02:06 AM IST

ದೇಶದ ರಕ್ಷಣೆ, ಅಭಿವೃದ್ಧಿಗೆ ಜೆಡಿಎಸ್-ಬಿಜೆಪಿ ಮೈತ್ರಿ: ಮಾಲಕರಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಯಾದಗಿರಿ ಜಿಲ್ಲೆಯ ಮತದಾರರು ರಾಯಚೂರು-ಕಲಬುರಗಿ ಕ್ಷೇತ್ರಗಳು ಸೇರಿದಂತೆ ಸುರಪುರ ವಿಧಾನಸಭೆಗೆ ನಡೆಯುತ್ತಿರುವ ಉಪ ಚುನಾವಣೆಗೆ ಅಲ್ಲಿನ ಮತದಾರರು ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕೆಂದು ಮಾಜಿ ಸಚಿವ ಹಾಗೂ ಜೆಡಿಎಸ್ ಹಿರಿಯ ಮುಖಂಡ ಡಾ. ಎ.ಬಿ. ಮಾಲಕರಡ್ಡಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಪ್ರಸಕ್ತ ದಿನಗಳಲ್ಲಿ ಕರ್ನಾಟಕ ರಾಜ್ಯದ ಜನರ ಪರವಾಗಿ ಹೋರಾಟ ಮಾಡುತ್ತಿರುವ ಜೆಡಿಎಸ್ ಲೋಕಸಭಾ ಚುನಾವಣೆಯಲ್ಲಿ ದೇಶದ ರಕ್ಷಣೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಮೈತ್ರಿ ಮಾಡಿಕೊಂಡಿದೆ. ಯಾದಗಿರಿ ಜಿಲ್ಲೆಯ ಮತದಾರರು ರಾಯಚೂರು-ಕಲಬುರಗಿ ಕ್ಷೇತ್ರಗಳು ಸೇರಿದಂತೆ ಸುರಪುರ ವಿಧಾನಸಭೆಗೆ ನಡೆಯುತ್ತಿರುವ ಉಪ ಚುನಾವಣೆಗೆ ಅಲ್ಲಿನ ಮತದಾರರು ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕೆಂದು ಮಾಜಿ ಸಚಿವ ಹಾಗೂ ಜೆಡಿಎಸ್ ಹಿರಿಯ ಮುಖಂಡ ಡಾ. ಎ.ಬಿ. ಮಾಲಕರಡ್ಡಿ ಮನವಿ ಮಾಡಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ನಡೆಯುತ್ತಿರುವುದು ರಾಷ್ಟ್ರಮಟ್ಟದ ಪ್ರಮುಖ ವಿಷಯಗಳ ಹಾಗೂ ಅಭಿವೃದ್ಧಿ ಬಗ್ಗೆ, ಕಳೆದ 10 ವರ್ಷಗಳಲ್ಲಿ ದೇಶ ಪ್ರಧಾನಮಂತ್ರಿ ನೇತೃತ್ವದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದೆ. ಅಲ್ಲದೇ ದೇಶದ ಸಂಸ್ಕೃತಿ ರಕ್ಷಿಸಲು ಕ್ರಮ ಕೈಗೊಂಡಿದ್ದಾರೆ. ಅವರ ಸಾಧನೆಗಳನ್ನು ಗಮನಿಸಿ, ಜನರು ನೀಡುತ್ತಿರುವ ಬೆಂಬಲವನ್ನು ಕಂಡು ಕಾಂಗ್ರೆಸ್ ಸೇರಿದಂತೆ ಅವರನ್ನು ವಿರೋಧಿಸುತ್ತಿರುವ ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುವಂತಹ ಸ್ಥಿತಿ ಗಮನಿಸಿದ್ದೇವೆ ಎಂದು ತಿಳಿಸಿದರು.

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಪಕ್ಷ ಅಥವಾ ಮುಖ್ಯಸ್ಥನ ಆಡಳಿತ ಕಾರ್ಯ ವೈಖರಿ ಬಗ್ಗೆ ಚುನಾವಣೆ ಸಮಯದಲ್ಲಿ ಜನರು ವ್ಯಕ್ತಪಡಿಸುವ ಅಭಿಪ್ರಾಯಗಳಿಗೆ ಹೆಚ್ಚಿನ ಮಹತ್ವವಿದೆ. ನರೇಂದ್ರ ಮೋದಿ ಅವರ ಪ್ರಭಾವ ಈ ಚುನಾವಣೆಯಲ್ಲಿ ಎಲ್ಲಾ ರಾಜ್ಯಗಳಲ್ಲಿರುವುದನ್ನು ಗಮನಿಸಿದ್ದೇವೆ. ಸಮರ್ಥ ನಾಯಕನ ವ್ಯಕ್ತಿತ್ವ ಅಂತದ್ದು. ಜೆಡಿಎಸ್ ಕೂಡ ರಾಜ್ಯದ ಹಾಗೂ ದೇಶದ ಒಳಿತಿಗಾಗಿ ಮೈತ್ರಿ ಮಾಡಿಕೊಂಡು ಪರಸ್ಪರ ಸಹಕಾರ ಸಾಮರಸ್ಯದಿಂದ ಉಭಯ ಪಕ್ಷಗಳ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಖಂಡಿತ ಉತ್ತಮ ಫಲಿತಾಂಶ ಬರುತ್ತದೆ ಎಂದರು.

ನಾವೆಲ್ಲರೂ ಕಳೆದ 2 ತಿಂಗಳಿಂದ ಜನಸಂಪರ್ಕದಲ್ಲಿ ಇರುವ ಮೂಲಕ ಮೈತ್ರಿ ಅಭ್ಯರ್ಥಿಗಳು ಯಾರಾದರೂ ಸರಿ ಚುನಾವಣೆಯಲ್ಲಿ ಅವರಿಗೆ ಮತ ನೀಡಬೇಕೆಂದು ಜನರಲ್ಲಿ ಜಾಗೃತಿ ಮೂಡಿಸಿ, ವಾಸ್ತವಿಕ ರಾಜಕೀಯ ಪರಿಸ್ಥಿತಿ ಲಾಭ-ನಷ್ಟ ಬಗ್ಗೆ ತಿಳಿಸಿದ್ದೇವೆ ಎಂದರು.

5 ವರ್ಷಗಳ ಕಾಲ ರಾಯಚೂರ ಸಂಸದರಾಗಿದ್ದ ಪಕ್ಷದ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಈ ಭಾಗದ ಜನರಿಗೆ ಸರ್ಕಾರದ ಯೋಜನೆಗಳ ಲಾಭ ತಲುಪಿಸಿದ್ದಾರೆ. ಎಲ್ಲಾ ವರ್ಗದ ಜನರ ಜೊತೆ ಜನಸಂಪರ್ಕದಲ್ಲಿ ಇರುವ ಮೂಲಕ ಸ್ಥಳೀಯ ಅಭ್ಯರ್ಥಿಯಾಗಿದ್ದಾರೆ. ಅವರು ಗೆಲ್ಲಿಸಿದರೆ ಇನ್ನೂ ಹೆಚ್ಚಿನ ಕೆಲಸಗಳು ಮಾಡಲು ಅವರಿಗೆ ಸಹಕಾರಿಯಾಗುತ್ತದೆ. ವಾಸ್ತವಿಕತೆ ಅರಿತು ಮತದಾರರು ಅವರ ಪರ ಮತ ಚಲಾಯಿಸಬೇಕೆಂದು ಸಲಹೆ ನೀಡಿದರು.

ರಾಜ್ಯದಲ್ಲಿ ಕಳೆದ 10 ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕಾರ್ಯ ವೈಖರಿಯಿಂದ ಜನರು ಬೇಸತ್ತಿದ್ದಾರೆ. ಉಚಿತ ಗ್ಯಾರಂಟಿಗಳು ಜನರನ್ನು ತೃಪ್ತಿಗೊಳಿಸಿಲ್ಲ. ಬದಲಾಗಿ ಮಾನವ ಸಂಪನ್ಮೂಲ ಬಳಕೆಯಾಗುತ್ತಿಲ್ಲ ಎಂಬ ನೋವು ಜನರಲ್ಲಿದೆ, ರಾಜ್ಯದ ಖಜಾನೆ ಖಾಲಿಯಾಗಿ ಅಭಿವೃದ್ಧಿ ಕಾರ್ಯಗಳಿಗೆ ಇನ್ನು ಚಾಲನೆ ದೊರೆತಿಲ್ಲ. ಪರಿಣಾಮ ದಿನದಿನಕ್ಕೆ ಜನ ಸಾಮಾನ್ಯರ ಸಮಸ್ಯೆಗಳು ವಿಸ್ತಾರವಾಗುತ್ತಿವೆ. ಅದಕ್ಕೆ ಪರಿಹಾರ ಸಿಗುತ್ತಿಲ್ಲ ಎಂಬ ಜನಾಭಿಪ್ರಾಯ ಆಕ್ರೋಶ ವ್ಯಕ್ತವಾಗಿ ಬಿಜೆಪಿಗೆ ಬೆಂಬಲಿಸಲಿದ್ದಾರೆ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಚೆನ್ನಪ್ಪಗೌಡ ಮೋಸಂಬಿ, ಮುಖಂಡರಾದ ಶ್ರೀನಿವಾಸರಡ್ಡಿ ಕಂದಕೂರ, ಡಾ. ಸುಭಾಷ ಕರಣಗಿ, ಡಾ. ಶರಣು, ವಿಶ್ವನಾಥ ಶಿರವಾರ, ಶಿವರಾಜ ಜಕಾತಿ, ರಾಹುಲಗೌಡ ಅರಿಕೇರಿ ಇದ್ದರು.