ಮತದಾನಕ್ಕೆ ಸಿಂಗಾರಗೊಂಡ ಮತಗಟ್ಟೆ ಕೇಂದ್ರಗಳು

| Published : May 07 2024, 01:04 AM IST

ಸಾರಾಂಶ

ನಗರದ ಎಚ್ ಎಸ್ ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜು ಮೈದಾನ ಸೇರಿ ಎಲ್ಲ ಮಸ್ಟರಿಂಗ್ ಕೇಂದ್ರಗಳಲ್ಲಿ ಮತಗಟ್ಟೆ ಸಿಬ್ಬಂದಿಗಳು ಹೊರಡಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಇವಿಎಂ, ವಿವಿ ಪ್ಯಾಟ್‍ಗಳು, ಕಂಟ್ರೋಲಿಂಗ್ ಯುನಿಟ್, ಶಾಯಿ, ಚುನಾವಣೆಗೆ ಅಗತ್ಯವಾದ ಇತರೆ ಸಾಮಗ್ರಿಗಳೊಂದಿಗೆ ಅಧಿಕಾರಿ, ಸಿಬ್ಬಂದಿಗಳು ಸಿದ್ದತೆ ಮಾಡಿಕೊಂಡು ನಿಯೋಜಿಸಲಾದ ಬಸ್‍ಗಳಲ್ಲಿ ಸಂಬಂಧಿಸಿದ ಮತಗಟ್ಟೆಗಳಿಗೆ ತೆರಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಲೋಕಸಭಾ ಚುನಾವಣೆಗೆ ಮೇ 7ರಂದು ನಡೆಯಲಿರುವ ಮತದಾನ ಪ್ರಕ್ರಿಯೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ಮತದಾರರನ್ನು ಆಕರ್ಷಿಸಲು ಜಿಲ್ಲಾದ್ಯಂತ ಮತಗಟ್ಟೆಗಳ ವಿವಿಧ ಮಾದರಿಗಳಲ್ಲಿ ಸಿಂಗಾರಗೊಳಿಸಿದ್ದು, ಅಲಂಕೃತ ಮತಗಟ್ಟೆಗಳು ಮತದಾರರನ್ನು ಕೈ ಬೀಸಿ ಕರೆಯುತ್ತಿದೆ.

ಮತಗಟ್ಟೆಗಳ ಸೆಳೆಯಲು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 40 ಸಖಿ ಮತಗಟ್ಟೆ, 8 ವಿಶೇಷಚೇತನ ನಿರ್ವಹಣೆ, 8 ಯುವಜನ ನಿರ್ವಹಣೆಯ ಮತಗಟ್ಟೆಗಳು, 8 ಧ್ಯೇಯ ಆಧಾರಿತ ಮತಗಟ್ಟೆ ಹಾಗೂ 8 ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಮಸ್ಟರಿಂಗ್ ಕೇಂದ್ರಗಳು :

111-ಶಿವಮೊಗ್ಗ ಗ್ರಾಮಾಂತರ ಮತಕ್ಷೇತ್ರಕ್ಕೆ ಎಚ್‍ಎಸ್ ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜು ಶಿವಮೊಗ್ಗ, 112-ಭದ್ರಾವತಿ ಮತಕ್ಷೇತ್ರಕ್ಕೆ ಸಂಚಿ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪಿಯು ಕಾಲೇಜು ಭದ್ರಾವರಿ, 113-ಶಿವಮೊಗ್ಗ ಮತಕ್ಷೇತ್ರಕ್ಕೆ ಸಹ್ಯಾದ್ರಿ ಕಾಮರ್ಸ್ ಆಂಡ್ ಮ್ಯಾನೇಜ್‍ಮೆಂಟ್ ಕಾಲೇಜು, 114-ತೀರ್ಥಹಳ್ಳಿಗೆ ಡಾ.ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆ ಮತ್ತು ಪಿಯು ಕಾಲೇಜ್ ತೀರ್ಥಹಳ್ಳಿ, 115- ಶಿಕಾರಿಪುರ ಮತಕ್ಷೇತ್ರಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರ, 116-ಸೊರಬ ಮತಕ್ಷೇತ್ರಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೊರಬ ಹಾಗೂ 117-ಸಾಗರ ಮತಕ್ಷೇತ್ರಕ್ಕೆ ಸರ್ಕಾರಿ ಜ್ಯೂನಿಯರ್ ಪಿಯು ಕಾಲೇಜು, ಸಾಗರ ಮಸ್ಟರಿಂಗ್ ಕೇಂದ್ರಗಳಾಗಿವೆ.

ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ದಿನಗಳಂದು ಕರ್ತವ್ಯಕ್ಕೆ ನಿಯೋಜಿಸಿದ ಚುನಾವಣಾ ಸಿಬ್ಬಂದಿಗಳನ್ನು ಸಂಬಂಧಿಸಿದ ಮತಗಟ್ಟೆ ಕೇಂದ್ರಗಳಿಗೆ ಕರೆದುಕೊಂಡು ಹೋಗಲು ಅನುಕೂಲವಾಗುವಂತೆ 269 ಬಸ್‍ಗಳು, 7 ಮೀಸಲು ಬಸ್ ಮತ್ತು 13 ಮಿನಿ ಬಸ್ ಸೇರಿದಂತೆ 289 ಬಸ್‍ಗಳ ನಿಯೋಜನೆ ಮಾಡಲಾಗಿದೆ.

ನಗರದ ಎಚ್ ಎಸ್ ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜು ಮೈದಾನ ಸೇರಿ ಎಲ್ಲ ಮಸ್ಟರಿಂಗ್ ಕೇಂದ್ರಗಳಲ್ಲಿ ಮತಗಟ್ಟೆ ಸಿಬ್ಬಂದಿಗಳು ಹೊರಡಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಇವಿಎಂ, ವಿವಿ ಪ್ಯಾಟ್‍ಗಳು, ಕಂಟ್ರೋಲಿಂಗ್ ಯುನಿಟ್, ಶಾಯಿ, ಚುನಾವಣೆಗೆ ಅಗತ್ಯವಾದ ಇತರೆ ಸಾಮಗ್ರಿಗಳೊಂದಿಗೆ ಅಧಿಕಾರಿ, ಸಿಬ್ಬಂದಿಗಳು ಸಿದ್ದತೆ ಮಾಡಿಕೊಂಡು ನಿಯೋಜಿಸಲಾದ ಬಸ್‍ಗಳಲ್ಲಿ ಸಂಬಂಧಿಸಿದ ಮತಗಟ್ಟೆಗಳಿಗೆ ತೆರಳಿದರು.

ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 2039 ಮತಗಟ್ಟೆಗಳಿದ್ದು, 862789 ಪುರುಷ, 890061 ಮಹಿಳಾ ಮತ್ತು 35 ತೃತೀಯ ಲಿಂಗಿ ಸೇರಿದಂತೆ ಒಟ್ಟು 1752885 ಮತದಾರರು ಇದ್ದಾರೆ. 87 ದುರ್ಬಲ ಮತಗಟ್ಟೆ, 104 ದುರ್ಬಲ ಪ್ರದೇಶ, 4650 ವಲ್ನರಬಲ್ ಮತದಾರರು, 325 ಕ್ರಿಟಿಕಲ್ ಮತಗಟ್ಟೆಗಳನ್ನು ಗುರುತಿಸಲಾಗಿದೆ.

ಯುವ, ಮಹಿಳಾ ಮತದಾರರ ಸೆಳೆಯಲು ಹೊಸರೂಪ

ಚುನಾವಣಾ ಪ್ರಕ್ರಿಯೆಯಲ್ಲಿ ವಿಶೇಷವಾಗಿ ವಿಶೇಷಚೇತನರು ಯಾವುದೇ ತಾರತಮ್ಯವಿಲ್ಲದೇ ಸಕ್ರಿಯವಾಗಿ ಭಾಗವಹಿಸುವಂತೆ ಮತ್ತು ಹೆಚ್ಚು ಸುಗಮ ಚುನಾವಣೆಗಳನ್ನಾಗಿ ಮಾಡುವ ಸಲುವಾಗಿ ಹಾಗೂ ಮಹಿಳಾ ಮತದಾರರನ್ನು ಸೆಳೆಯಲು ಗ್ರಾಪಂ ಹಾಗೂ ಸ್ಥಳೀಯರ ಸಹಕಾರದಿಂದ ಮಹಿಳೆಯರು ಮತ್ತು ಯುವಕರನ್ನು ಮತದಾನ ಮಾಡಲು ಆಕರ್ಷಿಸಲು ಮತಗಟ್ಟೆ ಕೇಂದ್ರಗಳನ್ನು ವಿಶೇಷ ಕಾಳಜಿಯಿಂದ ಅನೇಕ ಮತಗಟ್ಟೆಗಳಿಗೆ ಹೊಸ ರೂಪ ನೀಡಿದ್ದು, ಶೃಂಗಾರಗೊಂಡಿರುವ ಮತಗಟ್ಟೆ ಕೇಂದ್ರಗಳು ಯುವಕರನ್ನು ಹಾಗೂ ಮಹಿಳಾ ಮತದಾರರನ್ನು ಆಕರ್ಷಿಸುತ್ತಿವೆ.

ಮತದಾನಗೈದ ನಾಗರಿಕರಿಗೆ ಉಚಿತ ಉಪಾಹಾರ, ವಿಶೇಷ ರಿಯಾಯಿತಿ

ಶಿವಮೊಗ್ಗ: ಲೋಕಸಭಾ ಚುನಾವಣೆ ಮತದಾನ ಪ್ರಮಾಣ ಹೆಚ್ಚಳಕ್ಕೆ ವಿವಿಧ ಸಂಸ್ಥೆಗಳು ಕೈ ಜೋಡಿಸಿದ್ದು, ನಗರದ ಹೋಟೆಲ್ ಶುಭಂ ಸಂಸ್ಥೆಯು ಚುನಾವಣಾ ದಿನ ಮತದಾನ ಮಾಡಿದ ನಾಗರಿಕರಿಗೆ ಉಚಿತ ಉಪಾಹಾರ ನೀಡಲು ಸಜ್ಜಾಗಿದೆ.

ಯಾವುದೇ ರಾಜಕೀಯ ಉದ್ದೇಶ ಇಲ್ಲದೇ ಶಿವಮೊಗ್ಗ ನಗರದಲ್ಲಿ ಅತಿ ಹೆಚ್ಚು ಮತದಾನ ಆಗಬೇಕು ಮತ್ತು ಇಡಿ ರಾಜ್ಯಕ್ಕೆ ಮಾದರಿ ಜಿಲ್ಲೆ ನಮ್ಮದಾಗಬೇಕು ಎಂಬ ಉದ್ದೇಶದಿಂದ ಮತದಾನ ಮಾಡಿದ ನಾಗರಿಕರಿಗೆ ಉಚಿತ ಉಪಹಾರ ನೀಡುವ ಯೋಜನೆ ಹಾಕಿಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಮತದಾನ ಮಾಡಿದವರು ಉಚಿತ ಉಪಹಾರ ಪಡೆದುಕೊಳ್ಳಬಹುದು. ಯಾರು ಬೇಕಾದರೂ ಉಚಿತ ಉಪಹಾರ ಪಡೆಯಬಹುದು. ಆದರೆ, ಮತ ಚಲಾಯಿಸಿದ ಬೆರಳಿನ ಗುರುತು ತೋರಿಸಬೇಕು. ಚುನಾವಣಾ ಪ್ರಚಾರದ ಟೀ ಶರ್ಟ್, ಕ್ಯಾಪ್, ಬಂಟಿಂಗ್ಸ್ , ಪಕ್ಷದ ಶಾಲು, ಇನ್ನಿತರ ಯಾವುದೇ ಪ್ರಚಾರದ ಸಾಮಗ್ರಿ ತರುವಂತಿಲ್ಲ. ಯಾವುದೇ ರಾಜಕೀಯ ಸಂಬಂಧಿಸಿದ ವಿಷಯ ಮಾತನಾಡುವಂತಿಲ್ಲ ಎಂದು ಹೋಟೆಲ್ ಮಾಲೀಕರು ಸೂಚಿಸಿದ್ದಾರೆ.

ಮತ ಚಲಾಯಿಸಿ ಹಣ ಉಳಿಸಿ:

ಮಂಗಳವಾರ ಮತದಾನ ಮಾಡಿದವರಿಗೆ ಶ್ರೀನಿಧಿ ಸಿಲ್ಕ್ಸ್‌ ಆ್ಯಂಡ್‌ ಟೆಕ್ಸ್‌ಟೈಲ್‌ ಕೊಡುಗೆ ನೀಡುತ್ತಿದ್ದು, ಮತದಾನ ಮಾಡಿದವರು ಮಧ್ಯಾಹ್ನ 2ರೊಳಗೆ ಶ್ರೀನಿಧಿ ಸಿಲ್ಕ್ಸ್‌ ಆ್ಯಂಡ್‌ ಟೆಕ್ಸ್‌ಟೈಲ್‌ನಲ್ಲಿ ಮತದಾನ ಗುರುತು ತೋರಿಸಿ ಖರೀದಿ ಮಾಡಿದರೆ ಖರೀದಿ ಮೇಲೆ ಶೇ.15ರಷ್ಟು ರಿಯಾಯಿತಿ ನೀಡಲಾಗುವುದು. ಇದು ಶಿವಮೊಗ್ಗ ಲೋಕಸಭಾ ವ್ಯಾಪ್ತಿಯ ಮತದಾರರಿಗೆ ಮಾತ್ರ ಅನ್ವಯವಾಗಲಿದೆ ಎಂದು ಟೆಕ್ಸ್‌ಟೈಲ್‌ ಮಾಲೀಕರು ತಿಳಿಸಿದ್ದಾರೆ.

ಆರೋಗ್ಯ ತಪಾಸಣೆಗಳ ಮೇಲೆ ವಿಶೇಷ ರಿಯಾಯಿತಿ

ಮಂಗಳವಾರ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದವರಿಗೆ ನಗರದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯು ಆರೋಗ್ಯ ತಪಾಸಣೆಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಡಯಗ್ನೋಸ್ಟಿಕ್ ಪರೀಕ್ಷೆಗಳ ಮೇಲೆ ಶೇ.15 ಮತ್ತು ಎಲ್ಲಾ ರೀತಿಯ ಆರೋಗ್ಯ ತಪಾಸಣಾ ಪ್ಯಾಕೇಜ್‍ಗಳ ಮೇಲೆ ಶೇ.10 ರಷ್ಟು ರಿಯಾಯಿತಿ ಹಾಗೂ ಉಚಿತ ನೊಂದಣಿಯನ್ನು ಪಡೆಯಬಹುದಾಗಿದೆ. ನಿಮ್ಮ ಮತ ಅತ್ಯಮೂಲ್ಯ, ಮತದಾನ ನಮ್ಮೆಲ್ಲರ ಹಕ್ಕು ಸಾರ್ವತ್ರಿಕ ಗರಿಷ್ಠ ಪ್ರಮಾಣದ ಮತದಾನಕ್ಕೋಸ್ಕರ ಆಸ್ಪತ್ರೆ ವತಿಯಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮಾಹಿತಿಗೆ ಮೊ.ಸಂ.9513915370 ನ್ನು ಸಂಪರ್ಕಿಸಬಹುದು.