ಬೆಳೆ ಸಾಲ ಮನ್ನಾ, ಗೋ ಶಾಲೆ ತರೆಯಲು ಆಗ್ರಹ

| Published : May 07 2024, 01:06 AM IST

ಸಾರಾಂಶ

ಮೊಳಕಾಲ್ಮುರು ರೈತ ಸಂಘದ ಪದಾಧಿಕಾರಿಗಳಿಂದ ತಹಸೀಲ್ದಾರ್‌ಗೆ ಮನವಿ

ಕನ್ನಡ ಪ್ರಭ ವಾರ್ತೆ ಮೊಳಕಾಲ್ಮುರು

ಬೆಳೆ ಸಾಲ ಮನ್ನಾ ಮಾಡುವ ಜೊತೆಗೆ ತಾಲೂಕಿನಲ್ಲಿ ಇನ್ನಷ್ಟು ಗೋಶಾಲೆಗಳನ್ನು ಆರಂಭಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಇಲ್ಲಿನ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಸೋಮವಾರ ಮನವಿ ಸಲ್ಲಿಸಿ, ತಾಲೂಕಿನಲ್ಲಿ ಎದುರಾಗಿರುವ ತೀವ್ರ ಬರಗಾಲದಿಂದ ರೈತರಿಗೆ ಜಾನುವಾರುಗಳ ಪೋಷಣೆ ಕಷ್ಟವಾಗಿದೆ. ಬೆಳೆ ಇಲ್ಲದೆ, ಮೇವಿನ ಸಂಗ್ರಹವಿಲ್ಲದೆ ರೈತರು ಪರಿತಪಿಸುತ್ತಿದ್ದಾರೆ. ಮೇವು ಒದಗಿಸಲಾಗದೆ ದನ ಕರುಗಳನ್ನು ಕಸಾಯಿ ಖಾನೆಗೆ ದೂಡುವಂತ ಪರಿಸ್ಥಿತಿ ಎದುರಾಗಿದೆ. ತಾಲೂಕಿನಲ್ಲಿ ಆರಂಭಿಸಿರುವ ಮೂರು ಗೋಶಾಲೆಗಳಿಂದ ತಾಲೂಕಿನ ಜಾನುವಾರುಗಳಿಗೆ ಪೂರ್ಣ ಪ್ರಮಾಣದಲ್ಲಿ ಹಸಿವು ನೀಗಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕೂಡಲೇ ಇನ್ನಷ್ಟು ಗೋಶಾಲೆ ಆರಂಭಿಸಬೇಕು ಎಂದು ಕೋರಿದ್ದಾರೆ.

ಕಳೆದ ಎರಡು ತಿಂಗಳಿಂದ ಲೋಕಸಭಾ ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ಕಾಲ ಕಳೆದ ಅಧಿಕಾರಿಗಳು ಚುನಾವಣೆ ಮುಗಿದರೂ ಗೋಶಾಲೆ ಆರಂಭಕ್ಕೆ ಮುಂದಾಗಿಲ್ಲ. ಕೂಡಲೇ ಮತ್ತಷ್ಟು ಗೋಶಾಲೆ ಆರಂಭಿಸದಿದ್ದರೆ ಜಾನುವಾರುಗಳನ್ನು ತಾಲೂಕು ಆಡಳಿತ ಸೌಧಕ್ಕೆ ಕರೆ ತರಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕಳೆದ 15 ವರ್ಷಗಳಿಂದ ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿ ಉಂಟಾಗಿ ರೈತರು ಸಮಸ್ಯೆಗಳಿಗೆ ಸಿಲುಕಿದ್ದಾರೆ. ಜೊತೆಗೆ ಫಸಲಿಗೆ ಸೂಕ್ತ ಬೆಲೆ ಸಿಗದೆ ಸಾಲದ ಸುಳಿಯಲ್ಲಿ ಬದುಕುವಂತಾಗಿದೆ. ಯುವ ಪೀಳಿಗೆ ಕೃಷಿ ತೊರೆದು ಅನ್ಯ ಉದ್ಯೋಗದತ್ತ ಮುಖ ಮಾಡುತ್ತಿದ್ದು, ಸರ್ಕಾರ ಕೃಷಿ ಲಾಭದಾಯಕವಾಗಿಸಲು ಹೆಚ್ಚಿನ ಪ್ರೋತ್ಸಾಹ ನೀಡಬೇಕು. ತೆಲಂಗಾಣ ಮುಖ್ಯಮಂತ್ರಿ ಅಲ್ಲಿನ ರೈತರ ಬೆಳೆ ಸಾಲ ಮನ್ನಾ ಮಾಡುತ್ತೇನೆಂದು ಘೋಷಣೆ ಮಾಡಿದ್ದು, ರಾಜ್ಯ ಸರ್ಕಾರ ಕೂಡಲೇ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.

ಈ ವೇಳೆ ರೈತ ಸಂಘದ ಉಪಾಧ್ಯಕ್ಷ ಬಸವ ರೆಡ್ಡಿ, ತಿಪ್ಪೀರನ ಹಟ್ಟಿ ಚಂದ್ರಣ್ಣ, ಎಸ್. ಮಂಜಣ್ಣ, ವೀರೇಶ್, ಕನಕ ಶಿವಮೂರ್ತಿ, ಡಿ. ಕೃಷ್ಣಮೂರ್ತಿ, ವೀರಣ್ಣ, ಸಣ್ಣಪ್ಪ, ಬಸವರಾಜ, ಹಟ್ಟಿ ನಾಗರಾಜ, ಕೆ.ಚಂದ್ರಣ್ಣ. ಪ್ರಾಂತ್ಯ ರೈತ ಸಂಘದ ತಾಲೂಕು ಅಧ್ಯಕ್ಷ ದಾನಸೂರ ನಾಯಕ, ನಾಗರಾಜ, ಕಾಮಯ್ಯ, ತಿಪ್ಪೇಸ್ವಾಮಿಮ, ಕೆ.ಟಿ.ಗಂಗಾಧರ ಇದ್ದರು.