ಬೆಳೆವಿಮೆ ಹಣ ನೀಡದ ಕಂಪನಿ ವಿರುದ್ಧ ಕ್ರಮಕ್ಕೆ ಆಗ್ರಹ

| Published : May 07 2024, 01:00 AM IST

ಸಾರಾಂಶ

ಗೌರಿಬಿದನೂರು ತಾಲೂಕು ಸೊಣಗಾನಹಳ್ಳಿ ಪಂಚಾಯಿತಿಯ 16 ಹಳ್ಳಿಗಳ 1200 ಮಂದಿ ರೈತರು ತಮ್ಮ ಪಾಲಿನ ಬೆಳೆ ವಿಮೆ ಹಣ ಪಾವತಿಸಿದ್ದರೂ ಈವರೆಗೆ ಪರಿಹಾರ ಬಂದಿಲ್ಲ. ಈ ಮೋಸದ ವಿರುದ್ದ ರೈತಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರೈತರಿಗೆ ಮೋಸ ಮಾಡುವ ವಿಮಾ ಕಂಪನಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು, ಬೆಳೆ ನಷ್ಟದ ಸಮೀಕ್ಷೆ ಮಾಡಿಸಿ ದಲ್ಲಾಳಿಗಳ ಪರವಾಗಿರುವ ಪಿಡಿಒಗಳ ವಿರುದ್ದವೂ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ರೈತಸಂಘ (ಪುಟ್ಟಣ್ಣಯ್ಯ ಬಣ)ವು ಜಿಲ್ಲಾಧ್ಯಕ್ಷ ಲಕ್ಷ್ಮೀ ನಾರಾಯಣರೆಡ್ಡಿ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿತು.

ಈ ವೇಳೆ ಮಾತನಾಡಿದ ಲಕ್ಷ್ಮೀನಾರಾಯಣರೆಡ್ಡಿ, ವಿಮಾ ಮೊತ್ತ ವಿತರಣೆಯಲ್ಲಿ ಆಗಿರುವ ವಂಚನೆ ಬಗ್ಗೆ ಅಧಿಕಾರಿಗಳ ಮೂಲಕ ಸರ್ವೇ ಮಾಡಿಸಿ ಅನ್ಯಾಯ ಆಗಿರುವ ರೈತರಿಗೆ ನ್ಯಾಯಕೊಡಬೇಕು ಎಂದರು.

ಬೆಳೆನಷ್ಟ ಪರಿಹಾರ ನೀಡಲಿ

ಈ ಬಾರಿ ಮುಂಗಾರು ಹಿಂಗಾರು ಕೈಕೊಟ್ಟ ಕಾರಣ ಶೇ.100 ರಷ್ಟು ಬರಗಾಲಕ್ಕೆ ತುತ್ತಾಗಿದ್ದು ಸಂಪೂರ್ಣ ಬೆಳೆನಾಶವಾಗಿದೆ. ಮತ್ತೆ ಮುಂಗಾರು ಬರುವ ಕಾಲ ಸನ್ನಿಹಿತವಾಗಿದ್ದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರ ನೆರವಿಗೆ ಬಾರದೆ ಕಾಲಹರಣ ಮಾಡುತ್ತಿರುವುದು ಸರಿಯಲ್ಲ. ಜಿಲ್ಲಾಡಳಿತ ಕೂಡಲೇ ರೈತರ ನೆರವಿಗೆ ಬಂದು ಹಣ ಬಿಡುಗಡೆಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಗೌರಿಬಿದನೂರು ತಾಲೂಕು ಸೊಣಗಾನಹಳ್ಳಿ ಪಂಚಾಯಿತಿಯ 16 ಹಳ್ಳಿಗಳ 1200 ಮಂದಿ ರೈತರು ತಮ್ಮ ಪಾಲಿನ ಬೆಳೆ ವಿಮೆ ಹಣ ಪಾವತಿಸಿದ್ದರೂ ಈವರೆಗೆ ಪರಿಹಾರ ಬಂದಿಲ್ಲ. ಈ ಮೋಸದ ವಿರುದ್ದ ರೈತಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಆಶ್ವಾಸನೆ ನೀಡಿದ್ದರಿಂದ ಪ್ರತಿಭಟನೆ ವಾಪಸ್‌ ಪಡೆಯುತ್ತಿದ್ದೇವೆ ಎಂದರು.ತಪ್ಪಿತಸ್ಥರ ವಿರುದ್ಧ ಕ್ರಮ

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿ, ರೈತರಿಗೆ ಆಗಿರುವ ಮೋಸದ ಬಗ್ಗೆ ಮಾಹಿತಿ ಪಡೆದಿದ್ದು ಕೂಡಲೇ ಈ ಸಂಬಂಧ ಮಾಹಿತಿ ಅಧಿಕಾರಿಗಳಿಂದ ವರದಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಆಶ್ವಾಸನೆ ನೀಡಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ಮುನೇಗೌಡ, ಕಾರ್ಯದರ್ಶಿ ನವೀನ್‌ಕುಮಾರ್, ಆಂಜಿನಪ್ಪ, ಕದಿರೇಗೌಡ, ಬಿ.ಆಂಜಿನಪ್ಪ ಮತ್ತಿತರರು ಇದ್ದರು.