ಮಾವು ಬೆಳೆಗಾರರಿಗೆ ನಷ್ಟ ಪರಿಹಾರ ನೀಡಲು ಆಗ್ರಹ

| Published : May 07 2024, 01:04 AM IST

ಸಾರಾಂಶ

ಡಿಸೆಂಬರ್ ಮತ್ತು ಜನವರಿಯಲ್ಲಿ ಬರಬೇಕಾಗಿದ್ದ ಮಾವಿನ ಹೂವುಗಳು ಜನವರಿ ಕೊನೆ ಮತ್ತು ಫೆಬ್ರವರಿ ತಿಂಗಳಲ್ಲಿ ಬಂದ ಕಾರಣ ಬಿರು ಬಿಸಿಲಿನ ತಾಪಕ್ಕೆ ಕಾಯಿ ಕಚ್ಚಲಿಲ್ಲ. ಜೊತೆಗೆ ಇದ್ದಕ್ಕಿದ್ದಂತೆ ಮರಗಳು ಚಿಗುರೋಡೆದು ಶೇ.೩೦ ರಷ್ಟು ಮಾತ್ರ ಮಾವಿನ ಬೆಳೆ ಉಳಿದಿದೆ

ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರಪ್ರಕೃತಿ ವಿಕೋಪಕ್ಕೆ ಸಿಲುಕಿ ಈ ಬಾರಿಯೂ ಮಾವು ಬೆಳೆಗಾರರು ನಷ್ಟಕ್ಕೆ ಒಳಗಾಗಿದ್ದಾರೆ. ಮಾವಿನ ಫಸಲು ಇಳುವರಿ ಈ ವರ್ಷ ಶೇ.೩೦ಕ್ಕೆ ಕುಸಿದಿದೆ. ಬಿಸಿಲಿನ ತಾಪಕ್ಕೆ ಮರದಲ್ಲೆ ಮಾವಿನ ಫಸಲು ಉದುರಿ ಹೋಗುತ್ತಿದೆ. ಇದರಿಂದ ಮಾವು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ, ಸರ್ಕಾರ ಈ ಕೂಡಲೆ ಮಾವಿನ ಬೆಳೆಗಾರರಿಗೆ ನಷ್ಟ ಪರಿಹಾರ ನೀಡಬೇಕು ಎಂದು ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಮಾವು ಬೆಳೆಗಾರರ ಸಂಯುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಶ್ರೀನಿವಾಪುರದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಮಾವಿನ ಕಣಜ ಎಂದು ಖ್ಯಾತಿ ಪಡೆದಿರುವ ಶ್ರೀನಿವಾಸಪುರದಲ್ಲಿ ಬಿಸಿಲಿನ ತಾಪಮಾನ ೪೦ ಡಿಗ್ರಿಗೆ ಏರಿದೆ. ಇದು ಮಾವು ಬೆಳೆಗೆ ಮಾರಕವಾಗಿದೆ ಎಂದು ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಹೇಳಿದರು.ಶೇ.30ರಷ್ಟು ಉಳಿದ ಮಾವು ಬೆಳೆ

ಡಿಸೆಂಬರ್ ಮತ್ತು ಜನವರಿಯಲ್ಲಿ ಬರಬೇಕಾಗಿದ್ದ ಮಾವಿನ ಹೂವುಗಳು ಜನವರಿ ಕೊನೆ ಮತ್ತು ಫೆಬ್ರವರಿ ತಿಂಗಳಲ್ಲಿ ಬಂದ ಕಾರಣ ಬಿರು ಬಿಸಿಲಿನ ತಾಪಕ್ಕೆ ಕಾಯಿ ಕಚ್ಚಲಿಲ್ಲ. ಜೊತೆಗೆ ಇದ್ದಕ್ಕಿದ್ದಂತೆ ಮರಗಳು ಚಿಗುರೋಡೆದು ಶೇ.೩೦ ರಷ್ಟು ಮಾತ್ರ ಮಾವಿನ ಬೆಳೆ ಉಳಿದಿದೆ ದಿನೆದಿನೆ ಏರುತ್ತಿರುವ ಬಿಸಿಲಿನ ತಾಪಕ್ಕೆ ಉಳಿದಿರುವ ಮಾವಿನ ಕಾಯಿಗಳು ಒಣಗಿ ಬಾಡಿ ಬತ್ತಿ ಹೋಗುತ್ತಿವೆ.

ಇಲ್ಲಿನ ಬಹುತೇಕ ಕೃಷಿಕರಿಗೆ ಮಾವಿನ ಬೆಳೆಯೇ ಜೀವನಾಡಿಯಾಗಿದೆ. ಇಲ್ಲಿ ಮಾವು ಬೆಳೆಗಾರರ ಜೊತೆಗೆ ಮಾವು ಬೆಳೆಯನ್ನು ಗುತ್ತಿಗೆ ಪಡೆಯುವಂತ ಮಾವು ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಬಿರು ಬಿಸಿಲಿನ ತಾಪಕ್ಕೆ ಕಸಕ್ಕೆ ಹೊತ್ತಿಕೊಳ್ಳುವ ಬೆಂಕಿ ಮಾವಿನ ಮರಗಳನ್ನು ಆಹುತಿ ತಗೆದುಕೊಳ್ಳುತ್ತಿದೆ ಎಂದು ತಹಸೀಲ್ದಾರ ಬಳಿ ಅಹವಾಲು ಮಂಡಿಸಿದರು.ರೈತರಿಗೆ ಬೆಳೆನಷ್ಟ ನೀಡಲಿ

ಜಿಲ್ಲಾಡಳಿತ ಮತ್ತು ಸರ್ಕಾರ ಕೊಡಲೇ ಮಧ್ಯಪ್ರವೇಶಿಸಿ ವಿಶೇಷ ತಂಡ ರಚಿಸಿ ಸಂಬಂದಿಸಿದ ಇಲಾಖೆ ಅಧಿಕಾರಿಗಳು ಜಂಟಿಯಾಗಿ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕೆಂದು ಅಗ್ರಹಿಸಿ ಸರ್ಕಾರಕ್ಕೆ ಹಕ್ಕೋತ್ತಾಯಗಳ ಪತ್ರ ನೀಡಿದರು.ಜಿಲ್ಲಾ ಮಾವು ಸಂಘದ ಪ್ರಧಾನ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರಿ, ಗೌರವಾಧ್ಯಕ್ಷ ವೀರಪ್ಪ ರೆಡ್ಡಿ, ಖಜಾಂಚಿ ಬೆಲ್ಲಂ ಶ್ರೀನಿವಾಸರೆಡ್ಡಿ, ಉಪಾಧ್ಯಕ್ಷ ಬೈರಾರೆಡ್ಡಿ, ನಂಬಿಹಳ್ಳಿ ಶ್ರೀರಾಮರೆಡ್ಡಿ, ಮುಖಂಡರಾದ ಸೈಯದ್ ಪಾರೂಕ್, ಆರ್.ವೆಂಕಟೇಶ್, ಎಸ್.ಎಂ.ನಾಗರಾಜ್, ಚಲ್ದಿಗಾನಹಳ್ಳಿ ದೇವರಾಜ್, ಮಂಜುಳಮ್ಮ ಇದ್ದರು.